Advertisement

ಜಪ್ಪು-ಮೋರ್ಗನ್ಸ್‌ ಗೇಟ್‌ 4 ಪಥದ ರಸ್ತೆ

12:13 PM May 06, 2022 | Team Udayavani |

ಜಪ್ಪು: ಹಲವು ವರ್ಷಗಳ ಬೇಡಿಕೆಯಾದ ಜಪ್ಪು-ಮಾರ್ಗನ್ಸ್‌ ಗೇಟ್‌ ನಾಲ್ಕು ಪಥದ ರಸ್ತೆ ಕಾಮಗಾರಿಗೆ ವೇಗ ನೀಡಲಾಗಿದ್ದು, ಮೊದಲನೇ ಹಂತದ ಕಾಮಗಾರಿ ಸದ್ಯದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

Advertisement

ಮಹಾಕಾಳಿ ಪಡ್ಪು ರೈಲ್ವೇ ಕೆಳಸೇತುವೆ ಮುಖಾಂತರ ಶೆಟ್ಟಿಬೆಟ್ಟು ಜಂಕ್ಷನ್‌, ಮೋರ್ಗನ್ಸ್‌ಗೇಟ್‌ ಜಂಕ್ಷನ್‌ವರೆಗೆ ಸದ್ಯ ಇರುವ ಕಿರಿದಾದ ಕಾಲುದಾರಿ ವಿಸ್ತರಿಸಿ ಚತುಷ್ಪಥ ರಸ್ತೆಯಾಗಿ ಅಭಿ ವೃದ್ಧಿಗೊಳ್ಳಲಿದೆ. ಮಂಗಳೂರು ಸ್ಮಾರ್ಟ್‌ ಸಿಟಿ ವತಿಯಿಂದ 49.95 ಕೋ.ರೂ. ವೆಚ್ಚದಲ್ಲಿ ಸದ್ಯ ಕಾಮಗಾರಿ ಸಾಗುತ್ತಿದೆ. ರಸ್ತೆ ಅಭಿವೃದ್ಧಿಯ ಜತೆಗೆ ಮೂಲ ಸೌಕರ್ಯಕ್ಕೂ ಆದ್ಯತೆ ನೀಡಲಾಗುತ್ತಿದೆ. ಮೀಡಿಯನ್‌, ದಾರಿದೀಪಗಳು, ಎರಡೂ ಭಾಗದಲ್ಲಿ ಮಳೆ ನೀರು ಹರಿಯುವ ಆರ್‌ಸಿಸಿ ಚರಂಡಿ, ತಗ್ಗು ಪ್ರದೇಶದಲ್ಲಿ ಆರ್‌ಸಿಸಿ ತಡೆಗೋಡೆ/ಗ್ರಾನೈಟ್‌ ಕಲ್ಲು ಪಿಚ್ಚಿಂಗ್‌, ಮೊದಲಾದವುಗಳನ್ನೊಳಗೊಂಡಂತೆ ಅಭಿವೃದ್ಧಿಯಾಗಲಿದೆ.

ರಸ್ತೆ ಸಂಪೂರ್ಣವಾದ ಬಳಿಕ ಪಂಪ್‌ವೆಲ್‌ ಮೂಲಕ ನಗರ ಪ್ರವೇಶಿಸುವ ಅಥವಾ ನಗರದಿಂದ ಹೊರ ಹೋಗವ ವಾಹನಗಳ ದಟ್ಟಣೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ‌ ಸಾಧ್ಯತೆ ಇದೆ. ರಸ್ತೆಯನ್ನು ಸಮ ತಟ್ಟು ಮಾಡಿ ಕಾಂಕ್ರೀಟ್‌ ಬೆಡ್‌ ನಿರ್ಮಿಸಿ, ಒಂದು ಭಾಗದಲ್ಲಿ ಸುಮಾರು 100 ಮೀ. ಗಳಷ್ಟು ಕಾಂಕ್ರೀಟ್‌ ರಸ್ತೆ ಹಾಕಲಾಗಿದ್ದು, ಕ್ಯೂರಿಂಗ್‌ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 1.078 ಕಿ.ಮೀ. ಉದ್ದದ ರಸ್ತೆಯಾಗಿದ್ದು, ಹೆದ್ದಾರಿ ಜಂಕ್ಷನ್‌ ಬಳಿ 137 ಮೀ.ನಷ್ಟು ಉದ್ದಕ್ಕೆ 24 ಮೀ. ಅಗಲ ಹಾಗೂ ಉಳಿದ 941 ಮೀ. ಭಾಗದಲ್ಲಿ 18 ಮೀ. ಅಗಲದ ರಸ್ತೆ ನಿರ್ಮಾಣವಾಗಲಿದೆ. 30.07 ಕೋ.ರೂ. ವೆಚ್ಚದಲ್ಲಿ ನಾಲ್ಕು ಆರ್‌ಯುಬಿ ಹೊಸ ಪ್ರಯೋಗವೆಂಬಂತೆ ನಾಲ್ಕು ಆರ್‌ಯುಬಿ ನಿರ್ಮಾಣವಾಗಲಿದೆ.

