Advertisement

ಐದಾರು ದಿನಕ್ಕೊಮ್ಮೆ ಜೇವರ್ಗಿಗೆ ನೀರು

05:34 PM May 08, 2020 | Naveen |

ಜೇವರ್ಗಿ: ಪುರಸಭೆ ಅಧಿಕಾರಿಗಳ ನಿರ್ಲಕ್ಷéದಿಂದ ಐದಾರು ದಿನಕ್ಕೊಮ್ಮೆ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ತಾಲೂಕಿನ ಕಟ್ಟಿಸಂಗಾವಿ ಹತ್ತಿರದ ಭೀಮಾನದಿಯಿಂದ ಪಟ್ಟಣಕ್ಕೆ ಪೈಪ್‌ ಲೈನ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಪಟ್ಟಣದಲ್ಲಿ 35 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಪಟ್ಟಣದ ಲಕ್ಷ್ಮೀಚೌಕ್‌ ಬಡಾವಣೆ ಹೊರತುಪಡಿಸಿ ಬಹುತೇಕ ವಾರ್ಡ್‌ಗಳಿಗೆ ಭೀಮಾನದಿಯೇ ಆಸರೆಯಾಗಿದೆ.

Advertisement

ಬೆಳಗಾದರೆ ಸಾಕು ಕೊಡ ಹಿಡಿದುಕೊಂಡು ಮಹಿಳೆಯರು, ಮಕ್ಕಳು, ವೃದ್ಧರೆನ್ನದೇ ನೀರಿಗಾಗಿ ಅಲೆದಾಡಬೇಕಾಗಿದೆ. ಪಟ್ಟಣದ ವಿಜಯಪುರ ರಸ್ತೆಯ ತಾಂಡಾದಲ್ಲಿನ ಮೋಟರ್‌, ಜ್ಯೋತಿ ಹೋಟೆಲ್‌ ಹಿಂಬದಿಯಲ್ಲಿರುವ ತೆರೆದ ಬಾವಿಗೆ ಅಳವಡಿಸಿರುವ ಮೋಟರ್‌, ಷಣ್ಮುಖ ಶಿವಯೋಗಿ ಮಠದ ಬಳಿಯ ಕೊಳವೆ ಬಾವಿಯ ಮೋಟರ್‌ಗಳು ಕೆಟ್ಟು ಹೋದರೂ ಇಲ್ಲಿಯವರೆಗೂ ದುರಸ್ತಿ ಮಾಡಿಲ್ಲ. ಭೀಮಾನದಿ ಜಾಕ್‌ವೆಲ್‌ ಬಳಿ ನೀರಿನ ಪ್ರಮಾಣ ಕಡಿಮೆ ಆಗಿದೆ. ಆದರೆ ಅಧಿಕಾರಿಗಳು ನೀರು ಸಂಗ್ರಹಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಪಟ್ಟಣದ ಶಾಸ್ತ್ರೀ ಚೌಕ್‌, ಬಸವೇಶ್ವರ ನಗರ, ಶಾಂತನಗರ, ಖಾಜಾ ಕಾಲೋನಿ, ಜೋಪಡಪಟ್ಟಿ, ಜನತಾ ಕಾಲೋನಿ, ಮಡ್ಡಿ ಏರಿಯಾ, ದತ್ತನಗರ, ಓಂ ನಗರ, ಶಿಕ್ಷಕರ ಕಾಲೋನಿ, ವಿದ್ಯಾನಗರ ಬಡಾವಣೆಗಳಲ್ಲಿ ನಿತ್ಯ ಕುಡಿಯುವ ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ. ಇನ್ನೊಂದೆಡೆ ಭೀಮಾನದಿಯಿಂದ ಪಟ್ಟಣಕ್ಕೆ ಸರಬರಾಜು ಮಾಡುತ್ತಿರುವ ನೀರಿನ ಪೈಪ್‌ ಕೆಲವು ಕಡೆ ಒಡೆದು ನೀರು ಚರಂಡಿ ಪಾಲಾಗುತ್ತಿದೆ.

ಪುರಸಭೆ ಮುಖ್ಯಾಧಿಕಾರಿಗಳು ಪಟ್ಟಣದ ಜನತೆಗೆ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು. ಪ್ರತಿ ಬಡಾವಣೆಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಬೀದಿ ದೀಪ, ರಸ್ತೆ, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಬೇಕು.
ದಾವೂದ್‌ ಬಡಾಘರ್‌,
ಪುರಸಭೆ ಮಾಜಿ ಸದಸ್ಯ

ಪುರಸಭೆ ಮುಖ್ಯಾ ಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಜೇವರ್ಗಿಗೆ ವರ್ಗವಾಗಿ ಬಂದ ಮೇಲೆ ನಯಾ ಪೈಸೆ ಅಭಿವೃದ್ಧಿ ಕೆಲಸ ಮಾಡಿಲ್ಲ. ಬೇಸಿಗೆ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇದ್ದ ಪರಿಣಾಮ ನೀರಿನ ಅಭಾವ ಸೃಷ್ಟಿಯಾಗಿದೆ.
ಕಾವ್ಯ ಹಣಮಂತ,
ಪುರಸಭೆ ಸದಸ್ಯೆ

ವಿಜಯಕುಮಾರ ಕಲ್ಲಾ

Advertisement
Advertisement

Udayavani is now on Telegram. Click here to join our channel and stay updated with the latest news.

Next