Advertisement

ಸಾಲ ಮನ್ನಾಕ್ಕೆ ಒತ್ತಾಯಿಸಿ ಜಾಥಾ

10:53 AM Aug 21, 2017 | Team Udayavani |

ಜೇವರ್ಗಿ: ರೈತರ ಸಾಲ ಸಂಪೂರ್ಣ ಮನ್ನಾ ಮಾಡುವಂತೆ ಆಗ್ರಹಿಸಿ ತಾಲೂಕಿನಾಧ್ಯಂತ ಕರ್ನಾಟಕ ಪ್ರಾಂತ ರೈತ
ಸಂಘ ತಾಲೂಕು ಸಮಿತಿ ವತಿಯಿಂದ ಜೀಪ್‌ ಜಾಥಾ ಆಯೋಜಿಸಲಾಗಿದೆ. ತಾಲೂಕಿನ ಗಂವ್ಹಾರ ಗ್ರಾಮದಲ್ಲಿ ಜೀಪ್‌ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಸುಭಾಷ ಹೊಸಮನಿ, ಕಳೆದ ಮೂರ್‍ನಾಲ್ಕು ವರ್ಷಗಳಿಂದ ರಾಜ್ಯದ ರೈತರು, ಕೃಷಿ ಕೂಲಿಕಾರ್ಮಿಕರು ಭೀಕರ ಬರಗಾಲದಿಂದ ತೀವ್ರ ಸಂಕಷ್ಟದಲ್ಲಿದ್ದಾರೆ. ಬ್ಯಾಂಕ್‌, ಖಾಗಿಯವರಿಂದ ತಂದಿರುವ ಸಾಲಲಗಳಲ್ಲದೇ ತಮ್ಮ ಬಳಿಯಿರುವ ಬಂಡವಾಳ ಕಳೆದುಕೊಂಡು ಅಸಹಾಯಕತೆಯಿಂದ ರೈತರು ನರಳುವಂತಾಗಿದೆ. ಅಲ್ಲದೇ ಬರಗಾಲದಿಂದ ಕ್ರ‚ಇ ಬಿಕ್ಕಟ್ಟು ಎದುರಾಗಿ ರೈತರು ಆತ್ಮಹತ್ಯೆಗೆ ತುತ್ತಾಗುತ್ತಿದ್ದಾರೆ. ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮೂರು ವರ್ಷದಲ್ಲಿ ಬಂಡವಾಳಶಾಹಿಗಳಿಗೆ ಹಾಗೂ ಕಾರ್ಪೋರೇಟ್‌ ಕಂಪನಿಗಳ ಸುಮಾರು 12 ಲಕ್ಷ ಕೋಟಿ ರೂ. ತೆರಿಗೆ ವಿನಾಯಿತಿ ಹಾಗೂ ಸಾಲಮನ್ನಾ ಮಾಡಿರುವುದು ಖಂಡನೀಯ. ಆದ್ದರಿಂದ ಕೂಡಲೇ ಕೇಂದ್ರ ಸರಕಾರ ರೈತರ, ದಲಿತರ, ಕೃಷಿ ಕೂಲಿಕಾರ್ಮಿಕರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಡಾ| ಎಂ.ಎಸ್‌. ಸ್ವಾಮಿನಾಥನ್‌ ವರದಿ ಆಧಾರಿತ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು. ಕೃಷಿಕರ ಪರವಾದ ಬೆಳೆವಿಮೆ ನೀತಿ ಜಾರಿಯಾಗಬೇಕು. ರೈತರಿಗೆ ಹಾಗೂ ಕೂಲಿಕಾರ್ಮಿಕರಿಗೆ 5,000 ರೂ. ಮಾಸಿಕ ವೇತನ ನೀಡಬೇಕು. ಭೂಮಿಗೆ ನ್ಯಾಯವಾದ ಬೆಲೆ ನಿಗದಿ ಮಾಡಬೇಕು. ಸರಕಾರಿ ಹಾಗೂ ಭೂಮಿ ಉಳುಮೆದಾರರಿಗೆ ಹಕ್ಕು ಪತ್ರ ವಿತರಣೆ ಮಾಡಬೇಕು. ಭೂರಹಿತ ಬಡವರಿಗೆ
ಹಾಗೂ ದಲಿತರಿಗೆ ಭೂ ಮಂಜೂರಾತಿ ನೀಡಬೇಕು. ಎಲ್ಲ ಬಡವರಿಗೂ ರೇಷನ್‌ ಕಾರ್ಡ್‌ ಮಂಜೂರಾತಿಗಾಗಿ ಹಾಗೂ
ಆನ್‌ಲೈನ್‌ ತೊಂದರೆ ನಿವಾರಣೆ ಮಾಡಬೇಕು ಎಂದು ಸರಕಾರಕ್ಕೆ ಆಗ್ರಹಿಸಿದರು. ಎಲ್ಲ ಬೇಡಿಕೆಗಳ ಈಡೇರಿಕೆಗೆ
ಆಗ್ರಹಿಸಿ ಆ. 22ರಂದು ಮಂಗಳವಾರ ಜಿಲ್ಲಾಧಿ ಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ರೈತ ಬಾಂಧವರು, ಕೂಲಿಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು. ನಂತರ ತಾಲೂಕಿನ ಮಾರಡಗಿ, ಆಂದೋಲಾ, ಯಡ್ರಾಮಿ, ವಸ್ತಾರಿ, ಕುಮ್ಮನಸಿರಸಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜೀಪ್‌ ಜಾಥಾ ನಡೆಸಲಾಯಿತು. ಜಾಥಾ ಸಂದರ್ಭಧಲ್ಲಿ ರೈತ ಸಂಘ ಪ್ರಧಾನ ಕಾರ್ಯದರ್ಶಿ ಸಿದ್ರಾಮ ಹರವಾಳ, ದಲಿತ ಹಕ್ಕುಗಳ ಸಮಿತಿ ತಾಲೂಕು ಸಂಚಾಲಕ ಪರಶುರಾಮ ಬಡಿಗೇರ, ಬಸಪ್ಪ ಕೋಳಕೂರ, ಅಂಬಣ್ಣ ಕೋಳಕೂರ, ಬಸವರಾಜ ಬಡಿಗೇರ ಸೇರಿದಂತೆ ಹಲವಾರು ಜನ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next