Advertisement

ಕೋವಿಡ್-19: ಸ್ವಚ್ಛತೆಯೇ ಅಸ್ತ್ರ ಎಂದ ಜಪಾನ್‌

09:12 AM Apr 06, 2020 | mahesh |

ಮಣಿಪಾಲ: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್‌ಗೂ ಕೋವಿಡ್-19 ಹಠಾವೋಗೂ ಸಂಬಂಧವಿದೆಯೇ ಎಂದು ಯಾರಾದರೂ ಕೇಳಿದರೆ ಹೌದು ಎನ್ನಬಹುದು. ಕಾರಣವಿಷ್ಟೇ. ಕೋವಿಡ್-19 ಸೋಂಕು ತಡೆಯುವುದಕ್ಕೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದಕ್ಕೂ ಸಂಬಂಧವಿದೆ ಎನ್ನುತ್ತಿವೆ ಕೆಲವು ರಾಷ್ಟ್ರಗಳ ನಡೆ.

Advertisement

ಇಟಲಿಯ ಒಂದು ಹಳ್ಳಿಯಲ್ಲಿ ಸ್ವಚ್ಛತೆಗೆ ಮಹತ್ವ ಕೊಟ್ಟಿದ್ದ ಕಾರಣದಿಂದಲೇ ಕೋವಿಡ್-19 ಬಂದಿಲ್ಲ ಎನ್ನಲಾಗುತ್ತಿದೆ. ಈಗ ಜಪಾನ್‌ ಸಹ ಕೋವಿಡ್-19 ವಿರುದ್ಧ ಹೋರಾಡುವುದೆಂದರೆ ಮೊದಲು ಸ್ವಚ್ಛತೆಗೆ ಮಹತ್ವ ಕೊಡಿ ಎಂದು ಹೇಳುತ್ತಿದೆ.

ತಮ್ಮ ಜೀವನ ಶೈಲಿಯಲ್ಲೂ ಶುಚಿತ್ವಕ್ಕೆ ಮಹತ್ವ ಕೊಟ್ಟವರು ಎಂಬ ಮಾತು ಜಪಾನಿಯರಿಗೆ ಹೇಳಲಾಗುತ್ತದೆ. ಅದಕ್ಕೆ ಇನ್ನಷ್ಟು ಮಹತ್ವ ಕೊಡುತ್ತಿದ್ದಾರಂತೆ. ಅದೇ ಕಾರಣಕ್ಕಾಗಿ ಕೊರೊನಾ ಅವರನ್ನು ಅಷ್ಟೊಂದು ಕಾಡುತ್ತಿಲ್ಲವಂತೆ.

ಸ್ವಚ್ಛತೆ ನಮ್ಮ ಸಂಸ್ಕೃತಿ ಎಂದ ಜಪಾನಿಯರು ಜಪಾನಿಯರು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿ ಕೊಂಡಿರುವ ಸ್ವಚ್ಛತೆ ಹಾಗೂ ಶುಚಿತ್ವದ ಕ್ರಮಗಳೇ ಇದಕ್ಕೆ ಕಾರಣ. ಸ್ವಚ್ಛತೆಯನ್ನು ಕಾಪಾಡುವುದು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದ್ದು, ನಮ್ಮ ಸಂಸ್ಕೃತಿ ಸಹ ಎನ್ನುತ್ತಾರೆ.

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮಾಸ್ಕ್​ ಧರಿಸಿರುವುದನ್ನು ನಾವು ನೋಡುತ್ತೇವೆ. ಆದರೆ ಮಾಸ್ಕ್​ ಧರಿಸುವುದು ಅವರಿಗೆ‌ ಹೊಸದೇನಲ್ಲ. ಚಿಕ್ಕ ನೆಗಡಿ, ಕೆಮ್ಮು ಬಂದರೂ ಸಹ ಅವರು ಮಾಸ್ಕ್ ಧರಿಸಿ ತಿರುಗಾಡುತ್ತಾರೆ. ಮೊದಲ ಸಲ ಜಪಾನಿಗೆ ಹೋದವರು ಮಾಸ್ಕ್​ ಧರಿಸಿದವರನ್ನು ನೋಡಿ ಅಚ್ಚರಿ ವ್ಯಕ್ತಪಡಿಸುತ್ತಿದ್ದರು. ಆದರೆ ಅವರ ಶುಚಿತ್ವದ ಕಾಳಜಿಯ ಅರಿವು ಜಗತ್ತಿಗೆ ಈಗ ಅರಿವಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ವರದಿಯಾಗಿದೆ.

