ಬೆಂಗಳೂರು: ಟೀಂ ಇಂಡಿಯಾದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಹಲವು ಸಮಯದಿಂದ ಕ್ರಿಕೆಟ್ ನಿಂದ ದೂರವಿದ್ದಾರೆ. ಬೆನ್ನು ನೋವಿನ ಕಾರಣದಿಂದ ತಂಡದಿಂದ ಬಿದ್ದ ಬುಮ್ರಾ ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ (ಎನ್ ಸಿಎ) ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರ್ಷ ತವರಿನಲ್ಲಿ ನಡೆಯುವ ಏಕದಿನ ವಿಶ್ವಕಪ್ ಗೆ ತಯಾರಿ ನಡೆಸುತ್ತಿರುವ ಭಾರತ ತಂಡವು ಬುಮ್ರಾ ಅವರ ಪುನರಾಗಮನ ಬಯಸಿದೆ. ಇದೇ ವೇಳೆ ಬುಮ್ರಾ ಶುಭ ಸುದ್ದಿಯೊಂದನ್ನು ನೀಡಿದ್ದಾರೆ.
ಎನ್ ಸಿಎ ಯಲ್ಲಿರುವ ಬುಮ್ರಾ ಇದೀಗ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಬೌಲಿಂಗ್ ಮಾಡುವುದನ್ನು ನೋಡಬಹುದು.
ಬುಮ್ರಾ ಅವರು ಸದ್ಯ ಚೇತರಿಸಿಕೊಂಡಿದ್ದು, ಎನ್ ಸಿಎಯಲ್ಲಿ ದಿನಕ್ಕೆ 8ರಿಂದ 10 ಓವರ್ ಬೌಲಿಂಗ್ ಮಾಡುತ್ತಿದ್ದಾರೆಂದು ಕೆಲ ದಿನಗಳ ಹಿಂದೆ ಕ್ರಿಕ್ ಬಜ್ ವರದಿ ಮಾಡಿತ್ತು. “ಬುಮ್ರಾ ಐರ್ಲೆಂಡ್ ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಿದೆ. ಭಾರತದ ಮುಂಚೂಣಿಯ ಬೌಲರ್ ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಪ್ರಗತಿಯನ್ನು ತೋರಿದ್ದಾರೆ. ಶ್ರೇಯಸ್ ಅಯ್ಯರ್ ಲಭ್ಯತೆಯ ಯಾವುದೇ ಗ್ಯಾರಂಟಿ ಇಲ್ಲ, ಆದರೆ ಕೆ ಎಲ್ ರಾಹುಲ್ ಐರ್ಲೆಂಡ್ ಸರಣಿಯಲ್ಲಿ ಮಾತ್ರವಲ್ಲದೆ ಏಷ್ಯಾ ಕಪ್ 2023 ನಲ್ಲಿಯೂ ಕಾಣಿಸಿಕೊಳ್ಳುವ ಅವಕಾಶವಿಲ್ಲ. ರಾಹುಲ್ ಪ್ರಸ್ತುತ ಎನ್ ಸಿಎ ಯಲ್ಲಿ ರಿಹ್ಯಾಬ್ ಗೆ ಒಳಗಾಗುತ್ತಿದ್ದಾರೆ. ಅವರು ಇನ್ನಷ್ಟೇ ಬ್ಯಾಟಿಂಗ್ ಆರಂಭಿಸಬೇಕಿದೆ” ಎಂದು ಕೆಲ ದಿನದ ಹಿಂದೆ ಕ್ರಿಕ್ ಬಜ್ ವರದಿ ಉಲ್ಲೇಖಿಸಿದೆ.
ಸದ್ಯ ಕೆಎಲ್ ರಾಹುಲ್ ಅವರು ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಆದರೆ ಅವರು ಸಂಪೂರ್ಣ ಫಿಟ್ ಆಗಿ ತಂಡ ಸೇರಲು ತಡವಾಗಬಹುದು. ವಿಶ್ವಕಪ್ ಗಿಂತ ಮೊದಲಿನ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಕನ್ನಡಿಗ ತಂಡ ಸೇರಬಹುದು