Advertisement
ಪತ್ರಿಕಾ ಪ್ರಕಟಣೆ ಇಂತಿದೆ
Related Articles
Advertisement
ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಯಕ್ಷಗಾನದ ತಿರುಗಾಟಕ್ಕೆ ಸಮಸ್ಯೆಯಾಗಿತ್ತು. ಎಲ್ಲ ಸರಿಯಾಗಿ ಈ ವರ್ಷದ ತಿರುಗಾಟ ಸಸೂತ್ರವಾಗಿ ನಡೆಯಲಿದೆ ಎನ್ನುವಾಗ ಪೆರ್ಡೂರು ಮೇಳದಲ್ಲಿ ಜನ್ಸಾಲೆ ಇಲ್ಲ ಎಂಬ ವದಂತಿಗಳು ಹಬ್ಬಿದವು. ಯಜಮಾನರ ಜತೆ ಸ್ಪಷ್ಟನೆ ಬಯಸಿದಾಗ, ಈ ವರ್ಷ ಮೇಳ ತಿರುಗಾಟ ಸಂದರ್ಭ ಬೇರೆ ಪ್ರದರ್ಶನಗಳಿಗೆ ತೆರಳಲು ಅವಕಾಶ ಇಲ್ಲ, ಹೊರಗಿನ ಪ್ರದರ್ಶನಗಳೂ ನಮ್ಮ ಮೇಳದ ಮುಖಾಂತರವೇ ನಡೆಯುವುದಿದ್ದರೆ ಮಾತ್ರ ಭಾಗವಹಿಸಬಹುದು ಎಂದು ತಿಳಿಸಿದ ಮೇರೆಗೆ ನಾನು ಈ ತಿರುಗಾಟಕ್ಕೆ ಅವರ ಶರತ್ತುಗಳಿಗೆ ಒಪ್ಪಿದ್ದೆ. ಪ್ರಕಟನೆಯೂ ಹೊರಬಿದ್ದಿತ್ತು. ಈ ವರ್ಷದ ನೂತನ ಪ್ರಸಂಗದ ಪ್ರದರ್ಶನಪೂರ್ವ ತಯಾರಿಯಲ್ಲೂ ಭಾಗವಹಿಸಿದ್ದೆ. ಮೇಳದ ಆಟ ಆಡಿಸುವ ಕಂಟ್ರಾಕ್ಟುದಾರರು ನಾನೇ ಪ್ರಧಾನ ಭಾಗವತ ಎಂದು ಕರಪತ್ರಗಳನ್ನೂ ಮುದ್ರಿಸಿ ಹಂಚಿದ್ದರು.
ಮೇಳ ತಿರುಗಾಟದ ಆಸುಪಾಸಿನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗದೇ ದೂರದ ಕಾರ್ಯಕ್ರಮದಲ್ಲಿ ಭಾಗಿಯಾಗುವೆ. ಕಲಾವಿದನಿಗೆ ಸೇವೆ ಮಾಡಲು ಶಕ್ತಿಯಿದ್ದಾಗ ಕಲಾಸೇವೆ ಮಾಡಬೇಕು. ನಿವೃತ್ತಿಯ ಬಳಿಕ ಹಾಗೂ ಜೀವನೋಪಾಯಕ್ಕೆ ಕಲಾಸೇವೆಯೊಂದೇ ನಮಗಿರುವ ದಾರಿ ಎಂದು, ಕಾರ್ಯಕ್ರಮಕ್ಕೆ ಅವಕಾಶ ಬಂದಾಗ ಸಂಘಟಕರ ಬಳಿ ಮೇಳದ ಯಜಮಾನರ ಬಳಿ ಮಾತನಾಡುವಂತೆ ತಿಳಿಸಿದ್ದೆ. ಆದರೆ ಸಂಘಟಕರಿಗೆ ಮೇಳದ ಯಜಮಾನರು ನನ್ನನ್ನು ಕಳುಹಿಸಿಕೊಡಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾರೆ ಎಂದು ತಿಳಿಯಿತು. ಇದನ್ನು ಪ್ರಶ್ನಿಸಿದಾಗ ಯಾವುದೇ ಹೊರಗಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಮೇಳ ತಿರುಗಾಟ ಆರಂಭಿಸಲು 10 ದಿನಗಳು ಇರುವಾಗ ಮೇಳಕ್ಕೆ ತೊಂದರೆ ಕೊಡುವುದು ಸರಿಯಲ್ಲ, ಕಲಾವಿದನಾಗಿ ಮೇಳನಿಷ್ಠೆ ತೋರಿಸಬೇಕು, ಮೇಳದ ವ್ಯವಸ್ಥೆಗೆ ಕೊನೆ ಕ್ಷಣದಲ್ಲಿ ಧಕ್ಕೆ ಬರಬಾರದು, ಮೇಳವನ್ನು ನಂಬಿಕೊಂಡ ಇತರ ಕಲಾವಿದ, ಸಿಬಂದಿಗೆ ತೊಂದರೆಯಾಗಬಾರದು ಎಂದು ನಾನು ಮೇಳದ ಯಜಮಾನರ ಎಲ್ಲ ಶರತ್ತುಗಳಿಗೂ ಒಪ್ಪಿ, ಹೊರಗಿನ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದೆ. ಅದರ ಮರುದಿನ ಬೆಳಗ್ಗೆ ಇದ್ದಕ್ಕಿದ್ದಂತೆ ಕರೆ ಮಾಡಿದ ಕರುಣಾಕರ ಶೆಟ್ಟರು, ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ. ನಾನು ಬದಲಿ ವ್ಯವಸ್ಥೆ ಮಾಡಿಕೊಳ್ಳುತ್ತೇನೆ ಎಂದು ಬಿಟ್ಟರು. ಇದು ನನಗೆ ದಿಗಿಲಾಯಿತು.
ಇಂತಹ ದಿಢೀರ್ ಬದಲಾವಣೆಗೆ ಕಾರಣ ಏನು ಎನ್ನುವ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಯಜಮಾನರ ಎಲ್ಲ ಶರತ್ತುಗಳಿಗೆ ಒಪ್ಪಿ ಈ ತಿರುಗಾಟ ನಡೆಸಲು ಬದ್ಧನಾದ ಮೇಲೂ ಏಕಾಏಕಿ ಮೇಳದಿಂದ ಕೈ ಬಿಟ್ಟದ್ದರ ಹಿನ್ನೆಲೆ ನನಗಷ್ಟೇ ಅಲ್ಲ ಬಹುತೇಕ ಯಕ್ಷಗಾನ ಪ್ರಿಯರಿಗೆ ಗೊಂದಲ ಮೂಡಿಸಿದೆ. ಎಲ್ಲ ಮೇಳಗಳು ತಿರುಗಾಟದ ಸಿದ್ಧತೆಯಲ್ಲಿರುವಾಗ, ಕೆಲವು ಮೇಳಗಳು ತಿರುಗಾಟ ಆರಂಭಿಸಿರುವಾಗ ನನ್ನನ್ನು ಯಾವುದೇ ಮೇಳಕ್ಕೆ ಸೇರದಂತೆ ಕಟ್ಟಿಹಾಕಿದಂತಾಗಿದೆ. ಆದ್ದರಿಂದ ಇಂತಹ ಸಂಕಷ್ಟದ ಪರಿಸ್ಥಿತಿ, ನನಗಾದ ಅನ್ಯಾಯ ಬೇರೆ ಯಾವುದೇ ಹಿರಿ ಕಿರಿಯ ಕಲಾವಿದರಿಗೆ ಎಂದೆಂದೂ ಒದಗಿ ಬರಬಾರದು ಎನ್ನುವುದು ನನ್ನ ಪ್ರಾರ್ಥನೆ. ಈ ಸಂದರ್ಭದಲ್ಲಿ ಬೇರೆ ಬೇರೆ ಮೇಳಗಳಿಂದ ನನಗೆ ಆಹ್ವಾನ ಬಂದರೂ ಕೊನೆ ಹಂತದಲ್ಲಿ ಅಲ್ಲಿನ ವ್ಯವಸ್ಥೆಗೆ ತೊಂದರೆಯಾಗಬಾರದು, ಅಲ್ಲಿನ ಕಲಾವಿದರಿಗೆ ಇರಿಸುಮುರುಸು ಆಗಬಾರದು ಎಂದು ನಾನು ಯಾವುದೇ ಮೇಳದ ಜತೆಗೂ ಒಪ್ಪಂದ ಮಾಡಿಕೊಳ್ಳಲಿಲ್ಲ. ಒಬ್ಬ ಪ್ರಸಿದ್ಧ ಭಾಗವತ ಮೇಳ ಇಲ್ಲದೇ ಇರಬಾರದು ಎಂಬ ಕಾಳಜಿಯಿಂದ ನನಗೆ ಆಹ್ವಾನ ಇತ್ತ ಎಲ್ಲರಿಗೂ ನಾನು ಋಣಿ. ಯಾವುದೇ ಮೇಳದವರು, ಸಂಘಟಕರು ಆಹ್ವಾನಿಸಿದರೂ ಮೇಳದ ಆಡಳಿತ ಹಾಗೂ ಕಲಾವಿದರ ಸಹಮತದ ಮೇರೆಗೆ ನಾನು ಪ್ರೀತಿಯಿಂದ ಭಾಗವಹಿಸಲು ಸಿದ್ಧನಿದ್ದೇನೆ. ಉಳಿದಂತೆ ಗಾನವೈಭವ, ತಾಳಮದ್ದಳೆಗಳಲ್ಲಿ ಸಿಕ್ಕೇ ಸಿಗುತ್ತೇನೆ. 9 ವರ್ಷಗಳ ಕಾಲ ನನಗೆ ಅನ್ನದ ಋಣ ನೀಡಿದ, ನನ್ನ ಪ್ರಸಿದ್ಧಿಯ ಕಿರೀಟಕ್ಕೆ ಗರಿ ತೊಡಿಸಿದ ಪೆರ್ಡೂರು ಮೇಳದ ಮುಂದಿನ ತಿರುಗಾಟ ಯಶಸ್ವಿಯಾಗಿ ನಡೆಯಲಿ.
ಈವರೆಗೆ ನನ್ನ ಜತೆಗಿದ್ದ ಮೇಳದ ಯಜಮಾನರು, ಸರ್ವ ಕಲಾವಿದರು, ಸಿಬಂದಿಗೆ ನಾನು ನಂಬಿದ ಬ್ರಹ್ಮಲಿಂಗೇಶ್ವರ ಹಾಗೂ ಪದುಮನಾಭ ಸ್ವಾಮಿ ಒಳ್ಳೆಯದನ್ನು ಮಾಡಲಿ. ಹೊಸದಾಗಿ ಮತ್ತೆ ಮೇಳಕ್ಕೆ ಆಗಮಿಸಿದ ಧಾರೇಶ್ವರ ಭಾಗವತರಿಗೆ ಶುಭಹಾರೈಸುವೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ಕುರಿತಾಗಲೀ, ಮೇಳದ ಕುರಿತಾಗಲೀ, ಧಾರೇಶ್ವರ ಭಾಗವತರ ಕುರಿತಾಗಲೀ ಯಾರೂ ಋಣಾತ್ಮಕ ಸಂದೇಶಗಳನ್ನು ಹಾಕಬಾರದಾಗಿ ಈ ಮೂಲಕ ವಿನಂತಿಸುತ್ತೇನೆ. ಮೇಳದ ಯಾವುದೇ ಕಲಾವಿದರಿಗೆ, ಕಾರ್ಯಕ್ರಮಕ್ಕೆ ತೊಂದರೆ ನೀಡಬಾರದಾಗಿ ನನ್ನ ಕಳಕಳಿಯ ವಿನಂತಿ.
ಜನ್ಸಾಲೆ ರಾಘವೇಂದ್ರ ಆಚಾರ್ಯಭಾಗವತರು