Advertisement

ನೆರವಾದ ಬಿಕ್ಕಟ್ಟು ನಿವಾರಿಸುವ ಕಲೆ
ಮೊದಲ ಹಂತದಿಂದಲೇ ದೇಶದಲ್ಲಿ ನಡೆಯಬೇಕಿದ್ದ ಕ್ರೀಡಾ ಕೂಟ, ವಾಣಿಜ್ಯ ಸಭೆ ಮತ್ತು ಸಮಾರಂಭಗಳನ್ನು ಮುಂದೂಡುವ ಕುರಿತಾಗಿ ಆದೇಶ ಹೊರಡಿಸಿದ ಜಪಾನ್‌ ಸರಕಾರ, ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿತು. ಚೀನ ಗಡಿ ಸೇರಿದಂತೆ ಎಲ್ಲಾ ಸಾರಿಗೆ ಮಾರ್ಗವನ್ನು ಬಂದ್‌ ಮಾಡಿತು. ಜತೆಗೆ ಇತರೆ ದೇಶಗಳಿಂದ ಬಂದಿರುವ ಪ್ರಯಾಣಿಕರನ್ನು ಪತ್ತೆ ಹಚ್ಚಿ ಸೋಂಕು ಇಲ್ಲದಿದ್ದರೂ ಕ್ವಾರಂಟೇನ್‌ಗೆ ಒಳಪಡಿಸಿತು.

ಸ್ವಯಂ ಪ್ರೇರಿತವಾಗಿ ಶುಚಿಗೊಳಿಸುತ್ತಾರೆ
ಯಾವುದಾದರೂ ಸ್ಟೇಡಿಯಂನಲ್ಲಿ ಕ್ರೀಡಾಕೂಟ ಮುಗಿದ ನಂತರ ನೋಡಿದರೆ ಎಲ್ಲೆಲ್ಲೂ ಕಸದ ರಾಶಿ ತುಂಬಿರುತ್ತದೆ. ಆದರೆ ಜಪಾನಿನಲ್ಲಿ ಹಾಗಲ್ಲ. ಬುಲೆಟ್‌​ ಟ್ರೇನ್‌​ಗಳನ್ನು ಜನ ಸ್ವಯಂ ಪ್ರೇರಿತವಾಗಿ ಸ್ವಚ್ಛಗೊಳಿಸುತ್ತಾರೆ. ಯಾವುದೇ ಸಭೆ ಸಮಾರಂಭ ನಡೆದರೆ ಯಾರೊಬ್ಬರೂ ಕಸವನ್ನು ಹರಡುವುದಿಲ್ಲ. ಸಿಗರೇಟು ಸೇದುವವರು ತಮ್ಮೊಂದಿಗೆ ಚಿಕ್ಕ ಆ್ಯಷ್‌​ ಟ್ರೇ ಹೊಂದಿರುತ್ತಾರಂತೆ.

ಸ್ವಚ್ಛತೆ ಕಾಪಾಡುವುದು ಎಲ್ಲರ ಹೊಣೆ
ಜಪಾನಿನ ಶಾಲೆಗಳಲ್ಲಿ ಮಕ್ಕಳಿಗೆ ಸ್ವಚ್ಛತೆಯ ಪಾಠವನ್ನೂ ಹೇಳಿ ಕೊಡಲಾಗುತ್ತದೆ. ಶಾಲೆ ಆವರಣ ಗುಡಿಸುವುದು, ಶೌಚಾಲಯ ತೊಳೆಯುವುದು ಮುಂತಾದ ಕೆಲಸಗಳನ್ನು ವಿದ್ಯಾರ್ಥಿಗಳಿಂದಲೇ ಮಾಡಿಸಲಾಗುತ್ತದೆ. ಮನೆಯಲ್ಲಿಯೂ ಪಾಲಕರು ಮಕ್ಕಳಿಗೆ ಇದೇ ಅಭ್ಯಾಸ ಕಲಿಸುತ್ತಾರೆ. ಇವೆಲ್ಲವೂ ಈಗ ನೆರವಿಗೆ ಬಂದಿದೆ ಎನ್ನುತ್ತದೆ ವಿಶ್ಲೇಷಣೆ.

ಕೇವಲ ಶಾಲಾ-ಕಾಲೇಜ್‌ ಮಾತ್ರ ಬಂದ್‌
ಕೋವಿಡ್-19 ವೈರಸ್‌​ ಹರಡುತ್ತಿರುವ ಈ ಸಮಯದಲ್ಲಿ ಶಾಲೆ- ಕಾಲೇಜುಗಳನ್ನು ಬಂದ್‌​ ಮಾಡಿದ್ದರೂ, ಹೊಟೇಲ್‌​ ಹಾಗೂ ರೆಸ್ಟೊರೆಂಟ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಬಹುಶಃ ಶುಚಿತ್ವ ಕಾಪಾಡುವಲ್ಲಿ ತಮ್ಮ ಜನರ ಮೇಲಿರುವ ನಂಬಿಕೆಯಿಂದಲೇ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next