Advertisement

ಓಟ್‌ ಬ್ಯಾಂಕ್‌ ಲೆಕ್ಕಾಚಾರದ ಜಯಂತಿ

01:13 AM Jul 31, 2019 | Lakshmi GovindaRaj |

ಬೆಂಗಳೂರು: ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಸರ್ಕಾರಿ ಆಚರಣೆಯಾಗಿಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ನಿರ್ಧಾರವನ್ನು ರದ್ದು ಪಡಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಾಂಗ್ರೆಸ್‌ಗೆ ಶಾಕ್‌ ನೀಡಿದ್ದಾರೆ.

Advertisement

2016ರಲ್ಲಿ ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದ ಅಧಿಕೃತವಾಗಿ ಆಚರಣೆ ಮಾಡಲು ತೀರ್ಮಾನಿಸಿದಾಗಲೇ ಬಿಜೆಪಿ ಅದನ್ನು ಬಹಿರಂಗವಾಗಿ ವಿರೋಧಿಸಿ, ಪ್ರತಿಭಟನೆಯನ್ನೂ ನಡೆಸಿತ್ತು. ಆದರೆ, ಸಿದ್ದರಾಮಯ್ಯ ಪ್ರತಿಪಕ್ಷದ ವಿರೋಧವನ್ನೂ ಲೆಕ್ಕಿಸದೇ ಪ್ರತಿಷ್ಠೆಯಾಗಿ ಟಿಪ್ಪು ಜಯಂತಿಯನ್ನು ಸರ್ಕಾರದಿಂದ ಆಚರಿಸಿದ್ದರು.

ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಕೊಡಗಿನಲ್ಲಿ ದೊಡ್ಡ ಮಟ್ಟದ ಗಲಾಟೆಯಾಗಿ ಒಬ್ಬ ವ್ಯಕ್ತಿ ಸಾವಿಗೆ ಕಾರಣವಾದರೂ, ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಪಡಿಸುವ ಪ್ರಯತ್ನಕ್ಕೆ ಮುಂದಾಗಲಿಲ್ಲ. ಟಿಪ್ಪು ಜಯಂತಿಗೆ ಕಾರಣ: ಬಿಜೆಪಿ ಅಧಿಕಾರದ ಅವಧಿಯಲ್ಲಿ ವಿವಿಧ ಸಮಾಜಗಳ ಮಹಾಪುರುಷರ ಜಯಂತಿಗಳನ್ನು ಸರ್ಕಾರದಿಂದ ಆಚರಿಸಲು ತೀರ್ಮಾನ ಕೈಗೊಂಡು,

ಆಯಾ ಸಮಾಜಗಳ ಮತಗಳನ್ನು ಗಟ್ಟಿಗಳಿಸಿಕೊಂಡಿದೆ ಎಂಬ ಅಭಿಪ್ರಾಯ ಕಾಂಗ್ರೆಸ್‌ನಲ್ಲಿ ಮೂಡಿತ್ತು ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ಸಿದ್ದರಾಮಯ್ಯ ಅವರೂ ತಮ್ಮ ಅಧಿಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಬೇರೆ, ಬೇರೆ ಸಮುದಾಯಗಳ ಮಹಾಪುರುಷರ ಜಯಂತಿಗಳನ್ನು ಸರ್ಕಾರದ ವತಿಯಿಂದ ಆಚರಿಸಲು ಪ್ರಾರಂಭಿಸಿದರು.

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಟಿಪ್ಪು ಜಯಂತಿ ಆಚರಿಸಿದರೆ, ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರಿದಂತಾಗುತ್ತದೆ. ಅದರ ಮೂಲಕ ಮುಸ್ಲಿಂ ಸಮುದಾಯದ ಮತಗಳನ್ನು ಗಟ್ಟಿಗೊಳಿಸಿಕೊಳ್ಳಬಹುದು ಎನ್ನುವ ಲೆಕ್ಕಾಚಾರ ಇದರ ಹಿಂದೆ ಇತ್ತು ಎಂದು ಹೇಳಲಾಗುತ್ತಿದೆ.

Advertisement

ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್‌ಗಷ್ಟೇ ಅಲ್ಲ, ಜೆಡಿಎಸ್‌ಗೂ ತನ್ನ ನಿಷ್ಠೆಯನ್ನು ತೋರಿಸುತ್ತ ಬಂದಿದೆ. ಹೀಗಾಗಿ, ಆ ಸಮುದಾಯದ ಮತಗಳನ್ನು ಕಾಂಗ್ರೆಸ್‌ಗೆ ಗಟ್ಟಿಗೊಳಿಸುವ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿ ಆಚರಣೆಗೆ ಹಠಕ್ಕೆ ಬಿದ್ದು ಕಾಂಗ್ರೆಸ್‌ ಸರ್ಕಾರ ಮುಂದಾಗಿತ್ತು ಎಂದು ಹೇಳಲಾಗುತ್ತಿದೆ.

ಹಳೆ ಮೈಸೂರು ಪ್ರಾಬಲ್ಯದ ಗುರಿ:ವಿಶೇಷವಾಗಿ ಟಿಪ್ಪು ಸುಲ್ತಾನ್‌ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಪ್ರಚಲಿತ ರಾಜನಾಗಿದ್ದು, ಟಿಪ್ಪು ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡುವುದರ ಮೂಲಕ ಹಳೆ ಮೈಸೂರು ಭಾಗದಲ್ಲಿ ಅಹಿಂದ ಸಮುದಾಯಗಳ ಮತಗಳನ್ನು ರಾಜಕೀಯವಾಗಿ ಹಿಡಿತದಲ್ಲಿಟ್ಟುಕೊಳ್ಳುವ ಲೆಕ್ಕಾಚಾರವೂ ಇದರ ಹಿಂದೆ ಇತ್ತು ಎನ್ನಲಾಗುತ್ತಿದೆ.

ಟಿಪ್ಪು ಸುಲ್ತಾನ್‌ ಜಯಂತಿ ಮೂಲಕ ಕಾಂಗ್ರೆಸ್‌ ಹಿಂದೂ ವಿರೋಧಿ ಪಕ್ಷ ಎಂಬ ಭಾವನೆ ಮೂಡಿಸಲು ಬಿಜೆಪಿ ಯಶ ಪಡೆಯಿತು. ಆದರೆ, ಆ “ಕಳಂಕ’ದಿಂದ ಹೊರಬರುವ ಯಾವ ಪ್ರಯತ್ನವನ್ನೂ ಮಾಡದ ಕಾಂಗ್ರೆಸ್‌, ಅಲ್ಪಸಂಖ್ಯಾತರ ಮತಬ್ಯಾಂಕ್‌ ಮೇಲೆ ಕಣ್ಣಿಡುತ್ತಲೇ ಬಂತು.

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next