ಜೇವರ್ಗಿ: ಹೆಸರಿಗೆ ತಾಲೂಕು ಕೇಂದ್ರ, ಇಲ್ಲಿಂದ ಆಯ್ಕೆಯಾಗಿ ಹೋದವರು ಮುಖ್ಯಮಂತ್ರಿಯಾಗಿ ಆಡಳಿತ ಕೂಡ ನಡೆಸಿದ್ದಾರೆ. ಇಷ್ಟಾದರೂ ಇಲ್ಲಿನ ತಾಲೂಕು ಗ್ರಂಥಾಲಯ ಸ್ವಂತ ಕಟ್ಟಡ, ಮೂಲಸೌಲಭ್ಯವಿಲ್ಲದೇ ಸೊರಗುತ್ತಿರುವುದು ದುರಂತ.
ಗ್ರಂಥಾಲಯಗಳು ಸಾಮಾನ್ಯರ ವಿಶ್ವವಿದ್ಯಾಲಯ. ಸಾರ್ವಜನಿಕರಲ್ಲಿ ಓದಿನ ಅಭಿರುಚಿ ಬೆಳೆಸಲು ಸ್ಥಾಪನೆಗೊಂಡಿವೆ. 1965 ರಲ್ಲಿ ಅಂದಿನ ರಾಜ್ಯ ಸರ್ಕಾರ ಸಾರ್ವಜನಿಕ ಗ್ರಂಥಾಲಯಗಳನ್ನು ಸ್ಥಾಪಿಸಿತ್ತು. ಇದರ ಧ್ಯೇಯ, ಉದ್ದೇಶಗಳೇನೇ ಇದ್ದರೂ ಪಟ್ಟಣದಲ್ಲಿರುವ ಗ್ರಂಥಾಲಯ ಸ್ವಂತ ಕಟ್ಟಡ, ಮೂಲಸೌಕರ್ಯವಿಲ್ಲದೇ ಸೊರಗುತ್ತಿದೆ.
ಸ್ವಂತ ಕಟ್ಟಡವೇ ಇಲ್ಲ: ಹೇಳಿಕೊಳ್ಳಲು ಗ್ರಂಥಾಲಯವಿದೆ. ಆದರೆ ಇದಕ್ಕೆ ಸ್ವಂತ ಕಟ್ಟಡವಿಲ್ಲ. ಸುಣ್ಣ-ಬಣ್ಣ ಕಾಣದ ಹಳೆ ತಹಶೀಲ್ದಾರ್ ಕಚೇರಿಯ ಎರಡು ಕೋಣೆಗಳಲ್ಲಿ ನಡೆಸಲಾಗುತ್ತಿದೆ. ಬಹುತೇಕ ಎಲ್ಲ ಕಿಟಕಿಗಳು ಒಡೆದು ಹೋಗಿವೆ. ವ್ಯವಸ್ಥಿತ ಗಾಳಿ, ಬೆಳಕಂತೂ ಇಲ್ಲವೇ ಇಲ್ಲ. ಚಿಕ್ಕದಾದ ಕುರಿದೊಡ್ಡಿ ಸ್ಥಳದಂತಿದೆ.
ಮುಖ್ಯವಾಗಿ ಲಕ್ಷಾಂತರ ರೂ. ಬೆಲೆ ಬಾಳುವ ಪುಸ್ತಕಗಳಿದ್ದರೂ ಯಾವುದೇ ಬಂದೋಬಸ್ತ್ ಇಲ್ಲ. ಓದುಗರು ಇಲ್ಲಿ ಕೂತರೇ ಉಸಿರುಗಟ್ಟುವ ವಾತಾವರಣ. ಒಮ್ಮೆ ಇಲ್ಲಿ 15-20 ಜನ ಕುಳಿತುಕೊಳ್ಳಲು ಮಾತ್ರ ಅವಕಾಶವಿದೆ. ಇಲ್ಲೊಂದು ಗ್ರಂಥಾಲಯವಿದೆ ಎನ್ನುವುದಕ್ಕೆ ನಾಮಫಲಕವೂ ಇಲ್ಲ. ಇಲ್ಲಿ ಓದಲು ಬರುವವರಿಗೆ ಯಾವುದೇ ಶೌಚಾಲಯ ವ್ಯವಸ್ಥೆ ಇಲ್ಲದೇ ಪ್ರಕೃತಿ ಬಾಧೆಗೆ ಅಲೆದಾಡುವ ದುಸ್ಥಿತಿಯಿದೆ. ಮಳೆಗಾಲದಲ್ಲಿ ಕಟ್ಟಡ ಸೋರುವುದರಿಂದ ಅನೇಕ ಪುಸ್ತಕಗಳು ಹಾಳಾಗಿವೆ.
