Advertisement

ಮಾನವ ಇತಿಹಾಸದ ಘೋರ ದುರಂತಕ್ಕೆ 75 ವರ್ಷ: ಹಿರೋಶಿಮಾ ದಾಳಿಯಲ್ಲಿ ಆಗಿದ್ದೇನು?

03:00 PM Aug 06, 2020 | Nagendra Trasi |

ಎರಡನೇ ವಿಶ್ವ ಮಹಾಯುದ್ಧದ ವೇಳೆ ಅಮೆರಿಕದವರು ಜಪಾನ್‌ ದೇಶದ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಣುಬಾಂಬ್‌ ದಾಳಿ ಮಾಡಿದ್ದು ಮಾನವ ಇತಿಹಾಸದ ಘೋರ ಕ್ಷಣಗಳಲ್ಲಿ ಒಂದು. ಹಿರೋಶಿಮಾದಲ್ಲಿ ಮೊದಲು ದಾಳಿಯಾದರೆ, ನಾಗಸಾಕಿಯಲ್ಲಿ ಎರಡನೇ ದಾಳಿಯಾಗಿತ್ತು. ಹಿರೋಶಿಮಾದ ಅಣುಬಾಂಬ್‌ ದಾಳಿಯಾಗಿ ಇವತ್ತಿಗೆ ಸರಿಯಾಗಿ 75 ವರ್ಷ. 1945, ಆಗಸ್ಟ… 6ರಂದು ಹಿರೋಶಿಮಾ ಮೇಲೆ ಅಣು ಬಾಂಬ್‌ ಬಿದ್ದದ್ದು. ನಾಗಸಾಕಿಯ ಮೇಲೆ ಅಣುಬಾಂಬ್‌ ದಾಳಿಯಾಗಿದ್ದು ಆಗಸ್ಟ… 9ರಂದು.

Advertisement

ಏಳೂವರೆ ದಶಕಗಳ ಹಿಂದಿನ ದಾಳಿಗೆ ಕಾರಣವೇನು ?

ಹಿರೋಶಿಮಾ ನಗರವು ಜಪಾನ್‌ ದೇಶದ ಪ್ರಮುಖ ಮಿಲಿಟರಿ ನೆಲೆಯಾಗಿತ್ತು. ಶಸ್ತ್ರಾಸ್ತ್ರ ಉತ್ಪಾದನೆಯ ಫ್ಯಾಕ್ಟರಿ ಇತ್ಯಾದಿಗಳೆಲ್ಲವೂ ಇಲ್ಲಿಯೇ ಹೆಚ್ಚಿದ್ದವು. ಅಮೆರಿಕ ಬಹಳ ಯೋಚಿಸಿ ಹಿರೋಶಿಮಾವನ್ನು ಅಣುಬಾಂಬ್‌ ದಾಳಿಗೆ ಆರಿಸಿಕೊಂಡಿತ್ತು. ಒಂದು, ಅದಕ್ಕೆ ಅಣು ಬಾಂಬ್‌ನ ವಾಸ್ತವಿಕ ಪರಿಣಾಮ ಹೇಗಿರುತ್ತದೆ ಎಂಬುದನ್ನು ನೋಡಬೇಕಿತ್ತು. ಇನ್ನೊಂದು, ಜಪಾನ್‌ ದೇಶದ ಮೇಲೆ ಪೂರ್ಣಪ್ರಮಾಣದ ಮಿಲಿಟರಿ ಆಕ್ರಮಣ ಮಾಡುವ ಪ್ರಮೇಯ ತಪ್ಪಿಸಬೇಕಿತ್ತು. ಅಮೆರಿಕ ಇದರಲ್ಲಿ ಯಶಸ್ವಿಯಾಗಿತ್ತು. ಅಣು ಬಾಂಬ್‌ ದಾಳಿ ಆಗುತ್ತಿದ್ದಂತೆಯೇ ಜಪಾನ್‌ ಶರಣಾಯಿತು.

ಅಣುಬಾಂಬ್‌ ದಾಳಿಯಲ್ಲಿ ಆಗಿದ್ದೇನು?

