“ಜಪಾನ್ ಓಪನ್ ಬ್ಯಾಡ್ಮಿಂಟನ್ ಕೂಟ’ದಲ್ಲಿ ಪಿ.ವಿ. ಸಿಂಧು ಅವರೇ ಭಾರತದ ದೊಡ್ಡ ಭರವಸೆಯಾಗಿ ಗೋಚರಿಸುತ್ತಿದ್ದಾರೆ. ಭಾರತದ ಮತ್ತೋರ್ವ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಮತ್ತು ಪುರುಷರ ವಿಭಾಗದ ಪ್ರಮುಖ ಸ್ಪರ್ಧಿ ಬಿ. ಸಾಯಿ ಪ್ರಣೀತ್ ಈ ಕೂಟದಿಂದ ಹಿಂದೆ ಸರಿದಿದ್ದಾರೆ.
Advertisement
ಜಪಾನ್ ಓಪನ್‌ನಲ್ಲಿ ಚೀನ, ಕೊರಿಯಾ, ಇಂಡೋನೇಶ್ಯ ಹಾಗೂ ಆತಿಥೇಯ ಜಪಾನಿನ ಬಲಿಷ್ಠ ಆಟಗಾರ್ತಿಯರು ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಇದು ಕೇವಲ ಏಶ್ಯ ಮಟ್ಟದ ಸ್ಪರ್ಧೆಯಾದರೂ ವಿಶ್ವ ಮಟ್ಟದ ಛಾತಿ ಪಡೆದುಕೊಂಡಿದೆ.ಪಿ.ವಿ. ಸಿಂಧು ಮೊದಲ ಸುತ್ತಿನಲ್ಲಿ ಜಪಾನಿನ ಸಯಾಕಾ ಟಕಾಹಶಿ ವಿರುದ್ಧ ಸ್ಪರ್ಧೆಗೆ ಇಳಿಯಲಿದ್ದಾರೆ. ಭಾರತೀಯಳ ಕ್ವಾರ್ಟರ್ ಫೈನಲ್ ಪ್ರವೇಶ ಬಹುತೇಕ ಖಾತ್ರಿ. ಆಗ 3 ಬಾರಿಯ ವಿಶ್ವ ವಿಜೇತೆ ಕ್ಯಾರೋಲಿನಾ ಮರಿನ್ ಅಥವಾ ಅಕಾನೆ ಯಮಾಗುಚಿ ಸವಾಲನ್ನು ಎದುರಿಸಬೇಕಾಗಬಹುದು. ಸೈನಾ ನೆಹ್ವಾಲ್ ಜಕಾರ್ತಾ ಏಶ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದರೆ, ಸಿಂಧು ಬೆಳ್ಳಿ ಗೆದ್ದಿದ್ದರು.
ಪುರುಷರ ವಿಭಾಗದಲ್ಲಿ ಕೆ. ಶ್ರೀಕಾಂತ್ ಮತ್ತು ಎಚ್.ಎಸ್. ಪ್ರಣಯ್ ಅವರಿಗೆ ಮರಳಿ ಫಾರ್ಮ್ ಕಂಡುಕೊಳ್ಳಲು ಇದೊಂದು ವೇದಿಕೆಯಾಗಿದೆ. ಇವರಿಬ್ಬರೂ ವಿಶ್ವ ಚಾಂಪಿಯನ್‌ಶಿಪ್ ಹಾಗೂ ಜಕಾರ್ತಾ ಏಶ್ಯನ್ ಗೇಮ್ಸ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದರು. ಮಾಜಿ ನಂ.1 ಆಟಗಾರ ಕೆ. ಶ್ರೀಕಾಂತ್ ಪ್ರಸಕ್ತ ಋತುವಿನಲ್ಲಿ ಯಾವುದೇ ದೊಡ್ಡ ಪ್ರಶಸ್ತಿ ಗೆದ್ದಿಲ್ಲ. ಮಲೇಶ್ಯ ಓಪನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದೇ ಅತ್ಯುತ್ತಮ ಸಾಧನೆ. ಇವರ ಮೊದಲ ಸುತ್ತಿನ ಎದುರಾಳಿ ಚೀನದ ಹುವಾಂಗ್ ಯುಕ್ಸಿಯಾಂಗ್. ಇನ್ನೊಂದು ಪಂದ್ಯದಲ್ಲಿ ಎಚ್.ಎಸ್. ಪ್ರಣಯ್ ಇಂಡೋನೇಶ್ಯದ ಜೊನಾಥನ್ ಕ್ರಿಸ್ಟಿ ಅವರ ಕಠಿನ ಸವಾಲು ಎದುರಿಸುವರು. ಮೊನ್ನೆಯಷ್ಟೇ ಇಂಡೋನೇಶ್ಯಕ್ಕೆ ಮೊದಲ ಏಶ್ಯಾಡ್ ಚಿನ್ನ ತಂದಿತ್ತ ಹೆಗ್ಗಳಿಕೆ ಕ್ರಿಸ್ಟಿ ಅವರದ್ದಾಗಿದೆ.
