ಬೆಂಗಳೂರು: ಎಲ್ಲೆಡೆ ಹರಡಿರುವ ಮಲ್ಲಿಗೆಯ ಕಂಪು, ಅಲಂಕಾರಿಕ ದೀಪಗಳಿಂದ ಕಂಗೊಳಿಸುತ್ತಿರುವ ರಸ್ತೆಗಳು, ಹೂವಿನ ಕರಗ ನೋಡಲು ಕಿಕ್ಕಿರಿದ ಜನ, ಮುಗಿಲು ಮಟ್ಟಿದ ಹರ್ಷೋದ್ಘಾರದ ನಡುವೆ ಗೋವಿಂದ… ನಾಮಸ್ಮರಣೆ.
ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ತಿಗಳರ ಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಸುತ್ತ ಕಂಡಂತಹ ದೃಶ್ಯಗಳಿವು. ವರ್ಷದ ಚೈತ್ರ ಪೌರ್ಣಿಮೆಯಂದು ಶುಕ್ರವಾರ ತಡರಾತ್ರಿ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಟ ಹೂವಿನ ಕರಗ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.
ಮಲ್ಲಿಗೆ ಹೂವುಗಳಿಂದ ಅಲಂಕೃತಗೊಂಡಿದ್ದ ಕರಗ ದೇವಾಲಯದಿಂದ ಹೊರ ಬರುತ್ತಿದ್ದಂತೆ ಭಕ್ತರು ಮಲ್ಲಿಗೆ ಹೂಗಳನ್ನು ಚೆಲ್ಲಿ ಜೈಕಾರ ಹಾಕಿದರು. ಮೊದಲಿಗೆ ದೇವಸ್ಥಾನದ ಪ್ರದಕ್ಷಿಣೆ ಹಾಕಿ, ಸಮೀಪದ ಶಕ್ತಿ ಗಣಪತಿ ಮತ್ತು ಮುತ್ಯಾಲಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿದ ಹೂವಿನ ಕರಗ, ಖಡ್ಗ ಹಿಡಿದಿದ್ದ ನೂರಾರು ವೀರ ಕುಮಾರರ ನಡುವೆ ನಗರದಲ್ಲಿ ಸಂಚರಿಸಿತು.
ರಾತ್ರಿ ಕರಗ ಹೊರ ಬರುವ ಮುನ್ನವೇ ಹೂ ಹಾಗೂ ತಳಿರು ತೋರಣದಿಂದ ಸಿಂಗಾರಗೊಂಡಿದ್ದ ಮಹಾರಥದಲ್ಲಿ ಅರ್ಜುನ, ದ್ರೌಪದಿದೇವಿ ಹಾಗೂ ಮುತ್ಯಾಲಮ್ಮ ದೇವರನ್ನು ಹೊತ್ತ ರಥಗಳೊಂದಿಗೆ ಉತ್ಸವ ಮೂರ್ತಿಗಳ ಮೆರವಣಿಗೆ ಸಾಗಿತು.
ನಗರದ ಹಲವಾರು ದೇವಾಲಯಗಳಲ್ಲಿ ಪೂಜೆ ಸ್ವೀಕರಿಸುತ್ತಾ, ಹಲವು ಬಡಾವಣೆಗಳ ಮೂಲಕ ಸಾಗುವಾಗ ಭಕ್ತರು ರಸ್ತೆಯಲ್ಲಿ ನೀರು ಹಾಕಿ ಪೂಜೆ ಸಲ್ಲಿಸಿದರು. ಅಂತಿಮವಾಗಿ ಕರಗ ಮುಂಜಾನೆ ವೇಳೆಗೆ ಧರ್ಮರಾಯಸ್ವಾಮಿ ದೇವಾಲಯಕ್ಕೆ ಹಿಂದಿರುಗಿ ಗರ್ಭಗುಡಿಯ ಮಧ್ಯಭಾಗದಲ್ಲಿದ್ದ ಶಕ್ತಿಪೀಠದಲ್ಲಿ ಸ್ಥಾಪನೆಯಾಯಿತು.
ಧಾರ್ಮಿಕ ವಿಧಿ-ವಿಧಾನ: ಅರ್ಚಕ ಎನ್.ಮನು ಅವರು, ಗೌಡರು, ಗಣಾಚಾರಿ, ಗಂಟೆ ಪೂಜಾರಿಯ ಉಸ್ತುವಾರಿಯಲ್ಲಿ ವೀರಕುಮಾರರ ಜತೆ ಮಂಗಳ ವಾದ್ಯಗಳೊಂದಿಗೆ ಮೂಲಸ್ಥಾನ ಕರಗದ ಕುಂಟೆಯಲ್ಲಿ ಪುಣ್ಯ ಸ್ನಾನ ಮಾಡಿ ಗಂಗಾ ಪೂಜೆ ನೆರವೇರಿಸಿದರು. ಅಲ್ಲಿಂದ ಸಂಪಗಿ ಕೆರೆಯ ಶಕ್ತಿ ಪೀಠದಲ್ಲಿ ಪೂಜೆ ಸಲ್ಲಿಸಿ ದೇವಸ್ಥಾನಕ್ಕೆ ಹಿಂತಿರುಗಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಮಧ್ಯರಾತ್ರಿ 12ರ ವೇಳೆಗೆ ಅರ್ಚಕ ಎನ್.ಮನು ವಿಶೇಷ ಪೂಜೆ ನೆರವೇರಿಸಿದರು.
