Advertisement

Politics: ಹೇಳಿಕೆಗೆ ಬೀಳದ ತಡೆ-ಕಾಂಗ್ರೆಸ್‌ನಲ್ಲಿ ಮುಂದುವರಿದ ಮುಖ್ಯಮಂತ್ರಿ ಹುದ್ದೆ ಜಟಾಪಟಿ

11:01 PM Oct 28, 2023 | Team Udayavani |

ಬೆಂಗಳೂರು: ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹುದ್ದೆ, ಅಧಿಕಾರ ಹಂಚಿಕೆ ಸಹಿತ ಪಕ್ಷದ ಸೂಕ್ಷ್ಮ ವಿಷಯಗಳನ್ನು ಬಹಿರಂಗವಾಗಿ ಚರ್ಚಿಸದಂತೆ ಕೆಪಿಸಿಸಿ ಅಧ್ಯಕ್ಷರೇ ಕಟ್ಟಾಜ್ಞೆ ವಿಧಿಸಿದ್ದರೂ ಗಣನೆಗೆ ತೆಗೆದುಕೊಳ್ಳದ ಆಡಳಿತಾರೂಢ ಕಾಂಗ್ರೆಸ್‌ ಶಾಸಕರು, ಸಚಿವರು ಮತ್ತೆ ಪುಂಖಾನುಪುಂಖವಾಗಿ ಹೇಳಿಕೆಗಳನ್ನು ಕೊಡಲಾರಂಭಿಸಿದ್ದಾರೆ.

Advertisement

ಸಿದ್ದರಾಮಯ್ಯ ಸರಕಾರಕ್ಕೆ ಸ್ಪಷ್ಟ ಬಹುಮತವಿದ್ದರೂ ಭಿನ್ನಮತ ಮಾತ್ರ ತಣ್ಣಗಾಗಿಲ್ಲ. ಐದು ವರ್ಷ ಪೂರ್ತಿ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ಕೆಲವರು ಹೇಳಿದರೆ, ಡಿಸಿಎಂ ಶಿವಕುಮಾರ್‌ ಅವರು ಕಷ್ಟಪಟ್ಟಿದ್ದಾರೆ, ಅವರು ಸಿಎಂ ಆಗಿಯೇ ಆಗುತ್ತಾರೆ ಎಂದು ಇನ್ನು ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ. ಇನ್ನೊಂದಿಷ್ಟು ಮಂದಿ ಎರಡೂವರೆ ವರ್ಷಗಳ ಅನಂತರ ಸಚಿವ ಸಂಪುಟ ಪುನಾರಚನೆ, ಅಧಿಕಾರ ಹಂಚಿಕೆ ಪ್ರಕ್ರಿಯೆಗಳು ನಡೆಯಲಿವೆ ಎಂದು ಪ್ರತಿಪಾದಿಸಿದ್ದಾರೆ.

ಒಟ್ಟಾರೆಯಾಗಿ ಕಾಂಗ್ರೆಸ್‌ನಲ್ಲಿ ಮುಸುಕಿನ ಗುದ್ದಾಟದ ಮುಂದುವರಿದಿದ್ದು, ಬಣ ರಾಜಕಾರಣ ಬಿರುಸಾಗುತ್ತಿದೆ. ಅಧಿಕಾರಕ್ಕೆ ಬಂದು ಐದು ತಿಂಗಳಲ್ಲಿ ಹಲವು ಬಾರಿ ಅಧಿಕಾರ ಹಂಚಿಕೆಯ ಬಹಿರಂಗ ಚರ್ಚೆಗಳು ನಡೆದು ತಣ್ಣಗಾಗಿತ್ತು. ಆದರೆ ಅದೇ ವಿಷಯ ಈಗ ಮತ್ತೆ ಮುನ್ನೆಲೆಗೆ ಬಂದು ನಿಂತಿದೆ.

