Advertisement

ಜಯದೇವ ಶ್ರೀಗಳು ಮಹಾನ್‌ ಬಸವ ಚೇತನ

03:34 PM Oct 08, 2018 | Team Udayavani |

ದಾವಣಗೆರೆ: ಜಯದೇವಶ್ರೀಗಳವರು ಸಮಾನತೆ, ಮಾನವೀಯತೆ, ಆಧ್ಯಾತ್ಮಿಕತೆಯ ಪ್ರತೀಕವಾಗಿದ್ದ ಮಹಾನ್‌ ಬಸವ ಚೇತನ ಎಂದು ಚಿತ್ರದುರ್ಗ ಬೃಹನ್ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಬಣ್ಣಿಸಿದ್ದಾರೆ.

Advertisement

ಶ್ರೀ ಶಿವಯೋಗಿ ಮಂದಿರದ ಆವರಣದಲ್ಲಿ ಭಾನುವಾರ ಸಂಜೆ ನಡೆದ ಜಯದೇವಶ್ರೀಗಳ 62ನೇ ರಥೋತ್ಸವದ ನಂತರ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಸವಾದಿ ಶರಣರು ಪ್ರತಿಪಾದಿಸಿದ ಸಮಾನತೆಯನ್ನು ಚಾಚೂ ತಪ್ಪದೆ ಪಾಲಿಸುವ ಮೂಲಕ ಅನುಷ್ಠಾನಕ್ಕೆ ತಂದವರು ಜಯದೇವಶ್ರೀಗಳು ಎಂದರು.
 
ಸ್ವಾಮೀಜಿಗಳು, ಮಠಾಧೀಶರರು ಸಮಾನತೆ, ಮಾನವೀಯತೆ ಮತ್ತು ಆಧ್ಯಾತ್ಮಕತೆ ಅಂಶಗಳನ್ನು ಪಾಲಿಸಬೇಕು. ಜಯದೇವಶ್ರೀಗಳು ಆ ಮೂರು ಅಂಶಗಳನ್ನು ಪಾಲನೆ ಮಾಡಿದವರು. ಅಸ್ಪೃಶ್ಯ ಸಮುದಾಯದ ಹಲವಾರು ಸಮಾಜ ಬಾಂಧವರಿಗೆ ಬೃಹನ್ಮಠದ ಬಾಗಿಲು ತೆರೆದು, ಮನಪೂರ್ವಕವಾಗಿ ಸ್ವಾಗತಿಸಿದವರು ಜಯದೇವ ಜಗದ್ಗುರುಗಳು. ಆ ಕಾರ್ಯವನ್ನು ಕಂಡಂತಹ ಅವರ ಸಮಕಾಲೀನ ಸ್ವಾಮೀಜಿಯೊಬ್ಬರು, ಬೃಹನ್ಮಠ ಹರಿಜನರಿಗಾಗಿ ಬಾಗಿಲು ತೆರೆಯಿತು… ಎಂದು ವ್ಯಂಗ್ಯವಾಡಿದ್ದರು ಎಂದು ತಿಳಿಸಿದರು.

ಬೃಹನ್ಮಠದಲ್ಲಿ ಕಾಳು ಆಯುವ ಕೆಲಸ ಮಾಡುತ್ತಿದ್ದ ತುಂಬು ಗರ್ಭಿಣಿಯೊಬ್ಬರು ಅಕ್ಕಿಯ ಕಾಳನ್ನು ಕದ್ದ ವಿಷಯ ತಿಳಿದಂತಹ ಜಯದೇವಶ್ರೀಗಳು ಆ ಮಹಿಳೆ ಮಾತ್ರವಲ್ಲ ಗರ್ಭದಲ್ಲಿದ್ದ ಮಗುವಿಗೂ ತಲಾ ಒಂದೊಂದು ಸೇರು ಅಕ್ಕಿಯನ್ನು ಕೊಡಿಸುವ ಮೂಲಕ ಮಾನವೀಯತೆ ತೋರಿದವರು. ರಾಷ್ಟ್ರನಾಯಕ ಎಸ್‌. ನಿಜಲಿಂಗಪ್ಪ, ಬಿ.ಡಿ. ಜತ್ತಿ, ಜೆ.ಎಚ್‌. ಪಟೇಲ್‌ರಿಗೆ ಆಶೀರ್ವದಿಸಿದವರು. ಬಿ. ಬಸವಲಿಂಗಪ್ಪ ಅವರಂತಹ ಅಪ್ಪಟ ನಾಸ್ತಿಕವಾದಿಗೂ ವಿದ್ಯಾಭ್ಯಾಸಕ್ಕೆ ನೆರವು ನೀಡಿದವರು. ಜಯದೇವಶ್ರೀಗಳು ಉಳ್ಳವರಿಗೆ ಮಾತ್ರವಲ್ಲ ಪ್ರತಿಯೊಬ್ಬರಿಗೆ ಆಶೀರ್ವದಿಸಿದವರು ಎಂದು ತಿಳಿಸಿದರು. 

