Advertisement

ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಪಂಚತಾರಾ ಸೌಲಭ್ಯ

07:31 AM Mar 09, 2019 | |

ಮೈಸೂರು: ಪಂಚತಾರಾ ಸೌಲಭ್ಯದೊಂದಿಗೆ ಎರಡು ತಿಂಗಳ ಹಿಂದೆ ಆರಂಭವಾಗಿರುವ ಮೈಸೂರಿನ ಶ್ರೀಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆ, ಈ ಭಾಗದ ಜನರಿಗೆ ಸೂಕ್ತಕಾಲದಲ್ಲಿ ಗುಣಮಟ್ಟದ ಚಿಕಿತ್ಸೆ ಒದಗಿಸುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಈ ಸುಸಜ್ಜಿತ ಆಸ್ಪತ್ರೆ ಕಟ್ಟಡ 220 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಸಿದ್ದರಾಮಯ್ಯ ಸರ್ಕಾರ 150 ಕೋಟಿ ಅನುದಾನ ನೀಡಿದರೆ, ಜಯದೇವ ಹೃದ್ರೋಗ ಸಂಸ್ಥೆ ತನ್ನ ಆಂತರಿಕ ಸಂಪನ್ಮೂಲದಿಂದ 70 ಕೋಟಿ ಅನುದಾನವನ್ನು ಭರಿಸಿರುವುದು ಹೆಮ್ಮೆಯ ವಿಷಯ ಎಂದರು.

400 ಹಾಸಿಗೆಗಳ ಸಾಮರ್ಥ್ಯವುಳ್ಳ ಈ ನೂತನ ಆಸ್ಪತ್ರೆಯಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳೂ ದೊರೆಯಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಆರೋಗ್ಯ ಕಾರ್ಯಕ್ರಮಗಳು, ಖಾಸಗಿ ವಿಮೆ ಸೌಲಭ್ಯದಡಿ ಚಿಕಿತ್ಸೆ ನೀಡುತ್ತಿದ್ದು, ಆಸ್ಪತ್ರೆಯಲ್ಲಿ 13 ಮಂದಿ ಹೃದ್ರೋಗ ತಜ್ಞರು, ಆರು ಹೃದಯ ತಜ್ಞರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮೈಸೂರು, ಮಂಡ್ಯ, ಚಾಮರಾಜ ನಗರ, ಕೊಡಗು ಜಿಲ್ಲೆಯ ಜನರಿಗೆ ಮೈಸೂರಿನ ಆಸ್ಪತ್ರೆಯಿಂದ ಅನುಕೂಲವಾಗಿದೆ. ಬೆಂಗಳೂರಿಗೆ ಹತ್ತಿರವಿರುವ ಚನ್ನಪಟ್ಟಣದವರು ಸಂಚಾರದಟ್ಟಣೆ ಕಾರಣದಿಂದಾಗಿ ಚಿಕಿತ್ಸೆಗಾಗಿ ಮೈಸೂರಿಗೆ ಬರುತ್ತಿದ್ದಾರೆ ಎಂದು ತಿಳಿಸಿದರು. 

ತಿಂಗಳಲ್ಲಿ ಆರಂಭ: 700 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಮೇಲೆ ಸಾಕಷ್ಟು ಒತ್ತಡ ಇರುವುದರಿಂದ ಇನ್ಫೋಸಿಸ್‌ ಪ್ರತಿಷ್ಠಾನದಿಂದ 300 ಹಾಸಿಗೆ ಸಾಮರ್ಥ್ಯದ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಇದರೊಂದಿಗೆ ಜಯದೇವ ಆಸ್ಪತ್ರೆ ಒಂದು ಸಾವಿರ ಹಾಸಿಗೆ ಸಾಮರ್ಥ್ಯ ಹೊಂದಿದ ದಕ್ಷಿಣ ಭಾರತದ ಏಕೈಕ ಆಸ್ಪತ್ರೆಯಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Advertisement

ಕಲಬುರ್ಗಿಯಲ್ಲಿ  ಪ್ರಸ್ತುತ 125 ಹಾಸಿಗೆ ಸಾಮರ್ಥ್ಯದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದ್ದು, ದಿನೇ ದಿನೇ ಆಸ್ಪತ್ರೆಯ ಮೇಲೆ ಒತ್ತಡ ಹೆಚ್ಚುತ್ತಿರುವ ಕಾರಣ 7ಎಕರೆ ಜಾಗದಲ್ಲಿ 300 ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ಮೂರ್‍ನಾಲ್ಕು ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.

