Advertisement
ಜನತಾ ಪರಿವಾರದಿಂದ ರಾಜಕೀಯ ಜೀವನ ಆರಂಭಿಸಿದ್ದ ಹೆಗ್ಡೆ ಅವರು ಸೋಲನ್ನೇ ಸವಾಲಾಗಿ ಸ್ವೀಕರಿಸಿ ಜನರ ನಡುವಿನಿಂದ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿಯೂ ಕಾರ್ಯನಿರ್ವಹಿಸಿದವರು. ಜನತಾ ಪರಿವಾರ ಒಡೆದು ಹೋದ ಸಂದರ್ಭ ಯಾವ ಬಣದತ್ತವೂ ವಾಲದೆ ಪಕ್ಷೇತರನಾಗಿ 2 ಬಾರಿ ಚುನಾವಣೆ ಎದುರಿಸಿ ಜನರ ಆಶೀರ್ವಾದ ಪಡೆದಿದ್ದರು.
Related Articles
Advertisement
ಇದೀಗ ಅಪಾರ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡಿರುವ ಹೆಗ್ಡೆ ಅವರಿಗೆ ಬಿಜೆಪಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಒಂದು ಪರೀಕ್ಷಾ ವೇದಿಕೆಯಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾ ಯ ವ್ಯಕ್ತಪಡಿಸಿದ್ದಾರೆ.
ಕಾರಣವಿಷ್ಟೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಗೆಲುವು ಸಾಧಿಸಿ ಈಗ ಸಚಿವರಾಗಿರುವ ಪ್ರಮೋದ್ ಮಧ್ವರಾಜ್ ಅವರು ಪ್ರತಿನಿಧಿಸುತ್ತಿರುವ ಉಡುಪಿ ವಿಧಾನಸಭಾ ಕ್ಷೇತ್ರ ಮತ್ತು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಪ್ರತಿನಿಧಿಸುತ್ತಿರುವ ಕಾಪು ಕ್ಷೇತ್ರ ವನ್ನು ಬಿಜೆಪಿಗೆ ಗೆಲ್ಲಿಸಿ ಕೊಡುವ ಮಹತ್ತರ ಹೊಣೆ ಹೆಗ್ಡೆಯವರಿಗೆ ನೀಡಲಾಗಿದೆ ಎಂದು ಹೇಳಲಾಗಿದೆ. ಉಡುಪಿ ಕ್ಷೇತ್ರದ ಗ್ರಾಮಾಂತರ ಭಾಗದಲ್ಲಿ ಹೆಗ್ಡೆ ಅವರು ಅಪಾರ ವರ್ಚಸ್ಸು ಹೊಂದಿದ್ದು ಇದಕ್ಕೆ ಅವರ ಬೆಂಬಲಿಗರೆ ಸಾಕ್ಷಿ .
ಕಾಪು ವಿಧಾನ ಸಭಾ ಕ್ಷೇತ್ರದಲ್ಲಿ ಹೆಗ್ಡೆ ಅವರು ಶಾಸಕರಾಗಿ ಪ್ರತಿನಿಧಿಸುತ್ತಿರುವ ಬ್ರಹ್ಮಾವರ ಕ್ಷೇತ್ರದ ಕೆಲ ಪಂಚಾಯತ್‌ಗಳು ವಿಲೀನಗೊಂಡಿದ್ದು ಅಲ್ಲಿಯೂ ಅವರ ಬೆಂಬಲಿಗರ ಪ್ರಭಾವ ಸಾಕಷ್ಟಿದೆ. ಸೊರಕೆ ಮತ್ತು ಸಚಿವ ಮಧ್ವರಾಜ್ ಅವರು ಈಗಾಗಲೇ ಕ್ಷೇತ್ರಗಳಲ್ಲಿ ಸಕ್ರಿಯವಾಗಿದ್ದು ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳಾಗುವುದು ಖಚಿತ ಎನ್ನಲಾಗಿದೆ. ಇಬ್ಬರಿಗೂ ಪ್ರಬಲ ಸ್ಪರ್ಧೆ ಒಡ್ಡಲು ಹೆಗ್ಡೆ ಅವರನ್ನು ಬಿಜೆಪಿ ಬಳಸಿಕೊಳ್ಳುವ ಸಾಧ್ಯತೆಗಳಿವೆ.
ಹೆಗ್ಡೆ ಅವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿಸುವ ಭವವಸೆಯನ್ನು ಬಿಜೆಪಿ ನೀಡಿದೆ ಎಂದು ಹೇಳಲಾಗಿದೆ.
ಈ ಹಿಂದೆ ಹೆಗ್ಡೆ ಅವರು ಕಾಂಗ್ರೆಸ್ ಸೇರಿದ್ದಾಗ ಅವರನ್ನು ಬೆಂಬಲಿಸುತ್ತಿದ್ದ ಕೆಲ ಮತದಾರರು ಬಿಜೆಪಿಯತ್ತ ವಾಲಿದ್ದರು. ಹೆಚ್ಚಿನ ಬೆಂಬಲಿಗರು ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್‌ನಲ್ಲಿದ್ದ ಕೆಲ ಮೂಲ ಕಾರ್ಯಕರ್ತರು ಬಿಜೆಪಿಗೆ ಪಕ್ಷಾಂತರ ಮಾಡಿದ್ದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕರಾವಳಿಯ 13 ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡನ್ನು ಮಾತ್ರ ಗೆದ್ದಿದ್ದ ಬಿಜೆಪಿ ಈಗಾಗಲೇ ಪಕ್ಷ ಸಂಘಟನೆ ಬಲ ಪಡಿಸುವ ಕಾರ್ಯ ನಡೆಸುತ್ತಿದೆ. ಒಂದೆಡೆ ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಬಿಜೆಪಿಗೆ ಮರಳುತ್ತಿರುವುದು, ಹೆಗ್ಡೆ ಬಿಜೆಪಿಗೆ ಸೇರ್ಪಡೆಯಾಗಿರುವುದು ಕೇಸರಿ ಪಾಳಯಕ್ಕೆ ಹೆಚ್ಚಿನ ಬಲ ತಂದುಕೊಡುವುದರಲ್ಲಿ ಅನುಮಾನವಿಲ್ಲ.
ಈಗಾಗಲೇ ಪಕ್ಷಾಂತರ ಪರ್ವ ಆರಂಭವಾಗಿದ್ದು ಕರಾವಳಿಯ ರಾಜಕೀಯದಲ್ಲಿ ಹೊಸ ಬದಲಾವಣೆಗೆ ಕಾರಣವಾಗುತ್ತದೊ ಕಾದು ನೋಡಬೇಕು.
*ಗೋರ್ಪಾಡಿ ವಿಷ್ಣುದಾಸ್ ಪಾಟೀಲ್