ಬೆಂಗಳೂರು: ಕಳೆದ 16 ವರ್ಷಗಳಿಂದ ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕರಾಗಿರುವ ಡಾ| ಸಿ.ಎನ್. ಮಂಜುನಾಥ್ ಅವರನ್ನು 2024ರ ಜನವರಿ ವರೆಗೆ ಮುಂದುವರಿಸಲು ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ.
ಜಯದೇವ ಆಸ್ಪತ್ರೆ ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ಮಂಗಳವಾರ ರಾತ್ರಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವನ್ನು ಅಧಿಕೃತಗೊಳಿಸಲಿದೆ.
ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ನಿರ್ಮಾಣ ಕಾಮಗಾರಿ ಚಾಲ್ತಿಯಲ್ಲಿದ್ದು, ಮಂಜುನಾಥ್ ಅವರ ನೇತೃತ್ವದಲ್ಲೇ ಈ ಕಾಮಗಾರಿ ಶುರುವಾಗಿತ್ತು. ಈ ಕಾಮಗಾರಿ ಪೂರ್ಣಗೊಳ್ಳಲು 8-10 ತಿಂಗಳು ಸಮಯಾವಕಾಶ ಬೇಕಿತ್ತು. ಇದೀಗ 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎನ್ನುವ ಷರತ್ತಿನೊಂದಿಗೆ ಮಂಜುನಾಥ್ ಅವರ ಅಧಿಕಾರಾವಧಿಯನ್ನು 2024 ರ ಜನವರಿವರೆಗೆ ವಿಸ್ತರಣೆ ಮಾಡಲಾಗಿದೆ.
ಕಲಬುರಗಿಯಲ್ಲಿಯೂ ಜಯದೇವ ಆಸ್ಪತ್ರೆ ಉದ್ಘಾಟನೆಗೊಂಡರೆ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ, ಬೀದರ್ ಭಾಗಗಳಿಂದ ಬೆಂಗಳೂರಿನವರೆಗೆ ಚಿಕಿತ್ಸೆ ಅರಸಿ ಬರುವ ಹೃದ್ರೋಗಿಗಳಿಗೆ ಅನುಕೂಲವಾಗಲಿದೆ. ಬೆಂಗಳೂರಿನ ಜಯದೇವ ಆಸ್ಪತ್ರೆ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ಹೀಗಾಗಿ ತ್ವರಿತಗತಿಯಲ್ಲಿ ಕಲಬುರಗಿ ಆಸ್ಪತ್ರೆ ಕಾಮಗಾರಿಯನ್ನೂ ಪೂರ್ಣಗೊಳಿಸಿ ಡಾ.ಮಂಜುನಾಥ್ ಅವರು ನಿರ್ದೇಶಕರಾಗಿ ಹುದ್ದೆಯಲ್ಲಿ ಇರುವಾಗಲೇ ಉದ್ಘಾಟನೆ ಮಾಡಬೇಕೆಂಬ ಆಶಯವನ್ನು ಆಡಳಿತ ಮಂಡಳಿ ವ್ಯಕ್ತಪಡಿಸಿದೆ.