Advertisement

ಜಪಾನ್‌ ದೇಶದ ಕತೆ: ಅಬಿಯ ಕನ್ನಡಿ

06:00 AM Jun 03, 2018 | Team Udayavani |

ಒಂದು ಪಟ್ಟಣದಲ್ಲಿ ಶ್ರೀಮಂತನಾದ ಒಬ್ಬ ವರ್ತಕನಿದ್ದ. ಅವನು ಹಡಗಿನಲ್ಲಿ ಬೇರೆ ಬೇರೆ ವಿಧದ ಸರಕುಗಳನ್ನು ಹೇರಿಕೊಂಡು ಹಲವು ದೇಶಗಳಿಗೆ ಹೋಗುತ್ತಿದ್ದ. ಸರಕಿನ ಮಾರಾಟದಿಂದ ಕೈತುಂಬ ಹಣ ಗಳಿಸುತ್ತಿದ್ದ. ಮನೆಯಲ್ಲಿ ಅವನನ್ನು ತುಂಬ ಪ್ರೀತಿಸುವ ಕಿಮಿಯೋ ಎಂಬ ಸುಂದರಿಯಾದ ಹೆಂಡತಿಯಿದ್ದಳು. ಅಬಿ ಎಂಬ ಪುಟ್ಟ ಮಗಳಿದ್ದಳು. ಊರಿಗೆ ಮರಳುವಾಗ ಯಾವುದಾದರೂ ದೇಶದಲ್ಲಿ ಸುಂದರವಾದ ಒಂದು ವಿಶೇಷ ವಸ್ತು ಕಾಣಿಸಿದರೆ ಅದರ ಬೆಲೆ ಎಷ್ಟಾದರೂ ಸರಿ, ಕೊಡುತ್ತಿದ್ದ. ಆ ವಸ್ತುವನ್ನು ತಂದು ಹೆಂಡತಿಗೆ ಉಡುಗೊರೆಯಾಗಿ ನೀಡುತ್ತಿದ್ದ. ಸ್ವಲ್ಪ$ ಸಮಯ ಮನೆಯಲ್ಲಿ ಎಲ್ಲರ ಜೊತೆಗೆ ಕಾಲ ಕಳೆದು ಮರಳಿ ಸಮುದ್ರಯಾನ ಕೈಗೊಳ್ಳುತ್ತಿದ್ದ.

Advertisement

    ಒಂದು ಸಲ ವರ್ತಕ ಒಂದು ದೇಶದಲ್ಲಿ ಸರಕುಗಳನ್ನೆಲ್ಲ ಮಾರಾಟ ಮಾಡಿದ. ಮನೆಗೆ ಹೊರಡುವ ಸಂದರ್ಭದಲ್ಲಿ ಹೆಂಡತಿಗೆ ಏನಾದರೂ ಉಡುಗೊರೆ ತೆಗೆದುಕೊಂಡು ಹೋಗುವ ಮನಸ್ಸಾಯಿತು. ಅದಕ್ಕಾಗಿ ಹುಡುಕುವಾಗ ಒಂದು ಚೆಲುವಾದ ಕನ್ನಡಿಯನ್ನು ಗಮನಿಸಿದ. ಅದನ್ನು ಕಂಚಿನಿಂದ ತಯಾರಿಸಿದ್ದರು. ಅದರಲ್ಲಿ ನೋಡಿದರೆ ಅವರ ಪ್ರತಿಬಿಂಬವು ಒಂದು ಸರೋವರದಲ್ಲಿ ನಿಂತಂತೆ ಭಾಸವಾಗುತ್ತಿತ್ತು ಹಿನ್ನೆಲೆಯಲ್ಲಿ ಪೈನ್‌ ಮರಗಳ ತೋಟ ಅದರ ಬಳಿ ವಿಹರಿಸುವ ಕೊಕ್ಕರೆಗಳ ಹಿಂಡು ಇದನ್ನೆಲ್ಲ ನೋಡಿ ಅವನಿಗೆ ತುಂಬ ಖುಷಿಯಾಯಿತು. ಈ ಕನ್ನಡಿಯನ್ನು ತೆಗೆದುಕೊಂಡು ಹೋಗಿ ಕೊಟ್ಟರೆ ಹೆಂಡತಿಗೂ ಸಂತೋಷವಾಗುತ್ತದೆಂದು ಯೋಚಿಸಿ ಅದರ ಬೆಲೆಯನ್ನು ವಿಚಾರಿಸಿದ. ಮಾರಾಟಗಾರನು ದುಬಾರಿ ಬೆಲೆ ಹೇಳಿದರೂ ಬೇಸರಿಸದೆ ಅಷ್ಟು ಹಣವನ್ನು ಕೊಟ್ಟು ಮನೆಗೆ ತಂದು ಹೆಂಡತಿಗೆ ನೀಡಿದ. ಅವಳಿಗೂ ಕನ್ನಡಿ ತುಂಬ ಇಷ್ಟವಾಯಿತು.

