Advertisement

ಕೊಳಚೆ ತಾಣವಾದ ಜೇವರ್ಗಿ ಹಳ್ಳ

06:28 PM Apr 20, 2021 | Team Udayavani |

ಜೇವರ್ಗಿ: ದಿನದಿಂದ ದಿನಕ್ಕೆ ಜಲಮೂಲಗಳು ಕಣ್ಮರೆಯಾಗುತ್ತಿವೆ. ಇದರಿಂದ ಜನರು ನೀರಿಗಾಗಿ ಪರದಾಡುವ ಸ್ಥಿತಿ ಕೂಡಾ ನಿರ್ಮಾಣವಾಗಿದೆ. ಹೀಗಾಗಿ ಜಲಮೂಲಗಳನ್ನು ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಆದರೆ, ಇಲ್ಲಿ ಮಾತ್ರ ಇದ್ದ ಜಲಮೂಲವನ್ನು ಜನ ತ್ಯಾಜ್ಯ ಎಸೆಯುವ ಪ್ರದೇಶವನ್ನಾಗಿಸಿಕೊಂಡಿದ್ದಾರೆ.

Advertisement

ಹೌದು, ಪಟ್ಟಣದ ಜನ-ಜಾನುವಾರುಗಳಿಗೆ ಜಲಮೂಲವಾಗಿದ್ದ ಹಳ್ಳ ಇಂದು ತ್ಯಾಜ್ಯ ಎಸೆಯುವ ಹಾಗೂ ಕೊಳಚೆ ನೀರು ಹರಿಸುವ ತಾಣವಾಗಿ ಮಾರ್ಪಟ್ಟಿದೆ. ಈ ಹಳ್ಳದ ಮೇಲೆ ಜೇವರ್ಗಿ-ಕಲಬುರಗಿ, ಜೇವರ್ಗಿ-ವಿಜಯಪುರ ಹೆದ್ದಾರಿ ಹಾದು ಹೋಗಿದ್ದು, ಈ ಹಳ್ಳದ ನೀರು ಕೊನೆಗೆ ಭೀಮಾನದಿಗೆ ಸೇರುತ್ತದೆ. ಆದರೆ ಇತ್ತೀಚೆಗೆ ಈ ಹಳ್ಳ ತ್ಯಾಜ್ಯ ಶೇಖರಣೆಯ ತಾಣವಾಗಿದೆ. ಹಳ್ಳದ ನಿರ್ವಹಣೆ ಇಲ್ಲದ್ದರಿಂದ ಜಾಲಿಗಿಡಗಳು, ಹುಲ್ಲು, ಕಸಕಡ್ಡಿಗಳು ಬೆಳೆದಿವೆ.

ಸುತ್ತಲಿನ ಬಡಾವಣೆಗಳ ಮನೆಗಳ ತ್ಯಾಜ್ಯ, ಚರಂಡಿಯ ನೀರು, ಕಸಕಡ್ಡಿ ತಂದು ಹಳ್ಳದಲ್ಲಿ ಎಸೆಯಲಾಗುತ್ತಿದೆ. ಇದರಿಂದ ಸುತ್ತಲೂ ದುರ್ಗಂಧ ಹರಡಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸುತ್ತಲೂ ಮುಳ್ಳು ಕಂಟಿಗಳು ಬೆಳೆದ ಕಾರಣ ಹಳ್ಳವೇ ಮಾಯವಾದಂತೆ ಕಾಣುತ್ತದೆ. ಸುಮಾರು ವರ್ಷಗಳ ಹಿಂದೆ ಈ ಹಳ್ಳವೇ ಪಟ್ಟಣದ ಜಾನುವಾರುಗಳಿಗೆ ಹಾಗೂ ಜನತೆಗೆ ನೀರಿಗೆ ಮೂಲ ಸೆಲೆಯಾಗಿತ್ತು. ದನಕರುಗಳಿಗೆ ಕುಡಿಯಲು ನೀರು, ಮಹಿಳೆಯರು ಬಟ್ಟೆ ತೊಳೆಯಲು ಬಳಸುತ್ತಿದ್ದರು. ರೈತರು ಈ ಹಳ್ಳದ ನೀರನ್ನೇ ಹೊಲಕ್ಕೆ ಹರಿಸಿಕೊಂಡು ಬೆಳೆ ಬೆಳೆಯುತ್ತಿದ್ದರು.