ಕಾಟನ್‌ಪೇಟೆಗಿಲ್ಲ ಕರಗ: ಹೋವಿನ ಕರಗವು ಈ ಬಾರಿ ಕಾಟನ್ ಪೇಟೆ ರಸ್ತೆಯಲ್ಲಿ ಸಂಚರಿಸಲಿಲ್ಲ. ಕಾರಣ ಬಿಬಿಎಂಪಿ ವತಿಯಿಂದ ಕಾಟನ್‌ಪೇಟೆ ಮುಖ್ಯರಸ್ತೆಯಲ್ಲಿ ಟೆಂಡರ್‌ಶ್ಯೂರ್ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಕಾಟನ್‌ಪೇಟೆ ರಸ್ತೆಯ ಬದಲಿಗೆ ಅಕ್ಕಿಪೇಟೆ ರಸ್ತೆ ಮೂಲಕ ಸಾಗಿತು.
ರಥ ಎಳೆದು ಸಂಭ್ರಮಿಸಿದ ಭಕ್ತರು: ಶುಕ್ರವಾರ ತಡರಾತ್ರಿ ಕರಗದ ಜತೆ ಧರ್ಮರಾಯಸ್ವಾಮಿ ರಥೋತ್ಸವ ಮತ್ತು ಮುತ್ಯಾಲಮ್ಮ ದೇವಿ ರಥೋತ್ಸವ ನಡೆಯಿತು. ವಿಶೇಷವಾಗಿ ಅಲಂಕರಿಸಿದ್ದ ಧರ್ಮರಾಯಸ್ವಾಮಿ ರಥದಲ್ಲಿ ಅರ್ಜುನ, ದ್ರೌಪದಿ ದೇವಿ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ಮುತ್ಯಾಲಮ್ಮ ದೇವಿ ರಥ ಎಳೆಯುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು.
22ರಂದು ಉತ್ಸವಕ್ಕೆ ತೆರೆ: ಕರಗ ಮಹೋತ್ಸವವು ಏ.22ರಂದು ಕರಗ ಹೊರುವ ಅರ್ಚಕ ಮನು ಒನಕೆ ಮೇಲೆ ಅರಿಶಿಣ ನೀರು ತುಂಬಿದ ತೆರೆದ ಪಾತ್ರೆಯನ್ನು ತಲೆ ಮೇಲೆ ಹೊತ್ತು ಕುಣಿಯುತ್ತಾರೆ. ಈ ವೇಳೆ ತಿಗಳ ಸಮುದಾಯದ ವೀರಕುಮಾರರು ಓಕುಳಿಯಾಡುತ್ತಾರೆ. ಓಕುಳಿ ಬಳಿಕ ಉತ್ಸವ ಮೂರ್ತಿ, ವೀರಕುಮಾರರ ಅಲಗು, ಪೂಜಾ ಪರಿಕರಗಳನ್ನು ಕಲ್ಯಾಣಿಯಲ್ಲಿ ಶುಚಿಗೊಳಿಸಿ ಧರ್ಮರಾಯಸ್ವಾಮಿ ದೇವಾಲಯಕ್ಕೆ ಹಿಂತಿರುಗಿದ ನಂತರ ಉತ್ಸವಕ್ಕೆ ಅಧಿಕೃತ ತೆರೆ ಬೀಳಲಿದೆ.
ಬೆಂಕಿ ಅವಘಡ: ಉತ್ಸವ ಆರಂಭಕ್ಕೂ ಮೊದಲು ಧರ್ಮರಾಯಸ್ವಾಮಿ ದೇವಾಲಯ ಸಮೀಪದ ಎಸ್.ಪಿ.ರಸ್ತೆಯ ಸ್ಪೀಕರ್ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಭಕ್ತರ ಆತಂಕಕ್ಕೆ ಕಾರಣವಾಗಿತ್ತು. ಮಳಿಗೆಯಲ್ಲಿ ಹೊಗೆ ತುಂಬಿಕೊಂಡಿರುವುದನ್ನು ಕಂಡು ಸ್ಥಳೀಯರು ಹಾಗೂ ಮಾಲೀಕರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿ ನಂದಿಸಿ ಆತಂಕ ದೂರ ಮಾಡಿದರು.