Advertisement
1941ರ ಆಗಸ್ಟ್ 19ರಂದು ಉತ್ತರಾಖಂಡದ ಘರ್ವಾಲ್ ಜಿಲ್ಲೆಯಲ್ಲಿ ಹುಟ್ಟಿದ ಜಸ್ವಂತನಿಗೆ ಸೇನೆ ಮತ್ತು ಅದರ ಕಾರ್ಯಚಟುವಟಿಕೆಗಳೆಂದರೆ ಅಚ್ಚುಮೆಚ್ಚು. ಬೆಳೆಯುತ್ತಿದ್ದಂತೆ ಸೇನೆಯ ಮೇಲೆ ಹಾಗೂ ರಾಷ್ಟ್ರದ ಮೇಲೆ ಹೆಚ್ಚಿದ ಪ್ರೀತಿ ಆತನನ್ನು ಸೇನೆಗೆ ಸೇರಲು ಪ್ರೇರೇಪಿಸಿತು. ನಾಲ್ಕನೇ ಘರ್ವಲ್ ರೈಫಲ್‌ನಲ್ಲಿ ರೈಫಲ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಭಾರತ-ಚೀನ ಮಧ್ಯೆ ಘೋರ ಯುದ್ಧವೊಂದು ಏರ್ಪಟ್ಟಿತು. ತವಾಂಗ್ ಜಿಲ್ಲೆಯ ನುರಾನಂಗ್ ಎಂಬ ಪ್ರದೇಶಕ್ಕೆ ಕಾಲಿಟ್ಟ ಚೀನ ಸೇನೆ, ತನ್ನ ಅಧಿಕಾರವನ್ನು ಅಲ್ಲಿ ಸ್ಥಾಪಿಸಲು ಇಲ್ಲಸಲ್ಲದ ಪ್ರಯತ್ನವನ್ನು ಮಾಡಿತು. ಅಲ್ಲಿದ್ದ ಭಾರತೀಯ ಯೋಧರ ಮೇಲೆ ಗುಂಡು, ಗ್ರೆನೇಡ್ ದಾಳಿಗಳನ್ನು ಮಾಡುತ್ತಲೇ ಇದ್ದಿದ್ದರಿಂದ ನಾಲ್ಕನೇ ಬೆಟಾಲಿಯನ್ ಹಿಂದೆ ಸರಿಯಬೇಕೆಂದು ಮೇಲಧಿಕಾರಿಯ ಆದೇಶವಾಯಿತು. ಆದೇಶವನ್ನು ಲೆಕ್ಕಿಸದೆ ಮುನ್ನುಗ್ಗಿದ ಜಸ್ವಂತ್ ಸಿಂಗ್ ಬರೋಬ್ಬರಿ 300 ಸೈನಿಕರನ್ನು ಹೊಡೆದುರುಳಿಸಿದರು.
Related Articles
Advertisement
ಜನ್ಮಭೂಮಿಗಾಗಿ ಪ್ರಾಣತ್ಯಾಗ ಮಾಡಿದ ಜಸ್ವಂತರ ಆತ್ಮ ಇಂದಿಗೂ ನುರಾನಂಗ್ ಅನ್ನು ರಕ್ಷಿಸುತ್ತಿದೆ ಎಂಬುದು ಜನರ ನಂಬಿಕೆ ಯಾಗಿದೆ. ಅದು ಕೇವಲ ನಂಬಿಕೆಯಲ್ಲ, ಅದರ ಅನುಭವವೂ ಹಲವಾರು ಸಲ ಆ ಪ್ರದೇಶದಲ್ಲಿ ಆಗಿದೆ. 59 ವರ್ಷಗಳು ಕಳೆದಿವೆ. ಇಂದಿಗೂ ಜಸ್ವಂತರ ಕೋಣೆಯಲ್ಲಿ ಅವರ ಬಟ್ಟೆ ಮತ್ತು ಇತರ ವಸ್ತುಗಳನ್ನು ಸಂರಕ್ಷಿಸಿ ಇಡಲಾಗಿದೆ. 5 ಜನ ಸೈನಿಕರು ಅದರ ಎಲ್ಲ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಜಸ್ವಂತ್ ಸಿಂಗ್ ಅವರನ್ನು ಬಾಬಾ ಎಂದು ಕರೆದು ಅವರ ಕೋಣೆಯನ್ನು ಮಂದಿರದಂತೆ ನೋಡಿಕೊಳ್ಳುತ್ತಿದ್ದಾರೆ. ಅವರಿಗಾಗಿ ಪ್ರತೀದಿನ ಬೆಳಗ್ಗಿನ ಜಾವ 4.30ಕ್ಕೆ ಚಹಾ, 9 ಗಂಟೆಗೆ ಉಪಾಹಾರ, ರಾತ್ರಿ 7 ಗಂಟೆಗೆ ಭೋಜನವನ್ನು ಇಡುತ್ತಾರೆ. ಅವರು ಜೀವಂತವಾಗಿ ತಮ್ಮೊಡನೆ ಇರುವರೆಂಬ ಭಾವನೆ ಅಲ್ಲಿನ ಜನರಿಗೆ ಹಾಗೂ ಸೇನೆಗೆ.