16143 ಪುಸ್ತಕಗಳಿವೆ: ಒಟ್ಟಾರೆ 16143 ಪುಸ್ತಕಗಳು ಇಲ್ಲಿವೆ. ಕಳೆದ 2017 ರಿಂದ ಇಲ್ಲಿಯವರೆಗೆ 3000 ಪುಸ್ತಕಗಳು ಸೇರ್ಪಡೆಗೊಂಡಿವೆ. 1012 ಜನ ನೋಂದಣಿ ಮಾಡಿಕೊಂಡಿದ್ದಾರೆ. ಮೂವರು ಸಿಬ್ಬಂದಿ ಇದ್ದಾರೆ. 13 ದಿನ ಪತ್ರಿಕೆ (11 ಕನ್ನಡ, 2 ಇಂಗ್ಲಿಷ್), 10 ವಾರ, ಮಾಸಿಕ ಪತ್ರಿಕೆಗಳು ಬರುತ್ತವೆ. 20 ಜನ ಕೂರಬಹುದಾದ ಕೊಠಡಿ ಇಲ್ಲಿದೆ.
ಮಹಿಳಾ ಓದುಗರು ಬರೋದಿಲ್ಲ: ಮಹಿಳೆಯರಿಗೆ ಓದಲು ಪ್ರತ್ಯೇಕ ಕೊಠಡಿ ಇಲ್ಲ. ಇರುವುದೊಂದೇ ಕೊಠಡಿ. ಎಲ್ಲರೂ ಅಲ್ಲಿಯೇ ಕೂರಬೇಕು. ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಯಾವುದೇ ಮೂಲಸೌಕರ್ಯ ಇಲ್ಲದಿರುವುದಕ್ಕೆ ಕಾಲೇಜು ವಿದ್ಯಾರ್ಥಿನಿಯರು, ಗೃಹಿಣಿಯರು ಗ್ರಂಥಾಲಯದ ಕಡೆ ಸುಳಿಯುವುದಿಲ್ಲ.
ಮೂಟೆಗಳಲ್ಲಿ ಪುಸ್ತಕಗಳು: ಪ್ರತಿ ವರ್ಷವೂ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಲಾಗುತ್ತದೆ. ಆದರೆ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಸ್ಥಳದ ಅಭಾವದಿಂದ ಸರಬರಾಜಾದ ಪುಸ್ತಕಗಳ ಮೂಟೆಗಳನ್ನೇ ಬಿಚ್ಚಿಲ್ಲ.
ಅದೇ ರೀತಿ ಮೂಟೆಗಳನ್ನು ಗುಜರಿ ಅಂಗಡಿಗಳಲ್ಲಿ ಇಟ್ಟಂತೆ ಜೋಡಿಸಲಾಗಿದೆ. ಸೂಕ್ತ ನಿವೇಶನಕ್ಕಾಗಿ ಗ್ರಂಥಾಲಯದ ಮೇಲ್ವಿಚಾರಕರು, ಓದುಗರು ನಿರಂತರವಾಗಿ ತಹಶೀಲ್ದಾರ್, ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಯಾರೊಬ್ಬರೂ ಈ ಬಗ್ಗೆ ಗಂಭೀರವಾಗಿ ಚಿಂತಿಸಿ, ಕಾರ್ಯ ಪ್ರವೃತ್ತರಾಗಿಲ್ಲ.