ಶತಮಾನಗಳ ಹಿಂದೆ ಜೈನ ದೊರೆಯ ಆಳ್ವಿಕೆಯಲ್ಲಿ ರಾಜಾ ಲೋಕಟೆ ತ್ರಿವಿಕ್ರಮವಾಗಿ ಆಳ್ವಿಕೆ ನಡೆಸಿ ತನ್ನ ದಿಗ್ವಿಜಯ ಸವಿ ನೆನಪಿಗಾಗಿ ಬೆಟ್ಟದಂಚಿನ ಝರಿಯ ಅಡಿಯಲ್ಲಿ ಶಿವಲಿಂಗವೊಂದನ್ನು ಸ್ಥಾಪಿಸಿದನು. ನಂತರ ಈ ಶಿವಲಿಂಗಕ್ಕೆ ಲೋಕಟೇಶ್ವರ ಎಂದು ನಾಮಕರಣ ಮಾಡಲಾಯಿತು. ಈಗ ಲೋಕನಾಥ, ಲೋಕೇಶ್ವರ ಎಂದು ಪ್ರಸಿದ್ಧವಾಗಿದೆ. ಜತೆಗೆ ಈ ಗ್ರಾಮಕ್ಕೆ ಇದ್ದ ಲೋಕಟಾಪುರ ಎಂಬ ಹೆಸರು ಈಗ ಲೋಕಾಪುರ ಎಂದು ಪ್ರಖ್ಯಾತಿ ಹೊಂದಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ದಕ್ಷಿಣಕ್ಕೆ ಲೋಕಾಪುರ ಗ್ರಾಮ ಬರುತ್ತದೆ. ಕೈಗಾರಿಕೆ, ಗಣಿ ಉದ್ದಿಮೆ, ವ್ಯಾಪಾರ, ಶಿಕ್ಷಣ, ಧಾರ್ಮಿಕ ಹೀಗೆ ಹತ್ತು ಹಲವು ರಂಗದಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ನಿಸರ್ಗ ನಿರ್ಮಿತ ಬೃಹತ್ ಪ್ರಮಾಣದ ಗುಪ್ತಗಂಗೆ ಈ ಭಾಗದ ದಾಹ ತೀರಿಸಿ ರೈತರ ಜೀವನಾಡಿಯಾಗಿದ್ದಳು. ಕಾಲ ಕ್ರಮೇಣ ಇಂದು ಮಳೆಗಾಲದಲ್ಲಿ ಮಾತ್ರ ಕಾಣಬಹುದು. ಕೆಲ ದಶಕದ ಹಿಂದೆ ಈ ಭಾಗದಲ್ಲಿ ಸಾಂಕ್ರಾಮಿಕ ರೋಗ, ಕಾಲರಾ ಹಾವಳಿಯಿಂದ ಜನಜೀವನ ತತ್ತರಿಸಿ ಹೋಗಿತ್ತು.
ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಲೋಕಾಪುರ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಮುಧೋಳ ಗವಿಮಠ ಆಗಿನ ಮೃತ್ಯುಂಜಯ ಸ್ವಾಮಿಗಳು ನೇತೃತ್ವದಲ್ಲಿ ಶ್ರೀ ಲೋಕೇಶ್ವರ ರಥೋತ್ಸವ ಆರಂಭಿಸಿದರಂತೆ. ನಂತರ ಭಕ್ತರ ರಕ್ಷಕ ಲೋಕೇಶ್ವರ ಸಾಂಕ್ರಾಮಿಕ ರೋಗ ದೂರ ಮಾಡಿದ ಎಂಬ ಪ್ರತೀತಿ ಇದೆ. 1950ರಲ್ಲಿ ಸ್ಥಳೀಯ ವಿಶ್ವಕರ್ಮ ಸಹೋದರರಿಂದ ಹೊಸ ರಥ ನಿರ್ಮಾಣವಾಯಿತು. ಇದರ ಆರಂಭೋತ್ಸವ ಆಗಿನ ಶಾಸಕ ಚನ್ನಬಸಪ್ಪ ಅಂಬಲಿ, ಜಾನಪದ ಸಾಹಿತಿ, ಗಾನ ಗಾರುಡಿಗ ದಿ|ಬಾಳಪ್ಪ ಹುಕ್ಕೇರಿ, ಶಾಸಕ ಎಂ.ಪಿ. ಪಾಟೀಲ, ಜಿಲ್ಲಾ ಶಿಕ್ಷಣಾಧಿಕಾರಿ ಪಾಟೀಲ ಹಾಗೂ ಅನೇಕ ಶ್ರೀಗಳ ಸಾನಿಧ್ಯದಲ್ಲಿ ಜರುಗಿತು.
