Advertisement
ಹುಬ್ಬಳ್ಳಿಯಲ್ಲಿ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಭೆ ನಡೆಸಿದ ಬೆನ್ನಲ್ಲೇ ಬೆಳಗಾವಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ ಜಾರಕಿಹೊಳಿ ಗುಪ್ತ ಸಭೆ ನಡೆಸಿದ್ದಲ್ಲದೆ ಮೈತ್ರಿ ಸರಕಾರದ ಉಳಿವಿನ ಬಗ್ಗೆ ಅನುಮಾನದ ಮಾತು ಆಡಿರುವುದು ರಾಜಕೀಯ ಚಟುವಟಿಕೆಗಳು ಮತ್ತೆ ಬಿರುಸುಗೊಳ್ಳುವಂತೆ ಮಾಡಿದ್ದಾರೆ.
Related Articles
Advertisement
ಯಮಕನಮರಡಿ ಭಾಗದ ಬಿಜೆಪಿ ಹಿರಿಯ ಮುಖಂಡರಾದ ಬಿ.ಬಿ. ಹಂಜಿ ಹಾಗೂ ಅವರ ಪುತ್ರ ರವಿ ಹಂಜಿ ಜೊತೆ ಸುಮಾರು ಆರ್ಧಗಂಟೆಗಳ ಕಾಲ ರಹಸ್ಯ ಸಭೆ ನಡೆಸಿದ ರಮೇಶ ಜಾರಕಿಹೊಳಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ರಾಜಕೀಯ ಚಟುವಟಿಕೆಗಳು ಹಾಗೂ ಜನರ ಅಭಿಪ್ರಾಯದ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ.
ಲೋಕಸಭೆ ಚುನಾವಣೆಯ ನಂತರ ಈ ಸರಕಾರ ಬೀಳುವುದು ಖಚಿತ. ಆಗ ತಾವೂ ರಾಜೀನಾಮೆ ನೀಡಿ ನಂತರ ನಡೆಯುವ ಉಪ ಚುನಾವಣೆಯಲ್ಲಿ ಗೋಕಾಕದಿಂದ ಸ್ಪರ್ಧೆ ಮಾಡುತ್ತೇನೆ. ಮುಂದೆ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಯಮಕನಮರಡಿಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವ ಬಗ್ಗೆ ಮೂಲಗಳು ಮಾಹಿತಿ ನೀಡಿವೆ.
ತಮ್ಮ ಸ್ಪರ್ಧೆಯಿಂದ ಆಗುವ ಸಾಧಕ-ಬಾಧಕಗಳೇನು. ಜಾರಕಿಹೊಳಿ ಕುಟುಂಬದ ಬಗ್ಗೆ ಕ್ಷೇತ್ರದ ಜನರಲ್ಲಿ ಯಾವ ಅಭಿಪ್ರಾಯ ಇದೆ ಎಂಬುದರ ಬಗ್ಗೆ ರಮೇಶ ಮಾಹಿತಿ ಪಡೆದುಕೊಂಡಿದ್ದಾರೆ.
ನಾನು ಬಿಜೆಪಿಯಿಂದ ಸ್ಪರ್ಧೆ ಮಾಡುವುದು ಖಚಿತ. ಆಗ ಸತೀಶ ಜಾರಕಿಹೊಳಿ ನಮ್ಮ ವಿರುದ್ಧ ಸ್ಪರ್ಧೆ ಮಾಡಬಹುದು. ಇಲ್ಲವೇ ರಾಯಚೂರು ಭಾಗದಿಂದ ಸ್ಪರ್ಧೆ ಮಾಡಬಹುದು. ಆಗ ಇಲ್ಲಿ ಬಿಜೆಪಿ ಯಿಂದ ಸ್ಪರ್ಧೆ ಮಾಡುತ್ತಿದ್ದ ಮಾರುತಿ ಅಷ್ಟಗಿ ಸತೀಶ ಅವರ ಬೆಂಬಲ ಪಡೆದು ಕಾಂಗ್ರೆಸ್‌ದಿಂದ ಸ್ಪರ್ದೆ ಮಾಡಿದರೆ ಅದರಿಂದ ಆಗುವ ಪರಿಣಾಮಗಳೇನು. ಕ್ಷೇತ್ರದಲ್ಲಿ ಜಾರಕಿಹೊಳಿ ವಿರುದ್ಧ ಇರುವ ಅಭಿಪ್ರಾಯ ನಮ್ಮ ಮೇಲೆ ಆಗಬಹುದೇ ಎಂಬುದರ ಬಗೆಗೆ ಸಹ ರಮೇಶ ಜಾರಕಿಹೊಳಿ ವಿಚಾರಿಸಿದ್ದಾರೆ.
ಇದಲ್ಲದೆ ತಾವು ಬಿಜೆಪಿ ಯಿಂದ ಸ್ಪರ್ಧೆ ಮಾಡಿದರೆ ಆಗ ಹುಕ್ಕೇರಿಯ ಕತ್ತಿ ಸಹೋದರರಿಂದ ವಿರೋಧ ವ್ಯಕ್ತವಾಗಬಹುದು. ಅವರು ಪಕ್ಷ ಬಿಟ್ಟು ನಮ್ಮ ವಿರುದ್ಧ ರಾಜಕೀಯ ಚಟುವಟಿಕೆ ಮಾಡಬಹುದು. ಇದರಿಂದ ತಮ್ಮ ಗೆಲುವಿಗೆ ಸಮಸ್ಯೆಯಾಗುವುದಿಲ್ಲವೇ ಎಂಬುದರ ಬಗ್ಗೆ ಸಹ ರಮೇಶ ಅವರು ಹಂಜಿ ಕುಟುಂಬದ ಸದಸ್ಯರ ಜೊತೆ ಮಾತುಕತೆ ನಡೆಸಿದ್ದಾರೆ ಎಂಬುದು ಅವರ ಆಪ್ತ ವಲಯದ ಹೇಳಿಕೆ.
ಆದರೆ ಜಾರಕಿಹೊಳಿ ಕುಟುಂಬದ ಅದರಲ್ಲೂ ರಮೇಶ ಜಾರಕಿಹೊಳಿ ಅವರನ್ನು ಬಹಳ ಹತ್ತಿರದಿಂದ ನೋಡಿರುವ ಗೋಕಾಕದ ನಾಯಕರು ಇದು ಈ ಕುಟುಂಬದ ಮತ್ತೂಂದು ನಾಟಕ. ಮೂರನೇಯವರ ಪ್ರವೇಶ ಎಲ್ಲಿಯೂ ಆಗಬಾರದು ಎಂಬ ಲೆಕ್ಕಾಚಾರದಿಂದ ಇದು ನಡೆದಿದೆ. ಹಿಟ್ಟು ನೀರಾದರೆ ಅಂಬಲಿ ಮಾಡಿಕೊಳ್ಳುವದು ಗಟ್ಟಿಯಾದರೆ ರೊಟ್ಟಿ ಮಾಡುವುದು ಜಾರಕಿಹೊಳಿ ಅವರ ಲೆಕ್ಕಾಚಾರ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
•ಕೇಶವ ಆದಿ