ಹೊಸದಿಲ್ಲಿ: “ಜವಾಹರಲಾಲ್ ನೆಹರೂ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಬೇಕು. ಇಲ್ಲವಾದರೆ ಕಟ್ಟುನಿಟ್ಟಿನ ಕ್ರಮ ಎದುರಿಸಬೇಕಾದೀತು’ ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ.
ವಿವಿಯ ಹಾಸ್ಟೆಲ್‌ಗಳಲ್ಲೊಂದಾದ ಕಾವೇರಿಯಲ್ಲಿ ವಿದ್ಯಾರ್ಥಿಗಳಿಗೆ ರಾತ್ರಿ ಊಟಕ್ಕೆ ಮಾಂಸಾಹಾರ ಒದಗಿಸಲಾಗಿದೆ ಎಂಬ ವಿಚಾರಕ್ಕೆ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಹಾಗೂ ಎಡಪಂಥೀಯ ವಿದ್ಯಾರ್ಥಿಗಳ ಗುಂಪುಗಳ ನಡುವೆ ರವಿವಾರ ಸಂಜೆ ಮಾರಾಮಾರಿ ನಡೆದಿತ್ತು. ಘಟನೆಯಲ್ಲಿ 16 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಆಡಳಿತ ಮಂಡಳಿಯಿಂದ ಕಟ್ಟುನಿಟ್ಟಿನ ಎಚ್ಚರಿಕೆ ಹೊರಬಿದ್ದಿದೆ.
ಜೆಎನ್‌ಯುಎಸ್‌ಯು, ಎಸ್‌ಎಫ್ಐ, ಡಿಎಸ್‌ಎಫ್ ಹಾಗೂ ಎಐಎಸ್‌ಎ ಆಧಾರದಲ್ಲಿ ಎಬಿವಿಪಿಯ ಅಜ್ಞಾತ ಸದಸ್ಯರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ವಿದ್ಯಾರ್ಥಿಗಳೇನಂತಾರೆ?: ಗಲಭೆಯಲ್ಲಿ ತಲೆಗೆ ಪೆಟ್ಟು ಬಿದ್ದಿರುವ ಅಕ್ತಾರಿಸ್ತಾ ಅನ್ಸಾರಿ ಎಂಬ ವಿದ್ಯಾರ್ಥಿಯೊಬ್ಬರು ಮಾತನಾಡಿ, “ಕಾವೇರಿ ಹಾಸ್ಟೆಲ್‌ನಲ್ಲಿ ಮಾಂಸಾಹಾರ ನೀಡಿರುವ ಸುದ್ದಿ ತಿಳಿದು ಹಾಸ್ಟೆಲ್ ಮೇಲೆ ದಾಳಿ ನಡೆಸಿದ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ಹಾಸ್ಟೆಲ್‌ನಲ್ಲಿದ್ದ ಎಲ್ಲರನ್ನೂ ಥಳಿಸಿದರು. ಹಾಸ್ಟೆಲ್‌ಗೆ ಕೋಳಿ ಮಾಂಸವನ್ನು ಸರಬರಾಜು ಮಾಡಿದ್ದ ಗುತ್ತಿಗೆದಾರರ ಮೇಲೂ ದಾಳಿ ನಡೆಸಲಾಗಿದೆ” ಎಂದು ಆರೋಪಿಸಿದ್ದಾರೆ.
ಜೆಎನ್‌ಯು ಎಬಿವಿಪಿ ಅಧ್ಯಕ್ಷ ರೋಹಿತ್ ಕುಮಾರ್ ಮಾತನಾಡಿ, ನಾವು ಮಾಂಸಾಹಾರದ ವಿರೋಧಿಗಳಲ್ಲ. “ಮಾಂಸಾ ಹಾರ ಕಾರಣಕ್ಕೆ ಗಲಾಟೆಯಾಗಿದ್ದಲ್ಲ. ಶ್ರೀರಾಮನವಮಿ ಹಿನ್ನೆಲೆಯಲ್ಲಿ ನಾವು ಕ್ಯಾಂಪಸ್‌ನಲ್ಲಿ ಪೂಜಾ ಕಾರ್ಯಕ್ರಮ ನಡೆಸುತ್ತಿದ್ದಾಗ, ಜೆಎನ್‌ಯು ವಿದ್ಯಾರ್ಥಿಗಳ ಸಂಘಟನೆಯ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಗಲಾಟೆ ಶುರುವಾಗಿ ಜೆಎನ್‌ಯುಎಸ್‌ಯು ಸದಸ್ಯರು ಎಬಿವಿಪಿ ಕಾರ್ಯಕರ್ತರನ್ನು ಥಳಿಸಿದರು ಎಂದು ಆರೋಪಿಸಿದ್ದಾರೆ.