ಜೇವರ್ಗಿ: ಬಿಸಿಲಿನ ಧಗೆಯಿಂದ ತತ್ತರಿಸಿದ ತಾಲೂಕಿನಾದ್ಯಂತ ಸೋಮವಾರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಯು ತಂಪನೆರೆಯಿತು.
ಈಗಾಗಲೇ ಮುಂಗಾರು ಹಂಗಾಮು ಬಿತ್ತನೆಗಾಗಿ ಭೂಮಿ ಹದಗೊಳಿಸಿಕೊಂಡು ಕಾಯುತ್ತಿರುವ ರೈತರಿಗೆ ರೋಹಿಣಿ ಮಳೆ ಭರವಸೆ ತುಂಬಿದೆ. ಪಟ್ಟಣದಲ್ಲಿ ಸೋಮವಾರ ರಾತ್ರಿ 11 ಗಂಟೆ ಹೊತ್ತಿಗೆ ಗುಡುಗು, ಮಿಂಚು ಸಹಿತ ಪ್ರಾರಂಭವಾದ ಮಳೆಯು ಎರಡು ಗಂಟೆ ರಭಸವಾಗಿ ಸುರಿಯಿತು. ಗಾಳಿಯ ಆರ್ಭಟ ಜೋರಾಗಿತ್ತು. ಮಳೆಯಿಂದ ಚರಂಡಿ ನೀರು ಉಕ್ಕಿ ರಸ್ತೆಗೆ ಹರಿಯಿತು.
ಅನೇಕ ಹೊಲಗದ್ದೆಗಳು ಕೂಡ ಮಳೆ ನೀರಿನಿಂದ ಜಲಾವೃತಗೊಂಡು ಹಳ್ಳ-ಕೆರೆಗಳಂತೆ ಭಾಸವಾಗುತ್ತಿತ್ತು. ಪಟ್ಟಣದ ದತ್ತನಗರ, ಓಂ ನಗರ, ಬಸವೇಶ್ವರ ಕಾಲೋನಿ, ಶಾಂತನಗರ, ಖಾಜಾ ಕಾಲೋನಿಯ ಕೆಲ ಕಡೆಗಳಲ್ಲಿ ಚರಂಡಿ ನೀರು ಉಕ್ಕಿ ರಸ್ತೆಗಳು ಜಲಾವೃತಗೊಂಡಿದ್ದರಿಂದ ಸಾರ್ವಜನಿಕರು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ಮಳೆಯ ಬೆನ್ನಲ್ಲೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಜನರು ತೊಂದರೆ ಅನುಭವಿಸಿದರು. ಪಟ್ಟಣದ ಹಲವೆಡೆ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದು, ಮಳೆ ನೀರಿನಿಂದ ತ್ಯಾಜ್ಯ ರಸ್ತೆಗೆ ಉಕ್ಕಿ ಹರಿಯಿತು. ಜಿಲ್ಲೆಯಲ್ಲಿಯೇ ಜೇವರ್ಗಿ ತಾಲೂಕಿನಲ್ಲಿ ಅತೀ ಹೆಚ್ಚು ಸರಾಸರಿ 95 ಮಿಮೀ ಮಳೆ ಬಿದ್ದಿದೆ.