ಸ್ಥಳಿಯ ಹೋಟೆಲ್‌, ಖಾನಾವಳಿ, ಮನೆಗಳಲ್ಲಿನ ಎಲ್ಲ ತರಹದ ತ್ಯಾಜ್ಯಗಳನ್ನು ಈ ಹಳ್ಳದಲ್ಲಿಯೇ ಹಾಕುತ್ತಾರೆ. ಕೆಲವರಿಂದ ಸತ್ತ ಪ್ರಾಣಿಗಳನ್ನು ತಂದು ಹಳ್ಳದಲ್ಲಿಯೇ ಎಸೆಯುಲಾಗುತ್ತಿದೆ. ಇದರಿಂದ ದುರ್ನಾತ ಬೀರುತ್ತಿದೆ. ವಿವಿಧ ಬಡಾವಣೆಗಳ ಚರಂಡಿ ನೀರು ಹರಿಬಿಡಲಾಗಿದೆ. ಇದರಿಂದ ಜೋಪಡಪಟ್ಟಿ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಹಳ್ಳವೆಂದರೆ ಕಸ-ತ್ಯಾಜ್ಯ ಹಾಕುವ ಕೇಂದ್ರವಾಗಿ ಮಾರ್ಪಟ್ಟಿದೆ. ಹಳ್ಳದಲ್ಲಿ ಹಾಕಿರುವ ಕಸಕ್ಕೆ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚುವುದರಿಂದ ಹೊಗೆ ಮತ್ತು ದುರ್ನಾತ ಸುತ್ತಲೂ ಹರಡುತ್ತಿದೆ.

ಪುರಸಭೆ ವತಿಯಿಂದ ತ್ಯಾಜ್ಯ ಸಂಗ್ರಹಿಸಲು ವಾಹನ ವ್ಯವಸ್ಥೆ ಮಾಡಿದೆ. ಪಟ್ಟಣದ ಎಲ್ಲಾ ಬಡಾವಣೆಗಳ ಮನೆಗಳು ಮತ್ತು ಅಂಗಡಿಗಳ ಬಾಗಿಲಿಗೆ ಹೋಗಿ ಕಸ ಸಂಗ್ರಹಿಸಲಾಗುತ್ತಿದೆ. ನಿತ್ಯ ವಾಹನಗಳು ಅಂಗಡಿಗಳ ಬಾಗಿಲಿಗೆ ಬಂದರೂ ತ್ಯಾಜ್ಯವನ್ನು ವಾಹನಗಳಿಗೆ ಹಾಕದೇ ತಂದು ಹಳ್ಳಕ್ಕೆ ಸುರಿಯುತ್ತಿದ್ದಾರೆ. ಇದು ಹಳ್ಳದ ಅಕ್ಕ ಪಕ್ಕದ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಒಂದೆಡೆ ಸ್ವತ್ಛ ಭಾರತ ಕನಸಿನೊಂದಿಗೆ ಪುರಸಭೆ ಸಾಕಷ್ಟು ಪರಿಶ್ರಮ ಪಟ್ಟು ವಾಹನಗಳ ವ್ಯವಸ್ಥೆ ಮಾಡಿದ್ದರೂ ಇದಕ್ಕೆ ಕೆಲವರು ತಣ್ಣಿರು ಎರಚಿದ್ದಾರೆ.

Advertisement

*ವಿಜಯಕುಮಾರ ಎಸ್‌.ಕಲ್ಲಾ

Advertisement

Udayavani is now on Telegram. Click here to join our channel and stay updated with the latest news.

Next