ಟೋಕಿಯೋ : ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ದೇಶದ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸಿ ದೀಢೀರ್ ಚುನಾವಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಮುಂದಿನ ತಿಂಗಳು ಅಕ್ಟೋಬರ್ 22ರಂದು ದೇಶದಲ್ಲಿ ಚುನಾವಣೆ ನಡೆಯಲಿದೆ.
ಸಂಸತ್ತಿನ ಸ್ಪೀಕರ್ ತದಮೋರಿ ಒಶಿಮಾ ಅವರು ಪ್ರಧಾನಿಯವರ ಕೆಳಮನೆ ವಿಸರ್ಜನೆ ಹೇಳಿಕೆಯನ್ನು ಸಂಸತ್ತಿನಲ್ಲಿ ಓದಿ ಹೇಳಿದರು.
ಅಬೆ ಅವರು ಲಿಬರಲ್ ಡೆಮೋಕ್ರಾಟಿಕ್ ಪಕ್ಷದ ಮೇಲಿನ ತಮ್ಮ ಹಿಡಿತವನ್ನು ಇನ್ನಷ್ಟು ಭದ್ರಗೊಳಿಸುವುದರೊಂದಿಗೆ ಮುಂದಿನ ವರ್ಷ ಮುಗಿಯಲಿರುವ ತಮ್ಮ ಪ್ರಧಾನಿ ಕಾರ್ಯಾವಧಿಯನ್ನು ಹೊಸ ಅವಧಿಗೆ ವಿಸ್ತರಿಸಿಕೊಳ್ಳುವ ಯತ್ನದಲ್ಲಿ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸಿದ್ದಾರೆ ಎನ್ನಲಾಗಿದೆ.
ಜಪಾನಿನ ಅತ್ಯಂತ ಶಕ್ತಿಯುತ ಉಭಯ ಸದನಗಳ ಸಂಸತ್ತಿಗೆ ಇನ್ನೂ ಒಂದು ವರ್ಷದ ಕಾನೂನು ಬದ್ಧ ಅವಧಿ ಇರುತ್ತಲೇ ಅಬೆ ಅವರು ತಮ್ಮ ರಾಜಕೀಯ ಭವಿಷ್ಯವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸಿರುವುದು ಅವರಲ್ಲಿನ ವಿಶ್ವಾಸದ ಪ್ರತೀಕವೆಂದು ತಿಳಿಯಲಾಗಿದೆ.
ಟೋಕಿಯೋ ರಾಜ್ಯಪಾಲರಾಗಿರುವ ಯುರಿಕೋ ಕೊಯಿಕೆ ಅವರು ಈ ವಾರ ಹೊಸ ಪಕ್ಷವೊಂದನ್ನು ಆರಂಭಿಸಿರುವುದು ಆಳುವ ಪಕ್ಷಕ್ಕೆ ಹೊಸ ಸವಾಲಾಗಿದೆ. ಯುರಿಕೋ ಅವರ “ಪಾರ್ಟಿ ಆಫ್ ಹೋಪ್’ (ಭರವಸೆಯ ಪಕ್ಷ) ಕೆಲವು ಮತದಾರರಲ್ಲಿ ಹೊಸ ಉತ್ಸಾಹವನ್ನು ತುಂಬಿದೆ ಮತ್ತು ಮುಖ್ಯ ವಿರೋಧ ಪಕ್ಷದಿಂದ ಬಂಡುಕೋರರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.