ಬೆಂಗಳೂರು: ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವು ಕಾರ್ಮಿಕ ಸಂಘಟನೆಗಳು ಸೋಮವಾರ ಬೃಹತ್ ಜಾಥಾ, ಬೈಕ್ ರ್ಯಾಲಿ ನಡೆಸುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದವು.
ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನಾ ಜಾಥಾ ನಡೆಸಿದ ಸಂಘಟನೆಗಳು, ಮಧ್ಯಾಹ್ನ 12 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಸೇರಿ, ಸಿಐಟಿಯು ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ ಬಹಿರಂಗ ಸಭೆಗೆ ಸಾಥ್ ನೀಡಿದವು.
ಕರ್ನಾಟಕ ಕಾರ್ಮಿಕ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಮಿನರ್ವ ಸರ್ಕ್‌ಲ್‌ನಲ್ಲಿ ಕಾರ್ಮಿಕರ ಬೃಹತ್ ಜಾಥಾಗೆ ಚಾಲನೆ ನೀಡಲಾಯಿತು.ಗಾರ್ಮೆಂಟ್ಸ್, ಬ್ಯಾಂಕ್ ಕಾರ್ಮಿಕರ ಒಕ್ಕೂಟ ಸೇರಿ ಅಸಂಘಟಿತ ವಲಯದ ಸಾವಿರಾರು ಕಾರ್ಮಿಕರು ಕೆಂಪು ಅಂಗಿ ಧರಿಸಿ ಜಾಥಾದಲ್ಲಿ ಹೆಜ್ಜೆಹಾಕಿದರು.
“ಕೆಂಪು’ ಕಾರ್ಮಿಕರ ಹೆಜ್ಜೆಗೆ ಆಕರ್ಷಕ ಬ್ಯಾಂಡ್ ಸಾಥ್ ನೀಡುತ್ತಿತ್ತು. ನಿರ್ದಿಷ್ಟ ವೇತನ ನಿಗದಿ, ಕಾರ್ಮಿಕ ಹಕ್ಕುಗಳ ರಕ್ಷಣೆ, ಕಾರ್ಮಿಕರ ವೇತನ ಕಾಯ್ದೆ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕಾರ್ಮಿಕರು ಘೋಷಣೆ ಕೂಗಿದರು.
ಕೆಂಪಂಗಿ ಹಾಗೂ ಕೆಂಬಾವುಟಗಳೇ ರಾರಾಜಿಸುತ್ತಿದ್ದ ಜಾಥಾ ಮಿನರ್ವ್ ಸರ್ಕಲ್‌ನಿಂದ ಹೊರಟ ಕಾರ್ಮಿಕರ ಜಾಥಾ, ಟೌನ್ ಹಾಲ್, ಜೆ.ಸಿ ರಸ್ತೆ ಮೈಸೂರು ಬ್ಯಾಂಕ್ ಸರ್ಕಲ್, ಶೇಷಾದ್ರಿ ರಸ್ತೆ ಮೂಲಕಫ್ರೀಡಂ ಪಾರ್ಕ್ ತಲುಪಿತು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಇ.ಕೆ.ಎನ್ ರಾಜನ್, ಜಂಟಿ ಕಾರ್ಯದರ್ಶಿ ಮಿಲ್ಕೈರ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು. ಹಾಗೇ ವಂಡರ್ ಲಾ, ಅಪೆಕ್ಸ್ ಆಟೋ ಎಂಪ್ಲಾಯಿಸ್ ಯೂನಿಯನ್ ಸಂಘಟನೆಗಳ ಕಾರ್ಯಕರ್ತರು ಟೌನ್ ಹಾಲ್ ಬಳಿ ಬೈಕ್ ರ್ಯಾಲಿ ನಡೆಸಿದರು.