ಪ್ರಸ್ತುತ ಒಂದು ರೈಲ್ವೇ ಹಳಿ ಭಾಗದಲ್ಲಿ ಆರ್‌ಯುಬಿ ಇದ್ದು, ಇನ್ನೊಂದು ರೈಲ್ವೇ ಹಳಿ ಭಾಗದಲ್ಲಿ ಲೆವೆಲ್‌ ಕ್ರಾಸಿಂಗ್‌ ನಿರ್ಮಾಣ ಮಾಡಲಾಗಿದೆ. ಸದ್ಯ ಇರುವಂತಹ ಲೆವೆಲ್‌ ಕ್ರಾಸಿಂಗ್‌ ಭಾಗದಲ್ಲಿ ರೈಲ್ವೇ ಸಂಚಾರಕ್ಕಾಗಿ ರೈಲ್ವೇ ಗೇಟ್‌ ಹಾಕಿದಾಗ ವಾಹನಗಳು ಸಾಲು ನಿಂತು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಇದನ್ನು ತಪ್ಪಿಸಿ ಸುಗಮ ಸಂಚಾರ ಕಲ್ಪಿಸಲು 30.7 ಕೋ.ರೂ.ಗಳನ್ನು ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಠೇವಣಿವಂತಿಗೆ ಆಧಾರದಲ್ಲಿ ರೈಲ್ವೇ ಇಲಾಖೆಯು ನಿರ್ಮಾಣ ಕಾರ್ಯವಹಿಸಲಿದೆ.

ಸ್ಮಾರ್ಟ್‌ಸಿಟಿ ಹೆಗಲಿಗೆ ಬಹು ನಿರೀಕ್ಷಿತ ಯೋಜನೆ

Advertisement

ಜಪ್ಪು ಮಹಾಕಾಳಿಪಡ್ಪುವಿನಲ್ಲಿ ಈ ಮೊದಲು ಚತುಷ್ಪಥ ರಸ್ತೆ ಹಾಗೂ ರೈಲ್ವೇ ಓವರ್‌ ಬ್ರಿಡ್ಜ್ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಇದಕ್ಕಾಗಿ ಪಾಲಿಕೆಯಿಂದ 24 ಕೋ.ರೂ.ಗಳ ಪ್ರಸ್ತಾವನೆ ಸಿದ್ಧಪಡಿಸಿ, ರೈಲ್ವೇ ಇಲಾಖೆಗೆ ಕಳುಹಿಸಲಾಗಿತ್ತು. ಶೇ. 50:50ರಂತೆ ಪಾಲಿಕೆ ಹಾಗೂ ರೈಲ್ವೆಯು ಹಣ ಜೋಡಿಸಲು ಉದ್ದೇಶಿಸಲಾಗಿತ್ತು. ಆದರೆ, ಇಷ್ಟು ಮೊತ್ತ ಭರಿಸಿ ಯೋಜನೆ ಮಾಡಲು ರೈಲ್ವೇಗೆ ಅವಕಾಶವಿಲ್ಲ; ಹೀಗಾಗಿ ಪೂರ್ಣ ಹಣವನ್ನು ಪಾಲಿಕೆಯೇ ಭರಿಸಬೇಕು ಎಂದು ಪ್ರಸ್ತಾವನೆಯನ್ನು ರೈಲ್ವೇ ಇಲಾಖೆಯು ವಾಪಸ್‌ ಕಳುಹಿಸಿತ್ತು. ಆದರೆ 24 ಕೋ.ರೂ. ಗಳನ್ನು ಮಂಗಳೂರು ಪಾಲಿಕೆ ಭರಿಸಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಪಾಲಿಕೆಯು ಪ್ರಸ್ತಾವನೆಯನ್ನು ಬದಲಿಸಲು ತೀರ್ಮಾನಿಸಿ, ಅದರಂತೆ 10 ಕೋ.ರೂ. ವೆಚ್ಚದಲ್ಲಿ ಅಂಡರ್‌ಪಾಸ್‌ ಹಾಗೂ ರಸ್ತೆ ಅಭಿವೃದ್ಧಿಗೆ ಉದ್ದೇಶಿಸಲಾಗಿತ್ತು. ಆದರೆ, ಅದಕ್ಕೂ ಅನುಮೋದನೆ ದೊರೆತಿರಲಿಲ್ಲ. ಆದರೆ, ರೈಲ್ವೇ ಕೆಳ ಸೇತುವೆ ಹಾಗೂ ಸಂಪರ್ಕ ರಸ್ತೆ ಅತ್ಯಗತ್ಯ ಎಂಬ ವ್ಯಾಪಕ ಬೇಡಿಕೆ-ಒತ್ತಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ ಈ ಕಾಮಗಾರಿ ನಡೆಯುತ್ತಿದೆ. ತೊಕ್ಕೊಟ್ಟು ಭಾಗದಿಂದ ನಗರಕ್ಕೆ ಪ್ರವೇಶಿಸುವ ಬಹುತೇಕ ವಾಹನಗಳು

