Advertisement

ಜಾವಗಲ್‌ ಶ್ರೀನಾಥ್‌ ಸ್ವಚ್ಛತಾ ಜಾಗೃತಿ

12:03 PM Sep 09, 2017 | |

ಮೈಸೂರು: ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಆಯೋಜಿಸಿರುವ ಸ್ವಚ್ಛತಾ ಜಾಗೃತಿ ಅಭಿಯಾನಕ್ಕೆ ಸ್ವಚ್ಛ ಮೈಸೂರು ರಾಯಭಾರಿ, ಮಾಜಿ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಶುಕ್ರವಾರ ಚಾಲನೆ ನೀಡಿದರು.

Advertisement

ರಾಘವೇಂದ್ರ ನಗರದ ಗುರುರಾಜ್‌ ಪಾರ್ಕ್‌ನಲ್ಲಿ ಆಯೋಜಿಸಿದ್ದ ಸ್ವಚ್ಛತಾ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದ ವಿವಿಧ ಶಾಲೆಗಳ ಮಕ್ಕಳು ಸ್ವಚ್ಛ ಮೈಸೂರು, ನಮ್ಮೆಲ್ಲರ ಹಕ್ಕು, ನಗರ ಸ್ವಚ್ಛತೆಗೆ ಪೌರ ಬಂಧುಗಳಿಗೆ ಸಹಕರಿಸಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗೂತ್ತಾ, ರಾಘವೇಂದ್ರ ನಗರದ ಪ್ರಮುಖ ರಸ್ತೆಗಳಲ್ಲಿ ಕಾಲ್ನಡಿಗೆ ಜಾಥಾ ನಡೆಸಿದರು.  

ಈ ವೇಳೆ ಮಾತನಾಡಿದ ಜಾವಗಲ್‌ ಶ್ರೀನಾಥ್‌, ನಿತ್ಯವೂ ಕಸ ತೆಗೆದು ವಿಂಗಡಿಸುವುದು ಸುಲಭವಲ್ಲ, ಈ ಹಿನ್ನೆಲೆಯಲ್ಲಿ ಮನೆಗಳಲ್ಲಿ ಸಂಗ್ರಹವಾಗುವ ಕಸವನ್ನು ಮನೆಯಲ್ಲೇ ವ್ಯವಸ್ಥಿತವಾಗಿ ವಿಂಗಡಿಸಿ ಪೌರಕಾರ್ಮಿಕರಿಗೆ ನೀಡಿದಾಗ ಅನುಕೂಲವಾಗಲಿದೆ ಎಂದು ಹೇಳಿದರು.

 ಕೇವಲ ಮನೆಗಳಲ್ಲಿ ಮಾತ್ರವಲ್ಲದೆ ನಮ್ಮ ಸುತ್ತಲಿನ ಪರಿಸರವನ್ನು ಇದೇ ರೀತಿಯಲ್ಲಿ ಸ್ವಚ್ಛವಾಗಿ ಇರಿಸಿಕೊಳ್ಳಬೇಕಿದ್ದು, ನಗರಪಾಲಿಕೆಯಿಂದಲೇ ನಗರದ ಸ್ವಚ್ಛತೆ ಕಾಪಾಡುವುದು ಕಷ್ಟ. ಈ ಹಿನ್ನೆಲೆಯಲ್ಲಿ ಇಂತಹ ಸ್ವಚ್ಛತಾ ಅಭಿಯಾನಗಳು ನಿರಂತರವಾಗಿ ನಡೆಸುವ ಮೂಲಕ ಪ್ರತಿಯೊಬ್ಬರನ್ನೂ ಜಾಗೃತರನ್ನಾಗಿಸಬೇಕೆಂದರು. 

ಪಾಲಿಕೆ ಆಯುಕ್ತ ಸಿ.ಜಗದೀಶ್‌ ಮಾತನಾಡಿ, ಸಾರ್ವಜನಿಕರು ಸ್ವಚ್ಛತೆ ಹಾದಿಯಲ್ಲಿ ನಡೆದಾಗ ಮಾತ್ರ ಮೈಸೂರು ಸ್ವಚ್ಛ ನಗರವಾಗಲಿದ್ದು, ಈ ನಿಟ್ಟಿನಲ್ಲಿ ನಗರದ ಸ್ವಚ್ಛತೆ ಕಾಪಾಡುವಲ್ಲಿ ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.

Advertisement

ರಾಘವೇಂದ್ರನಗರದ ಉದ್ಯಾನವನದಿಂದ ಹೊರಟ ಸ್ವಚ್ಛತಾ ಜಾಥಾ ಪ್ರಮುಖ ರಸ್ತೆಗಳಲ್ಲಿ ಸಾಗಿ ಕ್ಯಾತಮಾರನಹಳ್ಳಿ ಪ್ರಾಥಮಿಕ ಶಾಲೆ, ಕೇಂದ್ರೀಯ ವಿದ್ಯಾಲಯಗಳಲ್ಲಿ ಅಂತ್ಯವಾಯಿತು. ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಸ್ವಚ್ಛತಾ ಸಹಿ ಸಂಗ್ರಹಿಸಲಾಯಿತು. ಅಲ್ಲದೆ ವಿದ್ಯಾರ್ಥಿಗಳಿಗೆ ಸ್ವಚ್ಛತಾ ಪ್ರತಿಜಾnವಿಧಿ ಬೋಧಿಸಲಾಯಿತು.

ಮೇಯರ್‌ ಎಂ.ಜೆ.ರವಿಕುಮಾರ್‌, ಪಾಲಿಕೆ ಸದಸ್ಯರಾದ ಬಿ.ಎಂ.ನಟರಾಜು, ಸಂದೇಶ್‌ಸ್ವಾಮಿ, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು, ಅಧೀಕ್ಷಕ ಎಂಜಿನಿಯರ್‌ ಸುರೇಶ್‌ಬಾಬು ಮತ್ತಿತರರಿದ್ದರು. ಜಾಥಾದಲ್ಲಿ ಗಿರಿಜನ ಬೋವಿಪಾಳ್ಯದ ಸರ್ಕಾರಿ ಶಾಲೆಯ ಮಕ್ಕಳು, ಟೆರಿಷಿಯನ್‌ ಹಾಗೂ ಕೇಂದ್ರಿಯ ವಿದ್ಯಾಲಯದ ಮಕ್ಕಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next