Advertisement
ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಆವರಣದ 2 ಎಕರೆ ವ್ಯಾಪ್ತಿಯಲ್ಲಿ ವಿಶಾಲವಾಗಿ ನಿಂತಿರುವ ಈ ಜಯಲಕ್ಷ್ಮಮ್ಮಣ್ಣಿ ಅರಮನೆ 114 ವರ್ಷಗಳ ತನ್ನದೇ ಇತಿಹಾಸ ಹಾಗೂ ಪರಂಪರೆ ಹೊಂದಿದೆ. ಆದರೆ, ಕಳೆದೊಂದು ದಶಕದಿಂದ ಸಮರ್ಪಕ ನಿರ್ವಹಣೆ ಹಾಗೂ ಕಾಳಜಿಗೆ ಒಳಪಡದೇ ಅರಮನೆಯ ಒಂದೊಂದು ಭಾಗದ ಚಾವಣಿ ಕುಸಿದು ಬೀಳುವ ಹಂತ ತಲುಪಿದೆ.
Related Articles
2001ರಲ್ಲಿ ಪುನಶ್ಚೇತನ
1959ರಲ್ಲಿ ಕುವೆಂಪು ಅವರು ಮೈಸೂರು ವಿವಿ ಕುಲಪತಿಗಳಾದಾಗ ರಾಜವಂಶಸ್ಥರಿಂದ 10 ಲಕ್ಷಕ್ಕೆ ಈ ಅರಮನೆ ಸೇರಿ 300 ಎಕರೆ ಭೂಮಿ ಖರೀದಿಸಿದ್ದರು. ಅದೇ ಇಂದು ಮಾನಸ ಗಂಗೋತ್ರಿಯಾಗಿದೆ. ನಂತರ ಈ ಕಟ್ಟಡದ ಒಂದು ಭಾಗದಲ್ಲಿ ಸ್ನಾತಕೋತ್ತರ ತರಗತಿ ಹಾಗೂ ಉಳಿದ 2 ಭಾಗದಲ್ಲಿ ವಸ್ತುಸಂಗ್ರಹಾಲಯ ಮಾಡಲಾಗಿತ್ತು. ಆದರೆ, ಕಟ್ಟಡ ದುಸ್ಥಿತಿ ತಲುಪಿದಾಗ, ಎಸ್.ಎಂ. ಕೃಷ್ಣ ಅವರು ಮುಖ್ಯ ಮಂತ್ರಿಯಾಗಿದ್ದ ವೇಳೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, ಅರಮನೆ ಪುನಶ್ಚೇತನಕ್ಕೆ 2 ಕೋಟಿ ರೂ. ಹಣ ನೀಡಿದ್ದರು. 2 ವರ್ಷಗಳ ಪುನಶ್ಚೇತನ ಕಾರ್ಯದ ಬಳಿಕ ಜಯಲಕ್ಷ್ಮಮ್ಮಣ್ಣಿ ಅರಮನೆ ಮರುಜೀವ ಪಡೆಯಿತಾದರೂ, ಆಡಳಿತ ವ್ಯವಸ್ಥೆ ನಿರ್ಲಕ್ಷ್ಯದಿಂದ ಮತ್ತೆ ಅವನತಿ ಹಾದಿಯತ್ತ ಸಾಗಿದೆ.
ಸದ್ಯದ ಸ್ಥಿತಿ ಹೇಗಿದೆ?