ಟ್ರಾಫಿಕ್‌ ಸಮಸ್ಯೆ; ಸುಧಾರಣೆ ಸಾಧ್ಯತೆ

ಜಪ್ಪಿನಮೊಗರು ಮುಖೇನ ಬರುತ್ತದೆ. ಇದೀಗ ರಸ್ತೆಯೂ ವಿಸ್ತರಣೆಗೊಂಡು ಅಭಿವೃದ್ಧಿಯಾಗುತ್ತಿದ್ದು, ಈ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿ ಪಂಪ್‌ ವೆಲ್‌ನಲ್ಲಿ ವಾಹನ ದಟ್ಟಣೆ ಕಡಿಮೆಯಾಗುವ ಸಾಧ್ಯತೆ ಇದೆ. ಜಪ್ಪು ಮಹಾಕಾಳಿ ಪಡ್ಪು ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಸದ್ಯ ಈ ಭಾಗದಲ್ಲಿ ಮಾ. 28ರಿಂದ 45 ದಿನಗಳ ಕಾಲ ವಾಹನ ಸಂಚಾರ ನಿಷೇಧಿಸಲಾಗಿದೆ

ವಾಹನ ದಟ್ಟಣೆ ಕಡಿಮೆ ಸಾಧ್ಯತೆ

ಜಪ್ಪು-ಮಾರ್ಗನ್ಸ್‌ಗೇಟ್‌ ನಾಲ್ಕು ಪಥದ ರಸ್ತೆ ಅಭಿವೃದ್ಧಿಗೆ ಹಲವು ವರ್ಷಗಳಿಂದ ಬೇಡಿಕೆ ಇದೆ. ಮೊದಲನೇ ಹಂತದ ಕಾಮಗಾರಿ ವೇಗದಿಂದ ಸಾಗುತ್ತಿದ್ದು, ಈ ರಸ್ತೆ ಕಾಮ ಗಾರಿ ಪೂರ್ಣಗೊಂಡ ಬಳಿಕ ಸುತ್ತಮುತ್ತಲಿನ ಪ್ರದೇಶದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಯಿಂದ ನೇರವಾಗಿ ಮಂಗಳೂರು ಸಿಟಿ ಸಂಪರ್ಕಕ್ಕೆ ಈ ರಸ್ತೆಯಿಂದ ಸಾಧ್ಯವಾಗಲಿದೆ. ಇದರಿಂದ ವಾಹನ ದಟ್ಟಣೆಯೂ ಕಡಿಮೆಯಾಗುವ ಸಾಧ್ಯತೆ ಇದೆ.  -ಡಿ. ವೇದವ್ಯಾಸ ಕಾಮತ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next