1945, ಆ. 6 ಬೆಳಗ್ಗೆ 8:15ಕ್ಕೆ ಅಮೆರಿಕದ ಬಿ-29 ಬಾಂಬರ್‌ಮೂಲಕ 4 ಟನ್‌ ಯುರೇನಿಯಮ್‌ ಬಾಂಬನ್ನು ಹಾಕಲಾಯಿತು. ನಗರದ ಮಧ್ಯಭಾಗದಲ್ಲಿದ್ದ ಐಒಯಿ(Aioi) ಸೇತುವೆಯನ್ನು ಗುರಿ ಮಾಡಿ 11,500 ಅಡಿ ಎತ್ತರದಿಂದ ಅಣುಬಾಂಬ್‌ ಅನ್ನು ಎಸೆಯಲಾಯಿತು. ನೆಲಕ್ಕೆ ಅಪ್ಪಳಿಸುವ ಮುನ್ನವೇ, ನೆಲದಿಂದ ಸುಮಾರು 2 ಸಾವಿರ ಅಡಿ ಎತ್ತರದಲ್ಲಿ ಬಾಂಬ್‌ ಸ್ಫೋಟಗೊಂಡಿತು. ಸ್ಫೋಟಗೊಂಡ ಕೆಲ ಕ್ಷಣಗಳಲ್ಲೇ 3-4 ಸಾವಿರ ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಯಿತು. ಸ್ಥಳದಿಂದ 2 ಕಿಮೀ ಸುತ್ತಮುತ್ತಲಿನ ಜಾಗದ ಪ್ರತಿಯೊಂದು ವಸ್ತುವೂ ನಿರ್ನಾಮವಾದವು. ಬಾಂಬ್‌ ಬಿದ್ದು ಒಂದು ಗಂಟೆ ಬಳಿಕ ತೀವ್ರ ವಿಕಿರಣ ವಸ್ತುಗಳ ಕಪ್ಪು ಮಳೆ ಇಡೀ ನಗರವನ್ನ ರಾಚಿತು. ಇದರಿಂದ ಇಡೀ ಹಿರೋಶಿಮಾ ನಗರಕ್ಕೆ ವಿಕಿರಣದ ಕರಾಳ ಪರಿಣಾಮ ತಟ್ಟಿತು.

Advertisement

ಲಕ್ಷಾಂತರ ಮಂದಿ ಬಲಿ?

ಹಿರೋಶಿಮಾ ನಗರದಲ್ಲಿ ಆಗ ಇದ್ದ ಜನಸಂಖ್ಯೆ 3.5 ಲಕ್ಷ. ಬಾಂಬ್‌ ಬಿದ್ದ ಸ್ಥಳದಿಂದ 500 ಮೀಟರ್‌ಸುತ್ತಮುತ್ತಲಿದ್ದ ಪ್ರತಿಯೊಬ್ಬ ವ್ಯಕ್ತಿಯೂ ತತ್‌ಕ್ಷಣವೇ ಸಾವನ್ನಪ್ಪಿದ್ದರು. ಅಣು ಬಾಂಬ್‌ನಿಂದ ಉದ್ಭವಿಸಿದ ವಿಕಿರಣಗಳಿಂದಾಗಿ ಕ್ರಮೇಣ ಸಾವಿನ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 1.4 ಲಕ್ಷ ಜನರು ಬಲಿಯಾಗಿಹೋಗಿದ್ದರು ಅಂದರೆ ಹಿರೋಶಿಮಾ ಜನಸಂಖ್ಯೆಯ ಶೇ. 40 ಭಾಗ ಅಸುನೀಗಿದ್ದರು. ಈಗಲೂ ಅಲ್ಲಿ ವಿಕಿರಣದ ಪರಿಣಾಮವನ್ನು ಜನರು ಅನುಭವಿಸುತ್ತಲೇ ಇದ್ದಾರೆ. ಇದೇ ಕಾರಣಕ್ಕೆ ಇಲ್ಲಿಯವರೆಗೆ ಸಾವನ್ನಪ್ಪಿದವರ ಸಂಖ್ಯೆ 3 ಲಕ್ಷ ಆಗಿದೆ. ಸದ್ಯ ಹಿರೋಶಿಮಾದಲ್ಲಿ 12 ಲಕ್ಷ ಜನಸಂಖ್ಯೆ ಇದೆ.

ವಿಕಿರಣದ ಪರಿಣಾಮ ಹೇಗೆ?

ವಿಕಿರಣ ತಗುಲಿದ ವ್ಯಕ್ತಿಗೆ ವಾಂತಿ ಮತ್ತು ಕೂದಲುದುರುವಿಕೆಯ ತೊಂದರೆ ಕಾಣಿಸಿಕೊಂಡಿತು. ಕೆಲವರಂತೂ 3-6 ವಾರಗಳಲ್ಲಿ ಸಾವನ್ನಪ್ಪಿದ್ದರು ಬದುಕುಳಿದವರ ಆರೋಗ್ಯ ಹದಗೆಟ್ಟು ಹಲವರಿಗೆ ಕ್ಯಾನ್ಸರ್‌ಮತ್ತಿತರ ಮಾರಕ ರೋಗಗಳು ಬಂದವು. ಇಂಥ ವಿಕಿರಣಗಳಿಂದ ಘಾಸಿಗೊಳಗಾಗಿರುವ 1.36 ಲಕ್ಷದಷ್ಟು ಜನರು ಈಗಲೂ ಬದುಕಿದ್ದು, 1957ರಿಂದಲೂ ಸರ್ಕಾರವೇ ಇವರ ಚಿಕಿತ್ಸಾ ವೆಚ್ಚವನ್ನು ಭರಿಸುತ್ತಿದೆ. ಈ ವಿಕಿರಣದ ಆಘಾತ ಎರಡನೇ ತಲೆಮಾರಿನವರಿಗೂ ಮುಂದುವರಿದಿರುವುದು ಅಣು ಬಾಂಬ್‌ ಘೋರತ್ವಕ್ಕೆ ಕನ್ನಡಿ ಹಿಡಿದಿದೆ.

