Advertisement

ಜಯಾನಂದ ಸಂಪಾಜೆಗೆ ಅರಸು ಸಂಕಲ ಪ್ರಶಸ್ತಿ

12:30 AM Jan 18, 2019 | |

ಮಂಜೇಶ್ವರದ ಸಂತಡ್ಕದ ವಿಜಯ ಫ್ರೆಂಡ್ಸ್‌ ಕ್ಲಬ್‌ ನೀಡುವ ಅರಸು ಸಂಕಲ ಪ್ರಶಸ್ತಿಗೆ ಈ ಸಲ ಖ್ಯಾತ ಪೀಠಿಕೆ ವೇಷಧಾರಿ ಜಯಾನಂದ ಸಂಪಾಜೆ ಆಯ್ಕೆಯಾಗಿದ್ದಾರೆ. ಜ.19ರಂದು ಪ್ರಶಸ್ತಿ ಪ್ರದಾನ ನಡೆಯಲಿದ್ದು, ಈ ಸಂದರ್ಭದಲ್ಲಿ ಹನುಮಗಿರಿ ಮೇಳದವರ ಯಕ್ಷಗಾನ ಬಯಲಾಟವೂ ಇದೆ. 

Advertisement

ಸಂಪಾಜೆ ತೆಂಕು ತಿಟ್ಟಿನ ಯಕ್ಷಗಾನದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಪೀಠಿಕೆ ವೇಷಧಾರಿ. ಜನ್ಮತಃ ಪಡೆದುಕೊಂಡ ಆಳಂಗ, ಆಕರ್ಷಕ ಕಂಠಸಿರಿ, ಸ್ಪಷ್ಟ ನಿರರ್ಗಳ ಮಾತುಗಳಿಂದ ಪೀಠಿಕೆ ವೇಷಗಳಿಗೆ ಜೀವ ತುಂಬುವ ಇವರ ಪ್ರೌಢಿಮೆ ಮುಕ್ತ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾನ್ಯವಾಗಿ ದೇವೇಂದ್ರನ ಪಾತ್ರ ಯಾವತ್ತೂ ಆರಕ್ಕೆ ಏರದ ಮೂರಕ್ಕೆ ಇಳಿಯದ ಅಷ್ಟೇನು ಗಮನ ಸೆಳೆಯದ ಪಾತ್ರ. ಆದರೆ ಜಯಾನಂದ ಸಂಪಾಜೆಯವರ ದೇವೇಂದ್ರ ಪ್ರೇಕ್ಷಕರಿಗೆ ಸಂತೋಷ ನೀಡುತ್ತದೆ. ಚುರುಕು ನಾಟ್ಯ, ಚುಟುಕು ಮಾತುಗಳಿಂದ ದೇವೇಂದ್ರ ಆಟದ ತರುವಾಯವೂ ನೆನಪಲ್ಲಿ ಉಳಿಯುತ್ತದೆ. ಜಯಾ ನಂದ ಅಭಿಮಾನಿಗಳಿಂದ ಅಭಿನವ ದೇವೇಂದ್ರ ಎಂಬ ಮೆಚ್ಚುಗೆಗೆ ಪಾತ್ರರಾವರು. ಎಲ್ಲಾ ರೀತಿಯ ಕಿರೀಟ ವೇಷಗಳನ್ನೂ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅರ್ಜುನ, ಶತ್ರುಘ್ನ, ರಕ್ತಬೀಜ, ಹಿರಣ್ಯಾಕ್ಷ, ಇಂದ್ರಜಿತು, ಕಾರ್ತವೀರ್ಯ, ಅರುಣಾಸುರ ಇತ್ಯಾದಿ ಖಳ ಹಾಗೂ ನಾಯಕ ಕಿರೀಟ ವೇಷಗಳಿಗೂ ನ್ಯಾಯವೊದಗಿಸಿದವರು. ಕೃಷ್ಣ, ವಿಷ್ಣು, ರಾಮ, ಶ್ರೀನಿವಾಸ ಮುಂತಾದ ಪುಂಡುವೇಷಗಳಲ್ಲೂ ಮೆರೆದವರು. ಅರಸಿನಮಕ್ಕಿ ಪರಮೇಶ್ವರ ಆಚಾರ್ಯ ಜಯಾನಂದರಿಗೆ ನಾಟ್ಯ ಕಲಿಸಿದ ಗುರು. ಜಬ್ಟಾರ್‌ ಸಮೋ ಸಂಪಾಜೆಯವರಿಂದ ಅರ್ಥಾಭ್ಯಾಸ ಗೈದವರು.

ಯೋಗೀಶ ರಾವ್‌ 

Advertisement

Udayavani is now on Telegram. Click here to join our channel and stay updated with the latest news.

Next