ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಬ್ಬು ಬೆಳೆಗಾರರೊಂದಿಗೆ ಮಹತ್ವದ ಸಭೆ ನಡೆಸಿದ ಬಳಿಕ ಕಾಂಗ್ರೆಸ್‌ನಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಕಾಂಗ್ರೆಸ್ ಪಕ್ಷದೊಳಗಿನ ನಾಯಕರ ಅಸಮಾಧಾನ ಮತ್ತೆ ಭುಗಿಲೆದ್ದಿದೆ.
ಕಾಂಗ್ರೆಸ್ ಪ್ರಭಾವಿ ನಾಯಕ, ಸಚಿವ ರಮೇಶ್ ಜಾರಕಿಹೊಳಿ ಅವರು ಮತ್ತೆ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಸಿಡಿದೆದ್ದಿದ್ದು , ಸಮನ್ವಯ ಸಮಿತಿ ಅಧ್ಯಕ್ಷ ,ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಳಿ ದೂರು ನೀಡಿ , ಬೆಳಗಾವಿ ವಿಚಾರದಲ್ಲಿ ತಲೆಹಾಕದಂತೆ ಎಚ್ಚರಿಕೆ ಸಂದೇಶ ಕಳುಹಿಸಿರುವುದಾಗಿ ವರದಿಯಾಗಿದೆ.
ಸಿದ್ದರಾಮಯ್ಯ ಅವರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ ಖಡಕ್ ಎಚ್ಚರಿಕೆ ಸಂದೇಶ ಕಳುಹಿಸಿದ್ದು, ಪದೇ ಪದೇ ಬೆಳಗಾವಿ ವಿಚಾರದಲ್ಲಿ ಡಿಕೆಶಿ ಮಧ್ಯ ಪ್ರವೇಶ ಮಾಡಿದರೆ ನಮ್ಮ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂದಿರುವುದಾಗಿ ವರದಿಯಾಗಿದೆ.
ಸಿದ್ದರಾಮಯ್ಯ ಅವರು ರಮೇಶ್ ಜಾರಕಿಹೊಳಿ ಅವರಿಗೆ ಸ್ವಲ್ಪ ಸಮಧಾನದಿಂದ ಇರಿ. ಎಲ್ಲವೂ ಸರಿಯಾಗುತ್ತದೆ ಎಂದಿರುವುದಾಗಿ ವರದಿಯಾಗಿದೆ.
ಕಬ್ಬು ಬೆಳೆಗಾರರ ಸಭೆಗೆ ಡಿಕೆಶಿ ಅವರು ಹಾಜರಾಗಬೇಕಾದ ಅಗತ್ಯವಿರಲ್ಲಿಲ್ಲ, ಆದರೂ ಭಾಗಿಯಾಗಿದ್ದು ರಮೇಶ್ ಜಾರಕಿಹೊಳಿ ಅವರನ್ನು ಕೆರಳಿಸಿತ್ತು. ಸಕ್ಕರೆ ಕಾರ್ಖಾನೆ ಮಾಲೀಕರಾಗಿದ್ದ ರಮೇಶ್ ಜಾರಕಿಹೊಳಿ ಅವರು ಸಭೆಗೆ ಗೈರಾಗಿದ್ದರು.