ಕುಂದಾಪುರ: ನಾವೆಲ್ಲ ನಟನೆ ಮಾಡುತ್ತಿದ್ದ ಚಿತ್ರರಂಗದಲ್ಲಿ ಈ ರೀತಿ ಇರಲಿಲ್ಲ. ನಾವು ಸುವರ್ಣ ಯುಗದಲ್ಲಿದ್ದೇವೆ. ಡಾ| ರಾಜ್‌ಕುಮಾರ್ ಅವರಂತಹ ಮಹಾನ್ ನಟರ ಜತೆಗೆ ನಾನು ಅಭಿನಯಿಸಿದ್ದೇನೆ. 75 ಸಿನೆಮಾಗಳಲ್ಲಿ ನಟಿಸಿದ್ದು, 5 ಚಿತ್ರಗಳನ್ನು ನಿರ್ಮಿಸಿದ್ದೇನೆ. 40 ವರ್ಷಗಳಿಗೂ ಹೆಚ್ಚಿನ ನನ್ನ ಸಿನಿ ಪಯಣದಲ್ಲಿ ಯಾವತ್ತೂ ಯಾರಿಂದಲೂ ಲೈಂಗಿಕ ಕಿರುಕುಳದಂತಹ ಅನುಭವ ಆಗಿಲ್ಲ ಎಂದು ಒಂದು ಕಾಲದ ಜನಪ್ರಿಯ ನಟಿ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಹೇಳಿದರು.
ನಾಗೂರಿನಲ್ಲಿ ಚುನಾವಣಾ ಪ್ರಚಾರ ಸಭೆಗೆ ಆಗಮಿಸಿದ ಸಚಿವೆ ಡಾ| ಜಯಮಾಲಾ ಪತ್ರಕರ್ತರೊಂದಿಗೆ ಮಾತನಾಡಿ, ದೇಶಾದ್ಯಂತ ಇತ್ತೀಚಿನ ದಿನಗಳಲ್ಲಿ ಸಂಚಲನ ಮೂಡಿಸಿರುವ ಮೀ ಟು ಅಭಿಯಾನದ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿದ್ದಾಗ ಸಂಧಾನ ಸಮಿತಿಯೆಲ್ಲ ಕ್ರಿಯಾಶೀಲವಾಗಿತ್ತು ಎಂದರು.
ಮೀ ಟು ಒಂದು ಹೆಣ್ಣಿನ ಅಭಿಪ್ರಾಯ ಅಭಿವ್ಯಕ್ತಿಗೆ ಉತ್ತಮ ವೇದಿಕೆ. ಇದರಿಂದ ಹೆಣ್ಣಿಗೆ ಬಲ ಬಂದಿದ್ದು, ತನ್ನ ಮಾನಸಿಕ ಹಿಂಸೆಯನ್ನು ಹೊರಗೆಡಹಲು ಇದೊಂದು ಉತ್ತಮ ಅವಕಾಶ. ಆದರೆ ಇದನ್ನು ಪುರುಷನೊಬ್ಬನ ಚಾರಿತ್ಯ ಹರಣ ಮಾಡಲು ದುರುಪಯೋಗಪಡಿಸಿಕೊಳ್ಳಬಾರದು ಎಂದ ಅವರು, ಅರ್ಜುನ್ ಸರ್ಜಾ ಸರಳ, ಸಜ್ಜನ ವ್ಯಕ್ತಿ ಎಂದು ಅಭಿಪ್ರಾಯಪಟ್ಟರು.
ಮರಳು: ಎಲ್ಲರ ಸಹಕಾರ ಅಗತ್ಯ
ಸಿಆರ್‌ಝಡ್ ವ್ಯಾಪ್ತಿಯಲ್ಲಿ 68 ಮಂದಿಗೆ ತೆಗೆಯಲು ಅನುಮತಿ ನೀಡಿದರೂ ಸಾಂಪ್ರದಾಯಿಕ ಮರಳು ತೆಗೆಯುವವರು ಇದು ಬೇಡ ಎನ್ನುತ್ತಿದ್ದಾರೆ. ಇನ್ನೀಗ ಟೆಂಡರ್ ಆಗುವವರೆಗೆ ಕಾಯಬೇಕು. ನಮ್ಮ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಮರಳುಗಾರಿಕೆ ಆರಂಭಕ್ಕೆ ಎಲ್ಲರ ಸಹಕಾರ ಅಗತ್ಯ ಎಂದ ಸಚಿವರು, ಯಾವ ರೀತಿಯ ಹೋರಾಟ ಸಂಘಟಿಸಿದರೂ ಕಾನೂನನ್ನು ಪಾಲಿಸುವುದು ಎಲ್ಲರ ಕರ್ತವ್ಯ ಎಂದರು.