Advertisement

ಮತಾಂತರಗೊಂಡವರಿಗೆ ಶೀಘ್ರದಲ್ಲಿ ಮನ ಪರಿವರ್ತನೆ ಮಾಡಿಸುವ ಕೆಲಸ: ಜಯ ಮೃತ್ಯುಂಜಯಸ್ವಾಮೀಜಿ

12:43 PM Oct 11, 2023 | Team Udayavani |

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೆಲ ಕುಟುಂಬಗಳು ಲಿಂಗಾಯತ ಧರ್ಮದಿಂದ ಅನ್ಯ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಪರಿಶೀಲನೆ ನಡೆಯುತ್ತಿದ್ದು, ಆದಷ್ಟು ಬೇಗ ಅವರ ಮನ ಪರಿವರ್ತನೆ ಮಾಡಿ ಇಷ್ಟಲಿಂಗ ದೀಕ್ಷೆ ನೀಡಿ ವಾಪಸ್ಸು ತರುವ ಕೆಲಸ ಮಾಡಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯಸ್ವಾಮೀಜಿ ತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಸುಮಾರು 120 ಲಿಂಗಾಯತ ಕುಟುಂಬಗಳು ಅನ್ಯ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಪರಿಶೀಲಿಸಲು ಸಮಾಜದ ಪ್ರಮುಖರಿಗೆ ತಿಳಿಸಿದ್ದೇನೆ. ಆ ಕುಟುಂಬಗಳನ್ನು ಶೀಘ್ರದಲ್ಲಿ ಗುರುತಿಸಿ ಅವರನ್ನು ಲಿಂಗಾಯತ ಧರ್ಮಕ್ಕೆ ಕರೆತರುವ ಕುರಿತು ಮನ ಪರಿವರ್ತನೆ ಮಾಡಲಾಗುವುದು. ಅವರಿಗೆ ಲಿಂಗ ದೀಕ್ಷೆ ನೀಡಿ ವಾಪಸ್ಸು ಕರೆತರಲಾಗುವುದು ಎಂದು ತಿಳಿಸಿದರು.

ಯಾವ ಕಾರಣಕ್ಕೆ ಮತಾಂತರಗೊಂಡಿದ್ದಾರೆ ಎಂಬುವುದು ಗೊತ್ತಿಲ್ಲ. ನಮ್ಮ ಸಮಾಜದ ಹಿರಿಯರು ಈ ಕುರಿತು ಕಾರ್ಯಪ್ರವೃತ್ತರಾಗಿದ್ದು, ಕಾರಣಗಳನ್ನು ಗುರುತಿಸಿದ ನಂತರ ಗೊತ್ತಾಗಲಿದೆ ಎಂದರು.

ಅ. 13 ರಂದು ಹೋರಾಟ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಅನುಷ್ಠಾನ ಹಾಗೂ ಲಿಂಗಾಯತ ಉಪ‌ ಸಮಾಜ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಸೇರಿಸಲು ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಿಸಿ ಅ. 13 ರಂದು ಬೆಳಿಗ್ಗೆ 10 ಗಂಟೆಗೆ ಹುಬ್ಬಳ್ಳಿ ಗಬ್ಬೂರ ವೃತ್ತದ ಬೈಪಾಸ್ ನಲ್ಲಿ ರಸ್ತೆಯಲ್ಲಿ ಇಷ್ಟಲಿಂಗ ಪೂಜೆ ಸಲ್ಲಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಳಗಾವಿ, ವಿಜಯಪುರ, ಕೊಪ್ಪಳ ಬಾಗಲಕೋಟೆಯಲ್ಲಿ ಪ್ರತಿಭಟನೆ ಮಾಡಲಾಗಿದೆ. ಈ ಹೋರಾಟದಲ್ಲಿ ಸುಮಾರು ಸಮಾಜದ 5-6 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ. ಈ ಹೋರಾಟ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಯಲಿದೆ. ಇನ್ನೊಂದೆರಡು ಜಿಲ್ಲೆಗಳಲ್ಲಿ ಹೋರಾಟ ಮುಗಿಯುವುದರೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದು ಮಾತನಾಡುವ ನಿರೀಕ್ಷೆಯಿದೆ. ಬಸನಗೌಡ ಪಾಟೀಲ ಯತ್ನಾಳ ಅವರು ಹೋರಾಟದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿಲ್ಲ ಎಂಬುವುದಾಗಿ ಶ್ರೀಗಳು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next