Advertisement

Chikkodi: ಚಿಕ್ಕೋಡಿ ಕ್ಷೇತ್ರದ ಮೇಲೆ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಕಣ್ಣು

03:25 PM Sep 05, 2023 | Team Udayavani |

ಬೆಳಗಾವಿ: ರಾಜಕೀಯ ಕ್ಷೇತ್ರದಲ್ಲಿ ಮತ್ತೆ ಅಂತೆ ಕಂತೆಗಳ ಸಾಮ್ರಾಜ್ಯ ಸಕ್ರಿಯವಾಗಿದೆ. ಲೋಕಸಭೆ ಚುನಾವಣೆ ಕಾಲ ಸನ್ನಿಹಿತವಾಗುತ್ತಿರುವಂತೆ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಲ್ಲಿ ಆಕಾಂಕ್ಷಿಗಳ ಅಂತೆ ಕಂತೆ ದಿನಕ್ಕೊಂದು ರೆಕ್ಕೆಪುಕ್ಕ ಪಡೆಯುತ್ತಿವೆ. ಟಿಕೆಟ್‌ ಗಾಗಿಯೇ ಹೊಸ ನಾಯಕರು ಹುಟ್ಟಿಕೊಳ್ಳುತ್ತಿದ್ದಾರೆ. ಇದಕ್ಕೆ ಗಡಿ ಜಿಲ್ಲೆ ಬೆಳಗಾವಿ ಒಂದು ಒಳ್ಳೆಯ ಉದಾಹರಣೆ. ಲೋಕಸಭೆ ಚುನಾವಣೆ ಯಾವಾಗ ಬೇಕಾದರೂ ಬರಬಹುದು ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ.

Advertisement

ಇದಕ್ಕೆ ಪೂರಕವಾಗಿ ಕಳೆದ ಒಂದೆರಡು ತಿಂಗಳಿಂದ ಜಿಲ್ಲೆಯಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿಯೇ ನಡೆದಿದೆ. ಚುನಾವಣೆಗಾಗಿ ಟಿಕೆಟ್‌ ಆಕಾಂಕ್ಷಿಗಳ ಹೆಸರು ಪೈಪೋಟಿ ಮೇಲೆ ಕೇಳಿ ಬರಲಾರಂಭಿಸಿವೆ. ಅದಕ್ಕೆ ತಕ್ಕಂತೆ ಲಾಬಿ ಕೂಡ ಶುರುವಾಗಿದೆ. ಚಿಕ್ಕೋಡಿ ಕ್ಷೇತ್ರ ಮೊದಲಿಂದಲೂ ಜಿದ್ದಾಜಿದ್ದಿಗೆ ಹೆಸರಾದ ಕ್ಷೇತ್ರ. ಟಿಕೆಟ್‌ ವಿಚಾರದಲ್ಲೂ ಇದು ಯಾವಾಗಲೂ ಸುದ್ದಿ ಮಾಡಿದೆ. ವಿಧಾನಸಭೆ ಚುನಾವಣೆ ಭರ್ಜರಿ ಅಂತರದಿಂದ ಗೆದ್ದ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್‌ ಈ ಬಾರಿಯ ಚುನಾವಣೆ ಗಂಭೀರವಾಗಿ ತೆಗೆದುಕೊಂಡಿದೆ.

ಬಿಜೆಪಿ ಹಿಡಿತದಲ್ಲಿರುವ ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಯಾರಿಗೆ ಎಂಬುದು ಸ್ಪಷ್ಟವಾಗಿ ಕಂಡಿಲ್ಲ. ಹೀಗಾಗಿ ರಾಜಕೀಯ ಚಟುವಟಿಕೆಗಳು ಅಷ್ಟಾಗಿ ಕಾಣುತ್ತಿಲ್ಲ. ಕಳೆದ ಚುನಾವಣೆಯಲ್ಲಿ ಹಾಲಿ ಸಂಸದ ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆಗೆ ಪೈಪೋಟಿ ನೀಡಿದ್ದ ಹಿರಿಯ ಅನುಭವಿ ಪ್ರಕಾಶ ಹುಕ್ಕೇರಿ ಈ ಬಾರಿಯೂ ಕಾಂಗ್ರೆಸ್‌ ಟಿಕೆಟ್‌ ಪಡೆಯುವವರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ.

