ಜೇವರ್ಗಿ: ದೇಶದಲ್ಲಿ ಸಾಕಷ್ಟು ಮಸೀದಿ, ಮಂದಿರ, ಚರ್ಚ್‌ಗಳನ್ನು ಕಟ್ಟಲಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಮನಸ್ಸುಗಳನ್ನು ಕಟ್ಟುವ ಕೆಲಸವಾಗಬೇಕಿದೆ. ಅದು ಬಸವಧರ್ಮ, ವಚನ ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಆಳಂದ ಕ್ಷೇತ್ರದ ಮಾಜಿ ಶಾಸಕ ಬಿ.ಆರ್. ಪಾಟೀಲ ಹೇಳಿದರು.
ಪಟ್ಟಣದ ಸರಕಾರಿ ಕನ್ಯಾ ಪ್ರೌಢಶಾಲೆ ಆವರಣದಲ್ಲಿ ಪ್ರವಚನ ಸೇವಾ ಸಮಿತಿ ವತಿಯಿಂದ ಆಯೋಜಿಸಿರುವ ವಚನ ದರ್ಶನ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶದಲ್ಲಿ ಧರ್ಮ, ಸಂಸ್ಕೃತಿ, ಸಭ್ಯತೆ, ಆಚಾರ, ವಿಚಾರ ಉಳಿದಿರುವುದು ಮಹಿಳೆಯರಿಂದ. ಮಹಿಳೆಯರು ಮೂಢನಂಬಿಕೆಗೆ ಒಳಗಾಗಬಾರದು. ಮಾಟ, ಮಂತ್ರದಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದಾದರೆ ಆಸ್ಪತ್ರೆಗಳು ಯಾಕೆ ಬೇಕು ಎಂದು ಪ್ರಶ್ನಿಸಿದ ಪಾಟೀಲ, ಸಮಾಜದಲ್ಲಿ ದೇವರು, ಧರ್ಮದ ಹೆಸರಿನ ಮೇಲೆ ಶೋಷಣೆ, ಮೋಸ, ವಂಚನೆ ಮಾಡಲಾಗುತ್ತಿದೆ. ಸತ್ಯ, ಶುದ್ಧ, ಕಾಯಕದ ತತ್ವ ಕೊಟ್ಟ ಮಹಾಮಾನವತಾವಾದಿ ಅಣ್ಣ ಬಸವಣ್ಣನವರ ತತ್ವಾದರ್ಶ ಪಾಲಿಸಿದರೆ ಯಾವ ದೇವರುಗಳ ಅವಶ್ಯಕತೆ ನಮಗಿರುವುದಿಲ್ಲ ಎಂದರು.
ಕಾಣದ ದೇವರು ನಮ್ಮ ರಕ್ಷಣೆ ಮಾಡುವುದಿಲ್ಲ. ನಿಜಗುಣ ಶ್ರೀಗಳಿಗೆ ಬೆದರಿಕೆ ಹಾಕುವ ಮೂಲಕ ಈ ಸಮಾಜವನ್ನು ಯತಾಸ್ಥಿತಿಗೆ ತರುವ ಪ್ರಯತ್ನ ನಡೆದಿದೆ. ಆದರೆ ಯಾರೂ ಭಯಪಡುವ ಅವಶ್ಯಕತೆ ಇಲ್ಲ. ಜಾತಿ ವ್ಯವಸ್ಥೆ, ಮೂಢನಂಬಿಕೆ, ಕಂದಾಚಾರ, ಅಸ್ಪ್ರಶ್ಯತೆ ನಿವಾರಣೆಗೆ ಹೋರಾಡಿದ ಬಸವಾದಿ ಶರಣರ ತತ್ವಾದರ್ಶವನ್ನು ಪ್ರತಿಯೊಬ್ಬರೂ ಪಾಲಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಶಾಸಕ ಡಾ| ಅಜಯಸಿಂಗ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಮಾತನಾಡಿದರು. ನಂತರ ನಿಜಗುಣ ಪ್ರಭು ಸ್ವಾಮೀಜಿ ಪ್ರವಚನ ಮಾಡಿದರು.
ಜಿ.ಪಂ ಮಾಜಿ ಉಪಾಧ್ಯಕ್ಷ ಗುರುಲಿಂಗಪ್ಪಗೌಡ ಮಾಲಿಪಾಟೀಲ, ಬಸವಕೇಂದ್ರದ ಅಧ್ಯಕ್ಷ ಶರಣಬಸವ ಕಲ್ಲಾ, ಅವ್ವಣಗೌಡ ಪಾಟೀಲ ಯಲಗೋಡ, ಶಿವಣಗೌಡ ಹಂಗರಗಿ, ಷಣ್ಮುಖಪ್ಪಗೌಡ ಹಿರೇಗೌಡ, ಬಾಪುಗೌಡ ಬಿರಾಳ, ಮಹಾಂತಸಾಹು ಹರವಾಳ, ಮಹಾಂತಗೌಡ ಚನ್ನೂರ, ಸಂಗನಗೌಡ ಗುಳ್ಯಾಳ, ನೀಲಕಂಠ ಅವುಂಟಿ, ಗುರುಗೌಡ ಮಾಲಿಪಾಟೀಲ, ಬಸವರಾಜ ಲಾಡಿ, ಸಿದ್ದು ಯಂಕಂಚಿ, ವಿಜಯಕುಮಾರ ಪಾಟೀಲ ಸೇಡಂ, ಮಲ್ಲಿಕಾರ್ಜುನ ಬಿರಾದಾರ ಸೊನ್ನ, ಸದಾನಂದ ಪಾಟೀಲ, ಚಂದ್ರಶೇಖರ ತುಂಬಗಿ, ಅಖಂಡು ಕಲ್ಲಾ, ಸುರೇಶ ಹಳ್ಳಿ, ರಾಮಣ್ಣ ತೊನ್ಸಳ್ಳಿಕರ್ ಇದ್ದರು.