ಹೊಸದಿಲ್ಲಿ : ಈಗಿನ ಎಪ್ರಿಲ್ – ಮಾರ್ಚ್ ನಮೂನೆಯ ಹಣಕಾಸು ವರ್ಷವನ್ನು ಸರಕಾರ ಜನವರಿ – ಡಿಸೆಂಬರ್‌ಗೆ ಪರಿವರ್ತಿಸಲು ನಿರ್ಧರಿಸಿದೆ. ಈ ಕುರಿತ ಅಧಿಕೃತ ಪ್ರಕಟನೆಯ ಶೀಘ್ರವೇ ಹೊರ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಹಣಕಾಸು ವರ್ಷದ ನಮೂನೆಯನ್ನು ಜನವರಿ – ಡಿಸೆಂಬರ್ ಗೆ ಪರಿವರ್ತಿಸುವ ನಿರ್ಧಾರದಲ್ಲಿ ಕೃಷಿ ಉತ್ಪಾದನೆ ಅವರ್ತನವನ್ನು ದೃಷ್ಟಿಯಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಕಳೆದ ವರ್ಷ ನೀತಿ ಆಯೋಗದ ಆಡಳಿತ ಸಮಿತಿ ಸಭೆಯಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ-ಡಿಸೆಂಬರ್ ಹಣಕಾಸು ವರ್ಷದ ನಮೂನೆಯ ಅನುಷ್ಠಾನವನ್ನು ಬೆಂಬಲಿಸಿದ್ದರು.
ಕೃಷಿ ಆದಾಯವೇ ಹೆಚ್ಚು ಹೆಚ್ಚಾಗಿ ಮುಖ್ಯವಾಗುತ್ತಿರುವ ನಮ್ಮ ದೇಶದಲ್ಲಿ ಹಣಕಾಸು ವರ್ಷವನ್ನು ಅದಕ್ಕೆ ಸರಿ ಹೊಂದುವಂತೆ ಬದಲಾಯಿಸುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಅಂದು ಹೇಳಿದ್ದರು.
ಮುಂಗಾರು ಮಾರುತ ಜೂನ್ ನಲ್ಲಿ ಆಗಮಿಸುತ್ತವೆ. ಆದರೆ ರಾಜ್ಯ ಸರಕಾರಗಳು ಕೃಷಿ ಸ್ಕೀಮುಗಳನ್ನು ಮತ್ತು ಕೃಷಿ ಸಂಬಂಧಿ ಖರ್ಚುವೆಚ್ಚಗಳನ್ನು ಅಕ್ಟೋಬರ್ ವರೆಗೂ ಆರಂಭಿಸುವುದಿಲ್ಲ ; ಹಾಗಾಗಿ ಅವುಗಳ ಪಾಲಿಗೆ ಕೃಷಿ ನೀತಿ ಅನುಷ್ಠಾನಕ್ಕೆ ಕೇವಲ ಅರ್ಧ ವರ್ಷ ಮಾತ್ರವೇ ಸಿಗುತ್ತಿದೆ ಎಂದು ಮೋದಿ ಹೇಳಿದ್ದರು.