ಅಣುಬಾಂಬ್‌ ದಾಳಿಗೂ ಹಿಂದೆ ಪೇಪರ್‌ಕ್ರೇನ್‌ಗಳ ನಂಟು

ಇಂದಿಗೂ ಹಿರೋಶಿಮಾಕ್ಕೆ ಹೋದರೂ ಅಲ್ಲಿ ಓರಿಗಮಿ ಪೇಪರ್‌ನಿಂದ ಮಾಡಲಾದ ಕ್ರೇನ್‌ಗಳು ಎಲ್ಲೆಡೆಯೂ ಕಾಣಸಿಗುತ್ತದೆ. ಈ ಕ್ರೇನ್‌ಗಳಿಗೂ ಅಣುಬಾಂಬ್‌ ದಾಳಿಗೂ ಪರೀಕ್ಷ ಸಂಬಂಧ ಇದೆ. ಜಪಾನ್‌ ದೇಶ ಒಂದು ಜಾನಪದ ಕಥೆಯ ಪ್ರಕಾರ, ಒಂದು ಸಾವಿರ ಪೇಪರ್‌ಕ್ರೇನ್‌ಗಳನ್ನ  ಮಾಡಿದರೆ ಅವರ ಒಂದು ಬಯಕೆ ಈಡೇರುತ್ತದಂತೆ. 12 ವರ್ಷದ ಸಡಾಕೋ ಸಸಾಕಿ ಎಂಬ ಬಾಲಕಿ ಈ ಪೇಪರ್‌ಕ್ರೇನ್‌ಗಳನ್ನ ತಯಾರಿಸಿದ್ದಳು. ಅಣುಬಾಂಬ್‌ ದಾಳಿಯಾದಾಗ ಈಕೆಗೆ 2 ವರ್ಷ. 10 ವರ್ಷಗಳ ಬಳಿಕ ವಿಕಿರಣದ ಪರಿಣಾಮವಾಗಿ ಈಕೆಗೆ ಲ್ಯೂಕೆಮಿಯಾ ಕಾಯಿಲೆ ತೋರಿತು. ಆ ಬಳಿಕ ಆಕೆ ರೋಗದಿಂದ ಮುಕ್ತವಾಗಲು ಜಾನಪದ ಕಥೆಯಂತೆ 1,000 ಓರಿಗಮಿ ಪೇಪರ್‌ಕ್ರೇನ್‌ಗಳನ್ನ ತಯಾರಿಸಿದ್ದಳು.

ಆದರೆ, ದುರಂತವೆಂದರೆ ಆಕೆ ಬದುಕುಳಿಯಲಿಲ್ಲ. ಲ್ಯೂಕೆಮಿಯಾ ವಕ್ಕರಿಸಿಕೊಂಡ ಎರಡೇ ತಿಂಗಳಲ್ಲಿ ಆಕೆ ಬಲಿಯಾಗಿದ್ದಳು. ಆಕೆಯ ಹೋರಾಟದ ಮನೋಭಾವಕ್ಕೆ ಸಂಕೇತವಾಗಿ ಜಪಾನೀಯರು ಈಗಲೂ ಪ್ರತಿ ವರ್ಷ ಪೇಪರ್‌ಕ್ರೇನ್‌ಗಳನ್ನ ತಯಾರಿಸುತ್ತಾರೆ. 2016ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರು ಹಿರೋಶಿಮಾಗೆ ಭೇಟಿ ನೀಡಿದಾಗ ನಾಲ್ಕು ಪೇಪರ್‌ಕ್ರೇನ್‌ಗಳನ್ನ ತೆಗೆದುಕೊಂಡು ಹೋಗಿದ್ದರು. ಈಗಲೂ ಒಬಾಮ ಅವರ ಕ್ರೇನ್‌ಗಳನ್ನ ಹಿರೋಶಿಮಾದ ಮ್ಯೂಸಿಯಂನಲ್ಲಿ ಸ್ಮರಣಿಕೆಯಾಗಿ ಇಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next