ಜೇವರ್ಗಿ: ಭಾರತ ಸಂಸ್ಕೃತಿಯ ಮೂಲ ತಳಹದಿ ಜಾನಪದ ಸಾಹಿತ್ಯವನ್ನು ಉಳಿಸುವ ಹೊಣೆ ಪ್ರತಿಯೊಬ್ಬರ ಮೇಲಿದ್ದು, ಯುವ ಜನರಲ್ಲಿ ಜಾನಪದ ಸಾಹಿತ್ಯದ ಅಭಿರುಚಿ ಮೂಡಿಸುವ ಕೆಲಸವಾಗಬೇಕು ಎಂದು ಶಾಸಕ ಡಾ| ಅಜಯಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ಕಲಬುರಗಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2019-20ನೇ ಸಾಲಿನ ಜಾನಪದ ಜಾತ್ರೆ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜನಪದಕ್ಕೆ ಸಮಾಜ ಒಗ್ಗೂಡಿಸುವ ಶಕ್ತಿ ಇದೆ. ಜಾನಪದದಲ್ಲಿ ಜೀವನದ ಮೌಲ್ಯಗಳಿವೆ. ಹೀಗಾಗಿ ಜಾನಪದ ಕಲೆ ಸಾಹಿತ್ಯಕ್ಕೆ, ಸಮಾಜಕ್ಕೆ ಎಂದಿಗೂ ಪೂರಕವಾಗಿರುತ್ತದೆ ಎಂದರು.
ಬೀಸುವ, ಕುಟ್ಟುವ, ಹಂತಿ, ಸೋಬಾನ ಪದ ಇವು ನಶಿಸಿ ಹೋಗದಂತೆ ಇಂದಿನ ಯುವಕ, ಯುವತಿಯರಿಗೆ ಹೇಳಿಕೊಡುವ ಅನಿವಾರ್ಯತೆ ಇದೆ. ಜಾನಪದ ಕಲಾವಿದರಿಗೆ ವೇದಿಕೆ ಮತ್ತು ಪ್ರೋತ್ಸಾಹದ ಅಗತ್ಯವಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಣಗೌಡ ಪಾಟೀಲ ಹಂಗರಗಿ ಮಾತನಾಡಿ, ಆಧುನಿಕ ಸಂಸ್ಕೃತಿ ಹಾಗೂ ಪಾಶ್ಚಿಮಾತ್ಯ ಪ್ರೀತಿಯಿಂದಾಗಿ ಮೂಲ ಸಂಸ್ಕೃತಿಗೆ ಪೆಟ್ಟು ಬೀಳುತ್ತಿದೆ. ಬದುಕಿನ ಅರ್ಥ ತಿಳಿ ಹೇಳಿದ ಜನಪದರು ತಮ್ಮ ಜೀವನದಲ್ಲಿ ಕಂಡುಂಡ ಅನುಭವಗಳನ್ನು ಮಾರ್ಗದರ್ಶನದ ರೂಪದಲ್ಲಿ ಬಿಟ್ಟು ಹೋಗಿದ್ದಾರೆ. ಸುಂದರ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.
ಜಿ.ಪಂ ಸದಸ್ಯ ದೇವಕ್ಕೆಮ್ಮ ಚನ್ನಮಲ್ಲಯ್ಯ ಹಿರೇಮಠ, ತಹಶೀಲ್ದಾರ್ ಸಿದರಾಯ ಭೋಸಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ, ಕನ್ನಡ ಜನಪದ ಪರಿಷತ್ ಅಧ್ಯಕ್ಷ ಎಸ್.ಎಸ್. ಮಾಲಿಬಿರಾದಾರ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಕೆ. ಬಿರಾದಾರ, ರುಕುಂ ಪಟೇಲ ಇಜೇರಿ, ಕಾಶಿರಾಯಗೌಡ ಯಲಗೋಡ, ರಾಜಶೇಖರ ಖಣದಾಳ, ಮಲ್ಲಿಕಾರ್ಜುನ ಬಿರಾದಾರ, ಶಿವಲಿಂಗ ಕಲ್ಲಹಂಗರಗಿ, ಇಮ್ರಾನ್, ನಿಂಗು ಹಳಿಮನಿ, ಹಂಪಣ್ಣಗೌಡ ಹಾಲಗಡ್ಲಾ, ಮರೆಪ್ಪ ಸರಡಗಿ ಮುಖ್ಯ ಅತಿಥಿಗಳಾಗಿ ಇದ್ದರು.
ಇದಕ್ಕೂ ಮುನ್ನ ಮಿನಿ ವಿಧಾನಸೌಧ ಕಚೇರಿಯಿಂದ ಕನ್ನಡ ಭವನದ ವರೆಗೆ ವಿವಿಧ ಕಲಾತಂಡಗಳ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಚಿತ್ರದುರ್ಗದ ಕೀಲು ಕುದುರೆ, ದಾವಣಗೆರೆಯ ನಗಾರಿ ವಾದ್ಯ, ಮಹಿಳಾ ಡೊಳ್ಳು ಕುಣಿತ, ತುಮಕೂರಿನ ಸೋಮನ ಕುಣಿತ, ಗಾರುಡಿ ಗೊಂಬೆ, ನಾಶೀಕ ಡೋಲ್, ಕಲಬುರಗಿಯ ಪುರವಂತಿಕೆ, ಕರಡಿ ಮಜಲು, ಲಂಬಾಣಿ ನೃತ್ಯ, ಹಲಗೆ ವಾದನ, ಡೊಳ್ಳು ಕುಣಿತ ಸೇರಿದಂತೆ ಹತ್ತಾರು ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.