Advertisement
ಸುಮಿಯೊ ಮೊರಿಜಿರಿ ಅವರು ಜಪಾನ್ ನ ವಾಸಿದಾ ವಿ.ವಿ.ಯ ನಿವೃತ್ತ ಪ್ರಾಧ್ಯಾಪಕರು. ‘ವಾಸಿದಾ ನಾಟಕದ ಮನೆ’ ಎಂಬ ಕೇಂದ್ರ ಸ್ಥಾಪಿಸಿ ಅದರ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 1994ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇರಿದ ಮೊರಿಜಿರಿ ಉತ್ತರ ಕರ್ನಾಟಕದ ಜಾನಪದ ಕಲೆಗಳ ಅಧ್ಯಯನ ನಡೆಸಿದರು. 1996ರಲ್ಲಿ ಮಂಗಳೂರು ವಿ.ವಿ. ಕನ್ನಡ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇರಿದ ಬಳಿಕ ಕರಾವಳಿಯ ಜಾನಪದ, ಕಲೆ, ಸಂಸ್ಕೃತಿ ಬಗ್ಗೆ ಅಧ್ಯಯನ ನಡೆಸಿದ್ದಾರೆ.
ಮಂಗಳೂರಿನಲ್ಲಿ ಸಮ್ಮಾನ
ಸೋಮೇಶ್ವರ ಉಚ್ಚಿಲದ ಕಲಾ ಗಂಗೋತ್ರಿ ಯಕ್ಷಗಾನ ಕೇಂದ್ರದ ವತಿಯಿಂದ ಜು. 7ರಂದು ಸಂಜೆ 4ಕ್ಕೆ ಮಂಗಳೂರಿನ ಡಾನ್ ಬಾಸ್ಕೊ ಸಭಾಂಗಣದಲ್ಲಿ ಪ್ರೊ| ಸುಮಿಯೊ ಮೊರಿಜಿರಿ ಅವರಿಗೆ ಸಮ್ಮಾನ ಸಮಾರಂಭವನ್ನು ಆಯೋಸಲಾಗಿದೆ. ಹಂಪಿ ವಿ.ವಿ.ಯ ವಿಶ್ರಾಂತ ಕುಲಪತಿ ಪ್ರೊ| ಬಿ.ಎ. ವಿವೇಕ್ ರೈ ಅಧ್ಯಕ್ಷತೆ ವಹಿಸಲಿದ್ದು, ಹಾವೇರಿಯ ಜಾನಪದ ವಿ.ವಿ. ವಿಶ್ರಾಂತ ಕುಲಪತಿ ಪ್ರೊ| ಕೆ. ಚಿನ್ನಪ್ಪ ಗೌಡ ಅತಿಥಿಯಾಗಿ ಭಾಗವಹಿಸುವರು. ಹೊಸದಿಲ್ಲಿಯ JNU ಕನ್ನಡ ಪೀಠ ಅಧ್ಯಕ್ಷ ಪ್ರೊ| ಪುರುಷೋತ್ತಮ ಬಿಳಿಮಲೆ ಅಭಿನಂದನ ಭಾಷಣ ಮಾಡುವರು. ಸಂಜೆ 4ಕ್ಕೆ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಇವರಿಂದ ಪೂರ್ವರಂಗ ಪ್ರದರ್ಶನ, ಸಂಜೆ 5.15ಕ್ಕೆ ಸಭಾ ಕಾರ್ಯಕ್ರಮ, ಸಂಜೆ 6.30ರಿಂದ ಯಕ್ಷಗಾನ ಕೇಂದ್ರ ಉಡುಪಿ ಇವರಿಂದ ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನದಲ್ಲಿ ಬಡಗುತಿಟ್ಟು ಯಕ್ಷಗಾನ ‘ವಾಲಿ ಮೋಕ್ಷ’ ಪ್ರದರ್ಶನಗೊಳ್ಳಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕಲಾ ಗಂಗೋತ್ರಿ ಅಧ್ಯಕ್ಷ ಯು. ಸತೀಶ ಕಾರಂತ ತಿಳಿಸಿದರು. ದಯಾನಂದ ಪಿಲಿಕೂರು, ಕೆ.ಎ. ಶೆಟ್ಟಿ, ಕೃಷ್ಣಪ್ಪ ಕೋಟೆಕಾರ್, ಕೆ. ಸದಾಶಿವ ಇದ್ದರು.