ಜೇವರ್ಗಿ: ಮಾರಣಾಂತಿಕ ಕೊರೊನಾ ವೈರಸ್ ತಾಲೂಕಿನಲ್ಲಿ ಹರಡದಂತೆ ಎಚ್ಚರವಹಿಸಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಸಿದ್ಧು ಪಾಟೀಲ ಹೇಳಿದರು.
ಪಟ್ಟಣದ ತಹಶೀಲ್ ಕಚೇರಿ ಸಭಾಂಗಣದಲ್ಲಿ ರಾಜ್ಯ ಸರಕಾರವು ಕೊರೊನಾ ವೈರಸ್ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನಲ್ಲಿ ಮುಂಜಾಗೃತಾ ಕ್ರಮಗಳನ್ನು ಅನುಷ್ಠಾನಗೊಳಿಸಲು ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಮನುಷ್ಯ ಹಾಗೂ ಪ್ರಾಣಿಗಳಲ್ಲಿ ಉಸಿರಾಟ, ಶ್ವಾಸಕೋಶಕ್ಕೆ ತೊಂದರೆಯುಂಟು ಮಾಡುವ ಕೊರೊನಾ ವೈರಸ್ ಬಗ್ಗೆ ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ, ಆದರೆ ಜಾಗೃತಿ ವಹಿಸಿ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ಕೊರೊನಾ ವೈರಸ್‌ನಿಂದಾಗಿ ಚೀನಾ ದೇಶ ತತ್ತರಿಸಿದ್ದು, ವಿದೇಶಗಳಲ್ಲಿದ್ದ ಭಾರತೀಯರು ದೇಶಕ್ಕೆ ಮರಳಿದ್ದಾರೆ. ಈ ಪೈಕಿ ತೆಲಂಗಾಣ ರಾಜ್ಯದಲ್ಲಿ ಸೋಂಕು ಪತ್ತೆಯಾಗಿದೆ. ಆದ್ದರಿಂದ ತಾಲೂಕಿನಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗುತ್ತಿದ್ದು, ಆರೋಗ್ಯ ಇಲಾಖೆ ಸಕಲ ರೀತಿಯಲ್ಲೂ ಸನ್ನದ್ಧವಾಗಿದೆ ಎಂದರು.
ತಾಲೂಕಾಸ್ಪತ್ರೆಯಲ್ಲಿ ಈಗಾಗಲೇ ಪ್ರತ್ಯೇಕವಾಗಿ ಎರಡು ವಾರ್ಡ್ ತೆರೆದು, ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗಿದೆ. ಅದೇ ರೀತಿ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಮಾಡಬೇಕು ಎಂದು ಸೂಚಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಸಿದರಾಯ ಭೋಸಗಿ, ಕೊರೊನಾ ವೈರಸ್ ಸೊಂಕು ಕಂಡು ಬಂದರೆ ಚಿಕಿತ್ಸೆ ನೀಡಲು ಅಗತ್ಯವಿರುವ ಔಷಧ, ಮಾಸ್ಕ್ಗಳನ್ನು ಸಂಗ್ರಹ ಮಾಡಿಕೊಳ್ಳಬೇಕು. ಸರ್ಕಾರಿ-ಖಾಸಗಿ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳ ಮೂಲಕ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮೀಶ, ಸಿಡಿಪಿಒ ಶಿವಪ್ರಕಾಶ ಹಿರೇಮಠ, ಸಮಾಜ ಕಲ್ಯಾಣಾಧಿಕಾರಿ ಅಶೋಕ ನಾಯಕ, ವೈದ್ಯರಾದ ಡಾ| ಸಂದೀಪಸಿಂಗ್ ಜೇರಟಗಿ, ಡಾ|ರಾಜು ಅಂಕಲಗಾ, ಡಾ| ರೇಶ್ಮಿ ಮಂದೇವಾಲ, ಡಾ| ಬಸವರಾಜ ನೆಲೋಗಿ, ಡಾ| ಉಮೇಶ ಶರ್ಮಾ ಇಜೇರಿ, ಡಾ| ಚನ್ನವೀರ ಮಳ್ಳಿ, ಡಾ| ಶಿವಶಂಕರ ಗಂವ್ಹಾರ, ಡಾ| ಅಮೀರಪಾಶಾ ಕೂಡಿ, ಡಾ| ಮಹಾದೇವಿ ಆಂದೋಲಾ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರು, ವಿವಿಧ ಇಲಾಖೆ ಸಿಬ್ಬಂದಿ ಇದ್ದರು.