ಮೂಲಗಳ ಪ್ರಕಾರ ಕಾಂಗ್ರೆಸ್‌ ಈ ಬಾರಿ ಬೆಳಗಾವಿ, ಚಿಕ್ಕೋಡಿಯಲ್ಲಿ ಒಂದು ಲಿಂಗಾಯತ ಮತ್ತೂಂದು ಕಡೆ ಲಿಂಗಾಯತೇತರ ಅಭ್ಯರ್ಥಿಗೆ ಟಿಕೆಟ್‌ ನೀಡಲು ನಿರ್ಧರಿಸಿದೆ. ಅದರಂತೆ ಚಿಕ್ಕೋಡಿಯಲ್ಲಿ ಲಿಂಗಾಯತರಿಗೆ ಟಿಕೆಟ್‌ ಸಿಕ್ಕರೆ ಬೆಳಗಾವಿಯಲ್ಲಿ ಲಿಂಗಾಯತ ಹೊರತಾಗಿ ಬೇರೆ ಸಮಾಜದವರಿಗೆ ಟಿಕೆಟ್‌ ಸಿಗಲಿದೆ. ಇದೇ ಲೆಕ್ಕಾಚಾರ ಮೇಲೆ ಟಿಕೆಟ್‌ ಗಿಟ್ಟಿಸಿಕೊಳ್ಳಲು ಲಾಬಿ ಆರಂಭವಾಗಿದೆ. ಆದರೆ ಇಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತೇ ಅಂತಿಮ ಎಂಬುದನ್ನು ತಳ್ಳಿ ಹಾಕುವಂತಿಲ್ಲ.

ಕಾಂಗ್ರೆಸ್‌ನಲ್ಲಿ ಯಾರು?: ಹಾಗೆ ನೋಡಿದರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಲ್ಲಿ ಬಹಳ ಹೆಸರುಗಳೇನಿಲ್ಲ. ಮಾಜಿ ಸಂಸದ ಹಾಗೂ ಹಾಲಿ ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಜತೆಗೆ ಅಥಣಿ ಶಾಸಕ ಲಕ್ಷ್ಮಣ ಸವದಿ, ಪ್ರಕಾಶ ಹುಕ್ಕೇರಿ ಪುತ್ರ, ಶಾಸಕ ಗಣೇಶ ಹುಕ್ಕೇರಿ ಹಾಗೂ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಹೆಸರೂ ಪ್ರಸ್ತಾಪದಲ್ಲಿವೆ. ಈ ಮಧ್ಯೆ ರಾಜ್ಯದಲ್ಲಿ  ಕುರುಬ ಸಮಾಜಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್‌ ನೀಡಬೇಕೆಂಬ ಅಭಿಪ್ರಾಯಗಳು ಕೇಳಿ  ಬಂದಿದ್ದು ಇದನ್ನು ಪರಿಗಣಿಸಿದರೆ ಚಿಂಗಳೆ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚಿದೆ. ಇಲ್ಲಿ ಅಂತಿಮವಾಗಿ ಸತೀಶ ಜಾರಕಿಹೊಳಿ ಮುದ್ರೆ ಬೀಳಬೇಕು.

Advertisement

ಬಿಜೆಪಿ ಕಥೆ ಏನು?: ಬಿಜೆಪಿಯಲ್ಲಿ ಆಕಾಂಕ್ಷಿಗಳ ದಂಡೇನಿಲ್ಲ. ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆಗೆ ಟಿಕೆಟ್‌ ಬಹುತೇಕ ಖಚಿತವಾಗಿದೆ. ಮಾಜಿ ಸಂಸದ ರಮೇಶ ಕತ್ತಿ ಸಹ ಪ್ರಯತ್ನ ನಡೆಸಿದ್ದಾರೆ. ಇನ್ನೊಂದು ಕಡೆ ರಮೇಶ ಕತ್ತಿ ಎರಡು ದೋಣಿಗಳಲ್ಲಿ ಕಾಲಿಟ್ಟಿದ್ದಾರೆನ್ನುವ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿಯಲ್ಲಿ ಟಿಕೆಟ್‌ ಸಿಗದಿದ್ದರೆ ರಮೇಶ ಕತ್ತಿ ಕಾಂಗ್ರೆಸ್‌ನಿಂದ
ಸ್ಪರ್ಧಿಲಿದ್ದಾರೆನ್ನುವ ಮಾತುಗಳು ಅವರ ಆಪ್ತ ವಲಯದಲ್ಲಿ ಹರಿದಾಡುತ್ತಿವೆ. ಆದರೆ ಕಾಂಗ್ರೆಸ್‌ ಪಕ್ಷದಲ್ಲಿ ಇದುವರೆಗೆ ರಮೇಶ ಕತ್ತಿ ಬಗ್ಗೆ ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ ಜೆಡಿಎಸ್‌ ನಿರಾಳ: ಕಾಂಗ್ರೆಸ್‌ ಮತ್ತು ಬಿಜೆಪಿ ಪಾಳೆಯದಲ್ಲಿ ಈ ಕಥೆಯಾದರೆ ಜೆಡಿಎಸ್‌ ಮಾತ್ರ ನಿರಾಳವಾಗಿದೆ. ಸ್ವತಃ ಜೆಡಿಎಸ್‌ ವರಿಷ್ಠರೇ ಈ ಭಾಗದ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಈ ಭಾಗದಲ್ಲಿ ತಮಗೆ ಸೋಲು ಖಚಿತ ಎಂಬುದನ್ನು ಮೊದಲೇ ತಿಳಿದಿರುವ ಪಕ್ಷದ ವರಿಷ್ಠರು ಅಭ್ಯರ್ಥಿಗಳನ್ನು ಹುಡುಕುವ ಗೋಜಿಗೇ ಹೋಗಿಲ್ಲ.