    ಕೆಲವು ಕಾಲ ಕಳೆಯಿತು. ವರ್ತಕನ ಹೆಂಡತಿ ಯಾವುದೋ ಕಾಯಿಲೆಯಿಂದ ಹಾಸಿಗೆ ಹಿಡಿದಳು. ಹಲವು ಮಂದಿ ವೈದ್ಯರು ಬಂದು ಅವಳಿಗೆ ಚಿಕಿತ್ಸೆ ಮಾಡಿದರು. ಆದರೂ ಅವಳ ಪರಿಸ್ಥಿತಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಲೇ ಹೋಯಿತು. ಆಗ ತಾನೇ ಮಾತನಾಡಲು ಕಲಿಯುತ್ತಿದ್ದ ಮಗಳು ಅಬಿಗೆ ತಾಯಿಯ ಅವಸ್ಥೆ ನೋಡಿ ತುಂಬ ದುಃಖವಾಯಿತು. ತಾಯಿಯನ್ನು ಅಪ್ಪಿಕೊಂಡು ಅಳುತ್ತ, “”ಅಮ್ಮಾ, ಅಪ್ಪವ್ಯಾಪಾರದ ಸಲುವಾಗಿ ಊರೂರು ತಿರುಗುವಾಗ ನನ್ನನ್ನು ಪ್ರೀತಿಯಿಂದ ನೋಡಿಕೊಳ್ಳುವವಳು ನೀನು. ನನ್ನನ್ನು ಅನಾಥಳನ್ನಾಗಿ ಮಾಡಿ ನೀನು ಹೋದರೆ ಆಗ ನನಗೆ ಉಣಬಡಿಸುವುದು ಯಾರು, ನನಗೆ ನೋವಾದಾಗ ಸಾಂತ್ವನ ಹೇಳುವುದು ಯಾರು?” ಎಂದು ಕೇಳಿದಳು.

    ತಾಯಿ ಅಬಿಯ ತಲೆ ನೇವರಿಸುತ್ತ ಸಮಾಧಾನಪಡಿಸಿದಳು. ಗಂಡ ತನಗಾಗಿ ತಂದುಕೊಟ್ಟ ಕನ್ನಡಿಯನ್ನು ಅವಳ ಕೈಯಲ್ಲಿಟ್ಟಳು. “”ನೋಡು, ನನ್ನ ದೇಹ ನಿನ್ನನ್ನು ಅಗಲಿ ಹೋದರೂ ಜೀವ ನಿನ್ನೊಂದಿಗೇ ಇರುತ್ತದೆ. ನಿನಗೇನಾದರೂ ನೋವು ಉಂಟಾದರೆ ಈ ಕನ್ನಡಿಯಲ್ಲಿ ನೋಡಿದರೆ ಸಾಕು. ನಾನು ನಿನಗೆ ಅಲ್ಲಿ ಕಾಣಿಸಿಕೊಳ್ಳುತ್ತೇನೆ. ನಿನ್ನ ನೋವನ್ನು ಶಮನ ಮಾಡುತ್ತೇನೆ. ಸಾಂತ್ವನ ಹೇಳಿ ದುಃಖವನ್ನು ಕಳೆಯುತ್ತೇನೆ” ಎಂದು ಹೇಳಿದಳು. ಅಬಿ ಕನ್ನಡಿಯನ್ನು ತನ್ನ  ಪೆಟ್ಟಿಗೆಯೊಳಗೆ ಜೋಪಾನವಾಗಿ ತೆಗೆದಿರಿಸಿದಳು. ಅನಂತರ ಒಂದೆರಡು ದಿನಗಳಲ್ಲಿ ಅವಳ ತಾಯಿಯು ತೀರಿಕೊಂಡಳು.