ಒಬ್ಬ ರೈಫಲ್ ಮ್ಯಾನ್ ಮೇಜರ್ ಜನರಲ್ ಆಗಿರುವುದು ಇತಿಹಾಸದಲ್ಲಿ ಒಂದೇ ಸಲ. ಆ ವ್ಯಕ್ತಿ ಜಸ್ವಂತ್ ಸಿಂಗ್. ಇಂದಿಗೂ ಅವರಿಗೆ ತಿಂಗಳ ವೇತನ ಮತ್ತು ಅಧಿಕೃತ ರಜೆಗಳನ್ನು ಸೇನೆಯಿಂದ ಮಂಜೂರು ಮಾಡಲಾಗುತ್ತಿದೆ.
ನಿಸ್ವಾರ್ಥ, ಅಪ್ರತಿಮ, ಶೌರ್ಯ, ಧೈರ್ಯ ಮೆರೆದ ಈ ಅಮರ ಸೇನಾನಿಗೆ ಮರಣೋತ್ತರವಾಗಿ ಎರಡನೇ ಅತ್ಯುನ್ನತ ಸೇನಾ ಪ್ರಶಸ್ತಿಯಾದ ಮಹಾವೀರ ಚಕ್ರವನ್ನು ನೀಡಿ ಗೌರವಿಸಲಾಗಿದೆ. ಬರೋಬ್ಬರಿ 300 ಜನರ ಸಾವಿಗೆ ಕಾರಣನಾದ, ತಾಯ್ನಾಡಿಗಾಗಿ ಅಮರತ್ವ ಹೊಂದಿದ ಈ ವೀರಮಣಿಗೆ ಇಂದಿಗೂ ಪರಮವೀರಚಕ್ರವನ್ನು ನೀಡದೇ ಇರುವುದು ಬೇಸರದ ಸಂಗತಿ. ಇವರ ಜತೆ ಸೇರಿ, ಭಾರತಾಂಬೆಯ ಪಾದಗಳಿಗೆ ಪುಷ್ಪವಾಗಿ ಅರ್ಪಿತವಾದ ಸೆಲಾ ಮತ್ತು ನೂರಾ ಎಂಬ ಬಡ ಬುಡಕಟ್ಟು ಹೆಣ್ಣುಮಕ್ಕಳನ್ನು ಗುರುತಿಸುವಲ್ಲಿಯೂ ನಾವು ಎಡವಿದ್ದೇವೆ.
ನಮ್ಮ ಶಿಕ್ಷಣ, ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಅಮೆರಿಕ, ಐರೋಪ್ಯ ರಾಷ್ಟ್ರಗಳು ಮತ್ತು ಅದರ ನಾಯಕರುಗಳ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ಕೊಡುತ್ತದೇನೋ..!! ಆದರೆ, ನಮ್ಮದೇ ನಾಡಿನಲ್ಲಿ ಹುಟ್ಟಿ, ನಮಗಾಗಿಯೇ ಪ್ರಾಣತೆತ್ತ ಅಸಂಖ್ಯ ಜ್ಯೋತಿಯನ್ನು ಗುರುತಿಸದೇ ಇರುವುದು ನಮ್ಮ ದುರಂತವೇ ಸರಿ. ನಮ್ಮ ಚರಿತ್ರೆ ನಾವಲ್ಲದೆ ಇನ್ನಾರು ತಿಳಿದುಕೊಳ್ಳಲು ಸಾಧ್ಯ. ಹಾಗಾಗಿ ದೇಶದ ಬಗ್ಗೆ ಮೊದಲು ತಿಳಿದುಕೊಳ್ಳೋಣ.
ಶ್ರೀಲಕ್ಷ್ಮೀ ಮಠದಮೂಲೆ
ವಿ.ವಿ. ಮಂಗಳೂರು