ಜಯದೇವಶ್ರೀಗಳು ಎಲ್ಲ ಸಮಾಜದವರನ್ನು ಒಪ್ಪಿಕೊಂಡು, ಅಪ್ಪಿಕೊಂಡಿದ್ದ ಕಾರಣಕ್ಕಾಗಿಯೇ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರೇ ಜಯದೇವಶ್ರೀಗಳ ಭೇಟಿ ಮಾಡಲಿಕ್ಕೆ ಬಂದಿದ್ದರು. ಹಾವೇರಿಯಲ್ಲಿ ನಡೆದ ಅವರಿಬ್ಬರ ಭೇಟಿ,
ಒಂದೇ ವೇದಿಕೆ ಹಂಚಿಕೊಂಡಿದ್ದು, ಜಯದೇವ ಜಗದ್ಗುರುಗಳು ಗಾಂಧೀಜಿಯವರನ್ನೇ ಪ್ರಶ್ನೆ ಮಾಡಿದ್ದು ಎಲ್ಲವೂ ಅಮೃತ ಗಳಿಗೆ. 

ಜಯದೇವ ಜಗದ್ಗುರುಗಳು ಬಸವಣ್ಣನವರನ್ನು ಸಾಕ್ಷಾತ್ಕರಿಸಿಕೊಂಡಿದ್ದ ಕಾರಣಕ್ಕಾಗಿಯೇ ಅವೆಲ್ಲವೂ ಸಾಧ್ಯವಾಯಿತು ಎಂಬುದನ್ನ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಜಯದೇವ ಶ್ರೀಗಳು ಮಾಡುತ್ತಿದ್ದಂತಹ ಲಿಂಗಪೂಜೆ, ಶಿವಯೋಗ ಸಾಧನೆಯನ್ನು ಕಣ್ತುಂಬಿಸಿಕೊಳ್ಳಲು ಜನರು ಸೇರುತ್ತಿದ್ದರು.

Advertisement

ಆಧ್ಯಾತ್ಮಕತೆಯ ಮೂಲಕ ಜಯದೇವ ಜಗದ್ಗುರುಗಳು ಜನರನ್ನು ಜಾಗೃತಿ ಗೊಳಿಸುತ್ತಿದ್ದರು. ಜಯದೇವ ಜಗದ್ಗುರುಗಳು ಸ್ವಾಮಿಗಳಾಗಲಿಕ್ಕೆ ಸ್ವಾಮಿಗಳಾದವರಲ್ಲ. ಸಮಾಜದ ಉತ್ಕರ್ಷ, ಸುಖವೇ ತಮ್ಮ ಸುಖ ಎಂದು ಭಾವಿಸಿದವರು. ಸಮಾಜವೇ ದೇವರು, ಸಮಾಜವೇ ನಮ್ಮ ಉಸಿರು ಎಂಬ ಸಿದ್ಧಾಂತಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಬಸವಣ್ಣನವರ ಸಾಮಾಜಿಕ ಸ್ವರೂಪವಾಗಿ, ಚಲನಶೀಲ, ಸೃಜನಶೀಲ ವ್ಯಕ್ತಿತ್ವದಿಂದ ಈ ಕ್ಷಣಕ್ಕೂ ಎಲ್ಲರ ಮನದ ಭಾವವಾಗಿ ಚಿರಸ್ಥಾಯಿ ಯಾಗಿ ಉಳಿದಿದ್ದಾರೆ ಎಂದು ಸ್ಮರಿಸಿದರು.

ಸಮ್ಮುಖದ ನುಡಿಗಳಾಡಿದ ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಜಯದೇವ ಜಗದ್ಗುರುಗಳು ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಜಗತ್ತಿನ ಸ್ವಾತಿ ಮುತ್ತು. ಅವರ ದೂರದೃಷ್ಟಿಯ ಫಲವಾಗಿಯೇ ನಾಡಿನಾದ್ಯಾಂತ ಉಚಿತ ಪ್ರಸಾದ ನಿಲಯಗಳು ಸ್ಥಾಪಿತವಾದವು. ಅವರು ವ್ಯಕ್ತಿಗತ ಮತ್ತು ಸಾಮಾಜಿಕವಾದ ಸೋಮಾರಿತನವ ದೂರ
ಮಾಡಲು ಪರಿಶ್ರಮ ಪಟ್ಟವರು. ಅಂದೇ ಜಾತ್ಯತೀತ ಮಠ ಮತ್ತು ಸಮಾಜ ಕಟ್ಟಿದವರು. ಜಯದೇವ ಜಗದ್ಗುರುಗಳ ಹಾದಿಯಲ್ಲೇ ಮುನ್ನಡೆಯುತ್ತಿರುವ ಶ್ರೀ ಶಿವಮೂರ್ತಿ ಮುರುಘಾ ಶರಣರು ಸಹ ಸ್ವಾತಿ ಮುತ್ತು ಎಂದು ಬಣ್ಣಿಸಿದರು.

ನೀಲಗುಂದದ ಶ್ರೀ ಗುಡ್ಡದ ಚನ್ನಬಸವ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಚಿಂದೋಡಿ ಬಂಗಾರೇಶ್‌, ಕದಳಿ ಮಹಿಳಾ ವೇದಿಕೆ
ಅಧ್ಯಕ್ಷೆ ಪ್ರಮೀಳಾ ನಟರಾಜ್‌, ವಚನ ಗಾಯಕಿ ಐಶ್ವರ್ಯರಾಣಿ ಬೂದಿಹಾಳ್‌ ಇತರರು ಇದ್ದರು. ಶಿವಕುಮಾರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next