    ಹೆಂಡತಿಯನ್ನು ಕಳೆದುಕೊಂಡೆನೆಂದು ವರ್ತಕನಿಗೆ ತುಂಬ ವ್ಯಥೆಯಾಯಿತು. ತಾನು ವಿದೇಶಗಳಿಗೆ ತೆರಳಿರುವಾಗ ಮಗಳು ಒಂಟಿಯಾಗುತ್ತಾಳೆ, ಅವಳ ಆರೈಕೆಯನ್ನು ನೋಡಿಕೊಳ್ಳಲೆಂದು ಅವನು ಯೋತ್ಸಿಕಾ ಎಂಬ ಯುವತಿಯನ್ನು ಮದುವೆಯಾಗಿ ಮನೆಗೆ ಕರೆತಂದ. ತಾಯಿಯಿಲ್ಲದ ತಬ್ಬಲಿ ಅಬಿಗೆ ತಾಯಿಯಾಗಿ ಅವಳ ಕೂದಲೂ ಕೊಂಕದಂತೆ ಪ್ರೀತಿಯಿಂದ ನೋಡಿಕೊಳ್ಳಬೇಕೆಂದು ಹೇಳಿದ. ಯೋತ್ಸಿಕಾ ಅವನ ಮಾತಿಗೆ ಒಪ್ಪಿಕೊಂಡಳು. ಆದರೆ ಅಬಿಯ ಮೇಲೆ ಅವಳಿಗೆ ಕೊಂಚವೂ ಪ್ರೀತಿಯಿರಲಿಲ್ಲ. ವರ್ತಕ ಹಡಗಿನಲ್ಲಿ ತೆರಳಿದ ಕೂಡಲೇ ಅಬಿಗೆ ಬಹು ವಿಧದಿಂದ ಹಿಂಸೆ ಕೊಡುತ್ತಿದ್ದಳು. ಕಠಿನವಾದ ಕೆಲಸಗಳನ್ನು ಮಾಡಿಸುತ್ತಿದ್ದಳು. ಹೊಟ್ಟೆ ತುಂಬ ಆಹಾರ ಕೊಡದೆ ಉಪವಾಸ ಬೀಳುವಂತೆ ಮಾಡಿದ್ದಳು.