ಸಚಿವರಾದ ಕೆ.ಎನ್‌. ರಾಜಣ್ಣ, ಡಾ| ಎಚ್‌.ಸಿ. ಮಹದೇವಪ್ಪ  ಅವರು ಸಿದ್ದರಾಮಯ್ಯ ಪರ ಧ್ವನಿ ಎತ್ತಿದ್ದರೆ, ಶಾಸಕರಾದ ಗಣಿಗ ರವಿಕುಮಾರ್‌, ಕದಲೂರು ಉದಯ್‌ ಅವರು ಉಪ ಮುಖ್ಯಮಂತ್ರಿ ಡಿಕೆಶಿ ಪರ ಮಾತಾಡಿದ್ದಾರೆ.

ನಿಗಮ-ಮಂಡಳಿಗಳಿಗೆ ಶೀಘ್ರ ನೇಮಕಾತಿ ಆದರಷ್ಟೇ ಈ ಚರ್ಚೆಗೆ ತಡೆ ಬೀಳಬಹುದು ಎನ್ನುವಂತಾಗಿದೆ.

Advertisement

ಪರಮೇಶ್ವರ್‌ ಮನೆ ಪಕ್ಕದಲ್ಲೇ ಇದ್ದ ಶಿವಕುಮಾರ್‌ ಅವರನ್ನು ಔತಣಕ್ಕೆ ಏಕೆ ಕರೆದಿರಲಿಲ್ಲ ಎಂದು ನನ್ನನ್ನು ಕೇಳಿದರೆ ನಾನೇನು ಹೇಳಲು ಸಾಧ್ಯ? ನಮ್ಮನ್ನು ಔತಣಕ್ಕೆ ಕರೆದಿದ್ದರು, ಹೋಗಿದ್ದೆವು. ಪರಮೇಶ್ವರ್‌ ಸಿಎಂ ಆಗುವ ಬಗ್ಗೆ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ಅಂತೂ 5 ವರ್ಷ ಸಿಎಂ ಆಗಿರುತ್ತಾರೆ.

– ಡಾ| ಎಚ್‌.ಸಿ. ಮಹದೇವಪ್ಪ,  ಸಮಾಜ ಕಲ್ಯಾಣ ಸಚಿವ

ಒಬ್ಬೊಬ್ಬರದು ಒಂದೊಂದು ಅಭಿಪ್ರಾಯ ಇದೆ. ಎರಡೂ ವರೆ ವರ್ಷಗಳ ಬಳಿಕ ಡಿ.ಕೆ. ಶಿವಕುಮಾರ್‌ ಸಿಎಂ ಆಗುತ್ತಾರೆ ಎಂದು ಗಣಿಗ ರವಿ ಹೇಳುತ್ತಾರೆ. ಐದು ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ನಾನು ಹೇಳುತ್ತೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ.

– ಕೆ.ಎನ್‌. ರಾಜಣ್ಣ, ಸಹಕಾರ ಸಚಿವ

ಮಹದೇವಪ್ಪ  ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು. ಸಿದ್ದರಾಮಯ್ಯ-  ಶಿವಕುಮಾರ್‌ ನಡುವೆ ಭಿನ್ನಾಭಿಪ್ರಾಯಗಳಿಲ್ಲ. ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ. ಹಾಗೇನಾದರೂ ಇದ್ದರೆ, ಶಾಸಕಾಂಗ ಸಭೆ, ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳಲಿದೆ.

– ಎನ್‌. ಚಲುವರಾಯಸ್ವಾಮಿ, ಕೃಷಿ ಸಚಿವ

ಮಾಧ್ಯಮದವರು ಪ್ರಶ್ನೆ ಕೇಳಿದಾಗ 136 ಶಾಸಕರು ಸಿದ್ದರಾಮಯ್ಯ, ಪರಮೇಶ್ವರ್‌, ಡಿ.ಕೆ. ಶಿವಕುಮಾರ್‌ ಜತೆ ಇದ್ದಾರೆ ಎಂದಿದ್ದೇನೆ. ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್‌ ಏನು ಹೇಳಿದೆಯೋ ಗೊತ್ತಿಲ್ಲ. ಸಿಎಂ ಮಾಡುವಾಗ ಮಾಡಿಯೇ ಮಾಡುತ್ತಾರೆ ಎಂದಿದ್ದೆ.

-ಗಣಿಗ ರವಿಕುಮಾರ್‌, ಮಂಡ್ಯ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next