ರಾಷ್ಟ್ರದಲ್ಲಿ ಎನ್‌ಎಬಿಎಚ್‌ ರ್‍ಯಾಂಕಿಂಗ್‌ ಪಡೆದಿರುವ ಏಕೈಕ ಆಸ್ಪತ್ರೆ ನಮ್ಮ ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆ ಎಂದರು. ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆ ಮೈಸೂರಿನ ಮುಖ್ಯಸ್ಥ ಡಾ.ಕೆ.ಎಸ್‌.ಸದಾನಂದ, ಪ್ರಾದೇಶಿಕ ವೈದ್ಯಾಧಿಕಾರಿ ಡಾ.ಪಾಂಡುರಂಗ ಹಾಜರಿದ್ದರು.

ದೈಹಿಕ ಚಟುವಟಿಕೆ ಇಲ್ಲದ್ದಕ್ಕೆ ಹೃದ್ರೋಗ ಸಂಬಂಧಿ ಕಾಯಿಲೆ: ವಾಯುಮಾಲಿನ್ಯ, ದೈಹಿಕ ಚಟುವಟಿಕೆಗಳಿಲ್ಲದಿರುವುದು, ಒತ್ತಡದ ಜೀವನ ಶೈಲಿಯಿಂದಾಗಿ 40 ವರ್ಷದೊಳಗಿನವರು ಹೃದಯ ಸಂಬಂಧಿ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ.  ದೇಶದ ದೆಹಲಿ, ನಾಗಪುರ, ಬನಾರಸ್‌, ಕರ್ನಾಟಕದಲ್ಲಿ ಬೆಂಗಳೂರು ಹಾಗೂ ತುಮಕೂರು ವಲಯದಲ್ಲಿ ಅತಿ ಹೆಚ್ಚಿನ ವಾಯು ಮಾಲಿನ್ಯವಿದ್ದು,

ಈ ವಾಯುಮಾಲಿನ್ಯವೇ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಿದೆ. ಜೊತೆಗೆ ಭಾರತದಲ್ಲಿ ಶೇ.52ರಷ್ಟು ಮಂದಿ ದೈಹಿಕ ಚಟುವಟಿಕೆಗಳಿಲ್ಲದಿರುವುದೂ ಹೃದ್ರೋಗಕ್ಕೆ ಕಾರಣವಾಗಿದೆ. ಇದಕ್ಕಾಗಿ ನಿತ್ಯ ಕನಿಷ್ಠ 30 ನಿಮಿಷವಾದರೂ ನಡೆಯುವ ಅಗತ್ಯವಿದೆ. ಸೋಷಿಯಲ್‌ ಮೀಡಿಯಾದಿಂದಾಗಿ ಯುವ ವೈದ್ಯರಲ್ಲೂ ವೃತ್ತಿಯ ಒತ್ತಡ ಹೆಚ್ಚಿದೆ ಎಂದು ಡಾ.ಸಿ.ಎನ್‌.ಮಂಜುನಾಥ್‌ ಹೇಳಿದರು.

ಮಾಸ್ಟರ್‌ ಹೆಲ್ತ್‌ ಚೆಕ್‌ ಅಪ್‌: ಮಾಸ್ಟರ್‌ ಹೆಲ್ತ್‌ ಚೆಕ್‌ ಅಪ್‌ನಲ್ಲಿ 2 ಗಂಟೆ ಅವಧಿಯಲ್ಲಿ ಹೃದ್ರೋಗಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ತಪಾಸಣೆ ಮಾಡಲಾಗುತ್ತದೆ. 4ಕ್ಯಾತಲ್ಯಾಬ್ಸ್, 4 ಶಸ್ತ್ರಚಿಕಿತ್ಸಾ ಕೊಠಡಿ, 24ಗಂಟೆಗಳ ಐಸಿಯು ಸೌಲಭ್ಯವಿದೆ. ಪ್ರಸ್ತುತ ನಿತ್ಯ 400 ರಿಂದ 500 ಜನ ಹೊರ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದು, ವಾರ್ಷಿಕ 5650 ಜನ ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರತಿ ನಿತ್ಯ 30 ರಿಂದ 35 ಜನರಿಗೆ ಆಂಜಿಯೋ ಗ್ರಾಂ, ಆಂಜಿಯೋ ಪ್ಲಾಸ್ಟಿ ಮಾಡಲಾಗುತ್ತಿದ್ದು, ಮೂರು ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ 80 ಜನರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಯಶಸ್ಸಿನ ಪ್ರಮಾಣ ಶೇ.99ರಷ್ಟಿದೆ ಎಂದು ಡಾ.ಸಿ.ಎನ್‌.ಮಂಜುನಾಥ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next