Advertisement

ತನಗೆ ದುಃಖ ತಾಳಲಾಗದೆ ಹೋದಾಗ ಅಭಿಗೆ ತಾಯಿಯ ನೆನಪಾಗುತ್ತಿತ್ತು. ಅವಳು ರಹಸ್ಯವಾಗಿ ತನ್ನ ಪೆಟ್ಟಿಗೆಯ ಮುಚ್ಚಳ ತೆರೆದು ತಾಯಿ ಕೊಟ್ಟಿದ್ದ ಕನ್ನಡಿಯನ್ನು ಹೊರಗೆ ತೆಗೆಯುತ್ತಿದ್ದಳು. ಅದರಲ್ಲಿ ಅವಳ ತಾಯಿಯ ಮುಖ ಕಾಣಿಸುತ್ತಿತ್ತು. ಅವಳು ಅಬಿಯೊಂದಿಗೆ ಮಾತನಾಡುತ್ತಿದ್ದಳು. “”ಮಗಳೇ, ದುಃಖೀಸಬೇಡ, ನಿನ್ನ ಪಾಲಿಗೆ ಒಳ್ಳೆಯ ದಿನಗಳು ಬರುತ್ತವೆ” ಎಂದು ಧೈರ್ಯ ತುಂಬುತ್ತಿದ್ದಳು. ಇದರಿಂದ ಅಬಿಗೆ ಮಲತಾಯಿ ನೀಡಿದ ಹಿಂಸೆಯ ನೋವು ಅರೆಕ್ಷಣದಲ್ಲಿ ಮಾಯವಾಗುತ್ತಿತ್ತು. ಆಕೆ ದುಃಖವನ್ನು ಮರೆತು ನಗುನಗುತ್ತ ಹೊರಗೆ ಬರುತ್ತಿದ್ದಳು.

ಅಬಿಯ ವರ್ತನೆಯಿಂದ ಯೋತ್ಸಿಕಾಗೆ ತುಂಬ ಆಶ್ಚರ್ಯವಾಗತೊಡಗಿತು. ತಾನು ಯಾವ ರೀತಿಯಿಂದ ಹಿಂಸೆ ಕೊಟ್ಟರೂ ಇವಳ ಮೈಯಲ್ಲಿ ಗಾಯದ ಗುರುತು ಕೂಡ ಉಳಿಯುವುದಿಲ್ಲವೆಂದು ಗಮನಿಸಿದಾಗ ಈ ಹುಡುಗಿಗೆ ಏನೋ ಮಾಟ-ಮಂತ್ರ ಗೊತ್ತಿದೆಯೆಂದೇ ಅವಳಿಗೆ ಅನಿಸಿತು. ಅಲ್ಲದೆ ಅಳುತ್ತ ಒಳಗೆ ಹೋಗುವ ಹುಡುಗಿ ಯಾರೊಂದಿಗೋ ಮಾತನಾಡುತ್ತಿದ್ದಾಳೆಂದು ಗೊತ್ತಾಯಿತು. ಹಾಗಿದ್ದರೆ ಇವಳ ಮೈಯಲ್ಲಿ ದೆವ್ವವೋ ಪಿಶಾಚಿಯೋ ಬಂದಿರಬಹುದು ಎಂದು ಅವಳು ಊಹಿಸಿದಳು. ವರ್ತಕ ಮನೆಗೆ ಬರುತ್ತಲೇ ಅಬಿಯ ವಿಷಯವನ್ನು ಅವನಿಗೆ ಹೇಳಿ, “”ನಿಮ್ಮ ಮಗಳನ್ನು ಮನೆಯಿಂದ ಮೊದಲು ಹೊರಗೆ ಹಾಕಿ. ಇಲ್ಲವಾದರೆ ಅವಳು ನನ್ನ ಜೀವ ತೆಗೆಯುವುದು ಖಂಡಿತ” ಎಂದು ಹೇಳಿದಳು. ವರ್ತಕ ಅವಳ ಮಾತನ್ನು ನಂಬಲಿಲ್ಲ. “”ಏನಿದು ಮಾತು? ಕೋಣೆಯೊಳಗೆ ಹೋದ ಕೂಡಲೇ ಅವಳು ಯಾರೊಂದಿಗೋ ಮಾತನಾಡಲು ಹೇಗೆ ಸಾಧ್ಯ? ಮೈಯಲ್ಲಿರುವ ಗಾಯಗಳು ತಾನಾಗಿ ವಾಸಿಯಾಗುವುದುಂಟೆ?” ಎಂದು ಅಚ್ಚರಿಯಿಂದ ಹೇಳಿದ. ಆದರೆ ಮರೆಯಲ್ಲಿ ನಿಂತು ಸ್ವತಃ ಪರೀಕ್ಷಿಸಿದಾಗ ಹೆಂಡತಿ ಹೇಳಿದ ಮಾತು ಸತ್ಯವೆಂಬುದು ಅವನಿಗೆ ಅರ್ಥವಾಯಿತು    