ಹನ್ನೊಂದು ಮಂಟಪ ಪೂಜೆ, ರುದ್ರಾಭಿಷೇಕ, ಭಜನೆ-ಕೀರ್ತನೆಗಳನ್ನು ಹಮ್ಮಿಕ್ಕೊಳ್ಳಲಾಗಿತ್ತು. ಇಲ್ಲಿಯ ಹರಿಯುತ್ತಿರುವ ಗುಪ್ತ ಗಂಗೆಯಿಂದ ಕಾಲರಾ ಕಳೆದು ಜನರು ಪಾವನರಾದರು.
ವಿವಿಧ ದೇಗುಲಗಳ ಸಂಗಮ: ಲೋಕಾಪುರ ಪಾರಿಜಾತದ ತವರೂರು. ಚಿಕ್ಕು, ದಾಳಿಂಬೆ ಬೆಳೆಗೆ ಸುಪ್ರಸಿದ್ಧಿ. ಜತೆಗೆ ಕೃಷಿ, ಗಣಿ ಉದ್ಯಮ, ಸಿಮೆಂಟ್ ಕಾರ್ಖಾನೆಯಿಂದ ಗ್ರಾಮ ಐತಿಹಾಸಿಕ ಹಿನ್ನೆಲೆ, ರಾಜಕೀಯ, ಶಿಕ್ಷಣ, ಸಾಂಸ್ಕೃತಿಕ ಪರಂಪರೆ ಹೊಂದಿದೆ. ಗ್ರಾಮದ ತುಂಬೆಲ್ಲ ಶಿವಾಲಯಗಳ ದರ್ಶನ ಭಾಗ್ಯವಿದೆ. ಕೇವಲ ಶಿವಾಲಯಗಳ ತಾಣವಾಗಿರದೆ ಶಕ್ತಿ ಮಾತೆಯರ ದೇವಸ್ಥಾನಗಳು, ಮುಸ್ಲಿಂ ಮಸೀದಿ, ಜೈನ್ ಬಸೀದಿ, ಪಾಂಡುರಂಗ, ವಿಠಲ-ರುಕ್ಮಿಣಿ, ದುರ್ಗಾ ದೇವಿ, ಲಕ್ಷ್ಮೀದೇವಿ, ಶಂಕರಿ ಹೀಗೆ ವಿವಿಧ ದೇವಾಲಯಗಳನ್ನು ಕಾಣಬಹುದಾಗಿದೆ.
ಲೋಕಾಪುರಕ್ಕೆ ದಿನವಿಡಿ ಸಾರಿಗೆ ಸಂಪರ್ಕ ವ್ಯವಸ್ಥೆ ಇದೆ. ಶತಮಾನದ ಹಿಂದೆ ಶತಮಾನದ ಹಿಂದೆ ಬ್ರಿಟಿಷ್‌ರಿಂದ ನಿರ್ಮಾಣವಾದ ಸೇತುವೆ ರಸ್ತೆ ಅಗಲೀಕರನ ನೆಪದಲ್ಲಿ ನಾಶವಾಗಿದೆ. ಈಗ ಅದರ ನೆನಪು ಎಲ್ಲರನ್ನೂ ಕಾಡುತ್ತಿದೆ. ನಾಡಿನ
ಪುಣ್ಯಕ್ಷೇತ್ರಗಳಲ್ಲಿ ಲೋಕಾಪುರ ಪಟ್ಟಣವು ಪುಣ್ಯ ಕ್ಷೇತ್ರವಾಗಿದೆ. ಜೀವನದಲ್ಲಿ ಒಮ್ಮೆಯಾದರೂ ಇಲ್ಲಿಗೆ ಆಗಮಿಸಿ, ತಾವು ಪುನೀತರಾಗಬಹುದು.