Related Articles
ರವಿವಾರವಷ್ಟೇ “ಹೈದರಾಬಾದ್ ಓಪನ್ ಸೂಪರ್ 100 ಟೂರ್ನಿ’ಯಲ್ಲಿ ಚಾಂಪಿಯನ್ ಆದ ಸಮೀರ್ ವರ್ಮ ಕೊರಿಯಾದ ಲೀ ಡಾಂಗ್ ಕಿಯುನ್ ವಿರುದ್ಧ ಆಡುವರು. ಆದರೆ ಕಳೆದ ವರ್ಷ ಸಿಂಗಾಪುರ್ ಓಪನ್ ಪ್ರಶಸ್ತಿ ಗೆದ್ದ ಬಿ. ಸಾಯಿ ಪ್ರಣೀತ್ ಕೂಟದಿಂದ ಹಿಂದೆ ಸರಿದಿದ್ದಾರೆ. ಆದರೆ ಇದಕ್ಕೆ ಕಾರಣ ತಿಳಿದು ಬಂದಿಲ್ಲ.
Advertisement
ಪುರುಷರ ಡಬಲ್ಸ್‌ನಲ್ಲಿ ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತರಾದ ಸಾತ್ವಿಕ್‌ರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಜಪಾನಿನ ಟಕೆಶಿ ಕಮುರ-ಕೀಗೊ ಸೊನೊಡ ವಿರುದ್ಧ; ಮನು ಅತ್ರಿ-ಬಿ. ಸುಮೀತ್ ರೆಡ್ಡಿ ಮಲೇಶ್ಯದ ಗೋಹ್ ವಿ ಶೆಮ್-ಟಾನ್ ವೀ ಕಿಯೋಂಗ್ ವಿರುದ್ಧ; ವನಿತಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪೊ-ಎನ್. ಸಿಕ್ಕಿ ರೆಡ್ಡಿ ಕೊರಿಯಾದ ಚಾಂಗ್ ಯೆ ನಾ-ಜಂಗ್ ಕ್ಯುಂಗ್ ಯುನ್ ವಿರುದ್ಧ ಆಡುವರು.
ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್ ಜೆರ್ರಿ ಚೋಪ್ರಾ-ಸಿಕ್ಕಿ ರೆಡ್ಡಿ ಇಂಡೋನೇಶ್ಯದ ಟೊಂಟೋವಿ ಅಹ್ಮದ್-ಲಿಲಿಯಾನಾ ನಾಸಿರ್ ವಿರುದ್ಧ; ಸಾತ್ವಿಕ್‌ರಾಜ್-ಅಶ್ವಿನಿ ಚೀನದ ವಾಂಗ್ ಯಿಲ್ಯು-ಹುವಾಂಗ್ ಡೊಂಗ್‌ಪಿಂಗ್ ವಿರುದ್ಧ ಸೆಣಸುವರು.