ಜಿಲ್ಲೆಯ ಎರಡು ಕ್ಷೇತ್ರಗಳಿಗೆ ಯಾರು ಬಂದರೂ ಟಿಕೆಟ್‌ ಕೊಡುವ ಸ್ಥಿತಿಯಲ್ಲಿದ್ದಾರೆಂಬ ಮಾತುಗಳು ಸ್ವತಃ ಈ ಪಕ್ಷದ ಜಿಲ್ಲಾ ಮುಖಂಡರಿಂದಲೇ ವ್ಯಕ್ತವಾಗಿದೆ. ಚಿಕ್ಕೋಡಿ ಕ್ಷೇತ್ರದಿಂದ ರಾಯಬಾಗದ ಪ್ರತಾಪರಾವ್‌ ಪಾಟೀಲ ಹೆಸರು ಪ್ರಸ್ತಾಪವಾಗಿದೆ. ಅದರೆ ಪಕ್ಷದಲ್ಲಿ ಇದುವರೆಗೆ ಅಂತಹ ಯಾವುದೇ ಬೆಳವಣಿಗೆಗಳು ಕಂಡು ಬಂದಿಲ್ಲ. ಕ್ಷೇತ್ರದಲ್ಲಿ ಗೆಲ್ಲುವುದಕ್ಕಿಂತ ಹಣ ಖರ್ಚು ಮಾಡಲು ಯಾರು ಸಿದ್ಧರಿದ್ದಾರೋ ಅಂಥವರಿಗೆ ಜೆಡಿಎಸ್‌ ಟಿಕೆಟ್‌ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಹೀಗಾಗಿ ಇದುವರೆಗೆ ಟಿಕೆಟ್‌ಗಾಗಿ ಅಂತಹ ಪೈಪೋಟಿ ಕಂಡಿಲ್ಲ.

ನಮ್ಮಲ್ಲಿ ಟಿಕೆಟ್‌ ಆಕಾಂಕ್ಷಿಗಳಿಗೆ ಕೊರತೆ ಇಲ್ಲ. ನಾಲ್ಕೈದು ಜನ ಪ್ರಬಲರು ಪೈಪೋಟಿಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಒಂದರೆಡು ಸಭೆಗಳು ಸಹ ನಡೆದಿವೆ. ಅಂತಿಮವಾಗಿ ಪಕ್ಷದ ವರಿಷ್ಠರು ಸೂಕ್ತ ಅಭ್ಯರ್ಥಿಯನ್ನು ನಿರ್ಧರಿಸುತ್ತಾರೆ. ಯಾರಿಗೆ ಟಿಕೆಟ್‌ ಕೊಟ್ಟರೂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಚಿಕ್ಕೋಡಿ ಮತ್ತು ಬೆಳಗಾವಿ ನಮ್ಮದಾಗಿಸಿಕೊಳ್ಳುತ್ತೇವೆ.
*ಲಕ್ಷ್ಮಣರಾವ್‌ ಚಿಂಗಳೆ, ಕಾಂಗ್ರೆಸ್‌ ಚಿಕ್ಕೋಡಿ ಜಿಲ್ಲಾಧ್ಯಕ್ಷ

ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ. ಲೋಕಸಭೆ ಚುನಾವಣೆಗೆ ಈಗಾಗಲೇ ನಮ್ಮ ತಯಾರಿ ಆರಂಭವಾಗಿದೆ. ನಮ್ಮಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಮಸ್ಯೆ ಇಲ್ಲ. ಕೆಲವು ಹೆಸರುಗಳು ಪ್ರಸ್ತಾಪವಾದರೂ ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿದ್ದೇವೆ. ಕಾರ್ಯಕರ್ತರು ಸಹ ಚುನಾವಣೆ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ.
*ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯ

*ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next