ಪಣಜಿ: ಕಳಸಾ-ಬಂಡೂರಿ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಒಪ್ಪಿಗೆ ಸೂಚಿಸಿ ಉಪಚುನಾವಣೆ ಸಂದರ್ಭದಲ್ಲಿ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ಕರ್ನಾಟಕಕ್ಕೆ ಬರೆದಿದ್ದ ಪತ್ರ ಕರ್ನಾಟಕದ ವಿಧಾನಸಭಾ ಉಪಚುನಾವಣೆ ತಂತ್ರವಾಗಿತ್ತು ಎಂದು ಗೋವಾ ರಾಜ್ಯಪಾಲ ಸತ್ಯಪಾಲ್ ಮಲಿಕ್ ಬಹಿರಂಗಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಕರ್ನಾಟಕಕ್ಕೆ ಬರೆದಿರುವ ಪತ್ರದ ಕುರಿತು ಜಾವಡೇಕರ್ ನನ್ನೊಂದಿಗೆ ಮಾತನಾಡಿದ್ದರು. ದೆಹಲಿಯಲ್ಲಿ ಪ್ರಧಾನಿಯನ್ನು ಭೇಟಿಯಾಗಿ ವಾಪಸ್ಸಾಗುವಾಗ ನನಗೆ ಜಾವಡೇಕರ್ ಅವರಿಂದ ದೂರವಾಣಿ ಕರೆ ಬಂತು. ಕರ್ನಾಟಕದಲ್ಲಿ ಉಪಚುನಾವಣೆ ಹಿನ್ನೆಲೆಯಲ್ಲಿ ಪತ್ರ ವಾಪಸ್ ಪಡೆಯಲು ತಡವಾಗಿದೆ. ಇನ್ನೆರಡು ದಿನಗಳಲ್ಲಿ ನಾನು ನಿಮಗೆ ಪತ್ರ ಬರೆಯುತ್ತೇನೆಂದು ಜಾವಡೇಕರ್ ಹೇಳಿದ್ದರು ಎಂದರು.
ಇನ್ನೆರಡು ದಿನ ಬಿಟ್ಟು ನಾನು ಮತ್ತೆ ಜಾವಡೇಕರ್‌ಗೆ ಕರೆ ಮಾಡಿದೆ. ಅವರು “ನಿಮ್ಮ ಪತ್ರ ಸಿದ್ಧವಾಗಿದೆ ನಾಳೆ ಕಳಿಸುತ್ತೇನೆ’ ಎಂದರು. ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರು ದೆಹಲಿಗೆ ಹೊರಟಿದ್ದು ಗೊತ್ತಾಗಿ, ಪತ್ರವನ್ನು ತೆಗೆದುಕೊಳ್ಳದೆಯೇ ಬರಬೇಡಿ ಎಂದು ನಾನು ಅವರಿಗೆ ಸೂಚಿಸಿದೆ. ಪತ್ರದಲ್ಲಿ ಯೋಜನೆಗೆ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಕರ್ನಾಟಕಕ್ಕೆ ನೀಡಿದ್ದ ಒಪ್ಪಿಗೆ ರದ್ದುಪಡಿಸಿದ ಮಾಹಿತಿ ಇತ್ತು ಎಂದರು.
ಇದೇ ವೇಳೆ ಜಾವಡೇಕರ್ ಕರ್ನಾಟಕಕ್ಕೆ ಬರೆದಿರುವ ಮತ್ತೂಂದು ಪತ್ರದ ಕುರಿತು ರಾಜ್ಯಪಾಲರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ರೀತಿ ಮಾಡುವುದರಿಂದ ಜನರಿಗೆ ಬೇರೆ ರೀತಿಯ ಸಂದೇಶ ಹೋಗುತ್ತದೆ ಎಂದೂ ತಿಳಿಸಿದ್ದಾರೆ. ರಾಜ್ಯಪಾಲರ ಈ ಹೇಳಿಕೆ ಗೋವಾ ಮತ್ತು ಕರ್ನಾಟಕದಲ್ಲಿ ರಾಜಕೀಯ ಬಿರುಗಾಳಿ ಸೃಷ್ಟಿಸುವ ಸಾಧ್ಯತೆಯಿದೆ.
ಕಳಸಾ-ಬಂಡೂರಿ ಯೋಜನೆಗೆ ಒಪ್ಪಿಗೆ ನೀಡಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಬರೆದ ಪತ್ರಕ್ಕೆ ಗೋವಾ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೆ ದೆಹಲಿಗೆ ನಿಯೋಗ ಹೋಗಿ ಕೇಂದ್ರ ಸಚಿವ ಜಾವಡೇಕರ್ ಅವರನ್ನು ಭೇಟಿ ಮಾಡಿ ಪತ್ರ ಹಿಂಪಡೆಯುವಂತೆ ಒತ್ತಾಯಿಸಿತ್ತು. ಗೋವಾ ರಾಜ್ಯಪಾಲ ಸತ್ಯಪಾಲ್ ಮಲಿಕ್ ಕೂಡ ಮಹದಾಯಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.