    ವರ್ತಕನು ಊರನ್ನಾಳುವ ರಾಜನ ಬಳಿಗೆ ಹೋದ. ತನ್ನ ಮಗಳ ವಿಷಯವನ್ನೆಲ್ಲ ಹೇಳಿದ. ಅವಳ ಮೈಗೆ ದೆವ್ವವೋ, ಮಾಂತ್ರಿಕನೋ ಆವರಿಸಿಕೊಂಡಿರುವುದರಿಂದ ಅದನ್ನು ಬಿಡುಗಡೆ ಮಾಡಿಸಿಕೊಡಬೇಕಾಗಿ ಪ್ರಾರ್ಥಿಸಿದ. ರಾಜನು ಅಬಿಯನ್ನು ಕರೆಸಿ ವಿಚಾರಣೆ ಮಾಡಿದ. “”ನೀನು ಒಬ್ಬಳೇ ಮಾತನಾಡುವುದು ಯಾರಲ್ಲಿ? ಗಾಯಗಳನ್ನು ಗುಣಪಡಿಸಿಕೊಳ್ಳುವುದು ಯಾವ ಮಂತ್ರಶಕ್ತಿಯಿಂದ?” ಎಂದು ಕೇಳಿದ.

    ಅಬಿಯು ತನ್ನಲ್ಲಿರುವ ಕನ್ನಡಿಯನ್ನು ತೆಗೆದು ರಾಜನ ಮುಂದಿಟ್ಟಳು. ಸಾಯುವಾಗ ತನ್ನ ತಾಯಿ ಅದನ್ನು ತನಗೆ ಕೊಟ್ಟು ಹೇಳಿದ ಮಾತುಗಳನ್ನು ವಿವರಿಸಿದಳು. “”ಅಮ್ಮ ಎಂಬ ಎರಡಕ್ಷರಕ್ಕೆ ಎಂತಹ ನೋವನ್ನೂ ಮರೆಯುವ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ಅಮ್ಮ ನನಗೆ ಕನ್ನಡಿಯಲ್ಲಿ ಕಾಣಿಸಿಕೊಂಡು ಮೈಯನ್ನು ಸವರಿ ನೋವನ್ನು ಗುಣಪಡಿಸುತ್ತಾಳೆ. ಅವಳೊಂದಿಗೆ ಮಾತನಾಡಿದರೆ ಎಲ್ಲ ದುಃಖವೂ ಶಮನವಾಗುತ್ತದೆ. ಇದೇ ನನ್ನಲ್ಲಿರುವ ಮಂತ್ರಶಕ್ತಿ” ಎಂದು ಹೇಳಿದಳು. ರಾಜನು ಕನ್ನಡಿಯಲ್ಲಿ ನೋಡಿದಾಗ ಅಬಿಯ ತಾಯಿಯ ಮುಖ ಕಾಣಿಸಿತು.

    ರಾಜನು ಅಬಿಗೆ ಹಿಂಸೆ ನೀಡಿದ ತಪ್ಪಿಗೆ ಯೋತ್ಸಿಕಾಳನ್ನು ಶಿಕ್ಷೆಗೆ ಗುರಿಪಡಿಸಿದ. ಸುಂದರಿಯಾದ ಅಬಿಯನ್ನು ತನ್ನ ಮಗನಿಗೆ ಮದುವೆ ಮಾಡಿಸಿ ಅರಮನೆಯಲ್ಲಿ ಸುಖದಿಂದ ಇರುವಂತೆ ಮಾಡಿದ. ಕಡೆಗೂ ಕನ್ನಡಿಯಿಂದ ಅಬಿಗೆ ಒಳ್ಳೆಯದೇ ಆಯಿತು.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next