ಮೈಸೂರು ವಿವಿ ಅಧೀನದಲ್ಲಿರುವ ಈ ಅರಮನೆ ಯನ್ನು ಜಾನಪದ ವಸ್ತು ಸಂಗ್ರಹಾಲಯವನ್ನಾಗಿ 1967ರಲ್ಲಿ ಮಾಡಲಾಗಿದೆ. ಕರ್ನಾಟಕ ಇತಿಹಾಸ, ಸಂಸ್ಕೃತಿ, ಭಾಷೆ ಪರಿಚಯಿಸುವುದೊಂದಿಗೆ ಜಾನಪದ ಲೋಕವನ್ನೇ ಇಲ್ಲಿ ಸೃಷ್ಟಿ ಮಾಡ ಲಾಗಿದೆ. ಪ್ರತಿದಿನ ಈ ಅರಮನೆಗೆ ಜಾನಪದ ವಸ್ತುಸಂಗ್ರಹಾಲಯ ವೀಕ್ಷಿಸಲು 100ಕ್ಕೂ ಹೆಚ್ಚು ಮಂದಿ ಆಗಮಿಸುತ್ತಾರೆ. ದೇಶ ಹಾಗೂ ವಿದೇಶ ಗಳಿಂದಲೂ ಇಲ್ಲಿಗೆ ಭೇಟಿ ನೀಡುತ್ತಿರುವುದು ಗಮನಾರ್ಹ. ಆದರೆ, ವಿವಿ ಆಡಳಿತ ಮತ್ತು ಪುರಾತತ್ವ ಇಲಾಖೆ ದಿವ್ಯನಿರ್ಲಕ್ಷ್ಯದಿಂದ ಅರ ಮನೆಯ ಬಹುಪಾಲು ಶಿಥಿಲಾವಸ್ಥೆ ತಲುಪಿದ್ದ ತನ್ನ ಅವನತಿ ದಿನಗಳನ್ನು ಎಣಿಸುತ್ತಿದೆ. ಅರಮನೆ ಮೇಲಂತಸ್ಥಿನ ಚಾವಣಿ ಮಳೆ ನೀರಿನ ಸೋರಿಕೆ ಯಿಂದ ಸಂಪೂರ್ಣವಾಗಿ ಹಾಳಾಗಿದೆ. ಇನ್ನೇನು ಕುಸಿದು ಬೀಳುವಂತಿದೆ. ಜತೆಗೆ ಮೇಲತಂಸ್ಥಿನಲ್ಲಿ ಇಟ್ಟಿರುವ ಜಾನಪದ ಸಂಗ್ರಹಾಲಯದ ಅಪರೂಪದ ವಸ್ತುಗಳಿಗೂ ಆಪತ್ತು ಬಂದಿದೆ. ಚಾವಣಿ ಕುಸಿದು ಬೀಳುತ್ತದೆ ಎಂಬ ಕಾರಣಕ್ಕಾಗಿ ಮೇಲಂತಸ್ಥಿನ ವೀಕ್ಷಣೆ ನಿಷೇಧಿಸಲಾಗಿದೆ.
ಸರ್ಕಾರಕ್ಕೆ 400 ಪುಟಗಳ ವರದಿ
ಜಯಲಕ್ಷ್ಮಮ್ಮಣ್ಣಿ ಅರಮನೆ ಮೇಲಂತಸ್ಥಿನಲ್ಲಿದ್ದ ಜಾನಪದ ವಸ್ತು ಸಂಗ್ರಹಾಲಯದ ಅಮೂಲ್ಯ ವಸ್ತುಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದ್ದೇವೆ. ಜೊತೆಗೆ ಅರಮನೆ ಶಿಥಿಲವಾಗಿರುವುದರಿಂದ ಅದರ ದುರಸ್ತಿಗಾಗಿ ಸರ್ಕಾರಕ್ಕೆ 400 ಪುಟಗಳ ಸಮಗ್ರ ವರದಿ ನೀಡಿದ್ದೇವೆ. ತಾತ್ಕಲಿಕವಾಗಿ ಮಳೆ ನೀರು ಅರಮನೆ ಚಾವಣಿಗೆ ಬೀಳದಂತೆ ಶೇಡ್ ಹಾಕಲು ನಿರ್ಧರಿಸಿದ್ದು, ಪುರಾತತ್ವ ಇಲಾಖೆ ಅಧಿಕಾರಿಗಳು ಅನುಮತಿ ನೀಡಿದ ನಂತರ ಕಾರ್ಯಾರಂಭ ಮಾಡುತ್ತೇವೆಂದು ಮೈಸೂರು ವಿವಿ ಕುಲಸಚಿವರಾದ ಪ್ರೊ.ಲಿಂಗರಾಜ ಗಾಂಧಿ ಮಾಹಿತಿ ನೀಡಿದ್ದಾರೆ.
ಸತೀಶ್ ದೇಪುರ
Advertisement