ಅತ್ತ ಕಡೆ “ರ್‍ಯಾಂಬೋ -2′, ಇತ್ತ ಕಡೆ “ಅಯೋಗ್ಯ’, “ದಿ ವಿಲನ್’, “ಅಂಬಿ ನಿಂಗೆ ವಯಸ್ಸಾತೋ’ … ಒಂದಕ್ಕಿಂತ ಒಂದು ಹಾಡುಗಳು ಸ್ಪರ್ಧೆಗೆ ಬಿದ್ದಂತೆ ಯಶಸ್ಸು ಕಂಡಿವೆ. ಸಿನಿಪ್ರೇಮಿಗಳು ಕೂಡಾ ಈ ಹಾಡುಗಳಲ್ಲಿ ಹೊಸತನ ಕಂಡಿದ್ದಾರೆ. ಈ ಎಲ್ಲಾ ಹಾಡುಗಳ ಯಶಸ್ಸಿನ ಹಿಂದಿನ ರೂವಾರಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ದೂರದಿಂದಲೇ ಖುಷಿ ಅನುಭವಿಸುತ್ತಿದ್ದಾರೆ. “ಮ್ಯಾಜಿಕಲ್ ಕಂಪೋಸರ್’ ಎಂಬ ಬಿರುದಿನೊಂದಿಗೆ ಸಿಕ್ಕಾಪಟ್ಟೆ ಬಿಝಿಯಾಗಿ ಬಿಟ್ಟ ಅರ್ಜುನ್ ಜನ್ಯ ಅವರಿಗೆ ಕಳೆದ ವರ್ಷಕ್ಕಿಂತ ಈ ವರ್ಷ ಕೊಂಚ ಹೆಚ್ಚೇ ಕೈ ಹಿಡಿದಿದ್ದು ಸುಳ್ಳಲ್ಲ. ಕಳೆದ ವರ್ಷವೂ ಅವರ ಬತ್ತಳಿಕೆಗೆ ಕೆಲವು ಹಿಟ್ ಸಾಂಗ್‌ಗಳು ಸೇರಿದರೂ ಈ ವರ್ಷದಷ್ಟು ಸೇರಿರಲಿಲ್ಲ. ನೀವು ಸೂಕ್ಷ್ಮವಾಗಿ ಗಮನಿಸಿದರೆ “ರ್‍ಯಾಂಬೋ-2′ ಚಿತ್ರದ “ಚುಟು ಚುಟು …’, “ಅಯೋಗ್ಯ’ ಚಿತ್ರದ “ಏನಮ್ಮಿ ಏನಮ್ಮಿ …’, “ದಿ ವಿಲನ್’ ಚಿತ್ರದ “ಐಯಾಮ್ ವಿಲನ್ …’, “ಟಿಕ್ ಟಿಕ್ …’ ಹಾಗೂ “ಅಂಬಿ ನಿಂಗೆ ವಯಸ್ಸಾತೋ’ ಚಿತ್ರದ “ಹೇ ಜಲೀಲ್’ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ. ಒಂದಕ್ಕಿಂತ ಒಂದು ಹಾಡುಗಳು ವಿಭಿನ್ನವಾಗಿವೆ ಕೂಡಾ.
ಈ ಖುಷಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೂ ಇದೆ. “ವಿಭಿನ್ನ ಆಲ್ಬಂಗಳು ಸಿಕ್ಕಿವೆ. ಪ್ರತಿ ಸಿನಿಮಾಗಳ ಸೊಗಡು ಬೇರೆ ತರಹ ಇರುವುದರಿಂದ ಹೊಸದನ್ನು ನೀಡಲು ಸಾಧ್ಯವಾಯಿತು’ ಎನ್ನುವುದು ಅರ್ಜುನ್ ಜನ್ಯ ಮಾತು. ಹಾಡುಗಳು ಜನರಿಗೆ ತಲುಪುವುದರಲ್ಲಿ ಸಿನಿಮಾದ ಯಶಸ್ಸು ಕೂಡಾ ಮುಖ್ಯವಾಗುತ್ತದೆ ಎನ್ನುವ ಸತ್ಯವನ್ನು ಅರ್ಜುನ್ ಜನ್ಯ ಕಂಡುಕೊಂಡಿದ್ದಾರೆ. ಒಂದು ಸಿನಿಮಾ ಹಿಟ್ ಆದರೆ, ಅದರ ಹಾಡುಗಳು ಕೂಡಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತವೆ ಎಂಬ ನಂಬಿಕೆ ಅವರದು. “ಕಳೆದ ವರ್ಷವೂ ಒಂದಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದೆ. ಅದರಲ್ಲಿ ಕೆಲವು ಸಿನಿಮಾಗಳು ಹಿಟ್ ಆದರೆ, ಇನ್ನು ಕೆಲವು ಸಾಧಾರಣವಾಯಿತು.
“ಒಂದು ಮಳೆಬಿಲ್ಲೆ’, “ಅಪ್ಪ ಐ ಲವ್ ಯೂ’ ಹಾಡುಗಳು ಕಳೆದ ವರ್ಷ ಒಳ್ಳೆಯ ಹೆಸರು ತಂದುಕೊಟ್ಟವು. ಪ್ರತಿ ಆಲ್ಬಂನ ಹಿಂದೆ ನಮ್ಮ ಶ್ರಮ ಇದ್ದೇ ಇರುತ್ತದೆ. ಕೆಲವೊಮ್ಮೆ ಅದು ಸರಿಯಾಗಿ ಜನರನ್ನು ತಲುಪುವುದಿಲ್ಲ’ ಎನ್ನುತ್ತಾರೆ ಅರ್ಜುನ್. ಅರ್ಜುನ್‌ಗೆ ಇಷ್ಟು ವರ್ಷದ ಅನುಭವದಲ್ಲಿ ಒಂದು ಅಂಶ ಸ್ಪಷ್ಟವಾಗಿದೆ. ಅದು ಸ್ವಾತಂತ್ರ್ಯ. ಟೆಕ್ನಿಷಿಯನ್‌ಗಳ ಕೈ ಕಟ್ಟಿ ಹಾಕಿ, ಇಷ್ಟೇ ಮಾಡಬೇಕು, ಇದೇ ಮಾಡಬೇಕು ಎಂದರೆ ಅಲ್ಲಿ ಒಳ್ಳೆಯ ಪ್ರಾಡಕ್ಟ್ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದು ಅರ್ಜುನ್‌ಗೆ ಗೊತ್ತಾಗಿದೆ. “ನಾವು ಪ್ರತಿ ಸಿನಿಮಾವನ್ನು ಪ್ರೀತಿಯಿಂದ ಮಾಡುತ್ತೇವೆ. ಯಾವುದು ವರ್ಕ್ ಆಗಬಹುದು, ಹೇಗೆ ಮಾಡಿದರೆ ಚೆಂದ, ಯಾವ ಆಡಿಯೋ ಕಂಪೆನಿ ಒಳ್ಳೆಯದು … ಎಂದು ನಮ್ಮ ಆಲೋಚನೆಗಳನ್ನು ಹೇಳುತ್ತೇವೆ. ಆದರೆ, ಕೆಲವು ತಂಡಗಳು, ಅದನ್ನು ಒಪ್ಪಲ್ಲ. ಅವರದೇ ಆದ ಒಂದು ಮೈಂಡ್‌ಸೆಟ್‌ನಲ್ಲಿರುತ್ತಾರೆ. ಸಹಜವಾಗಿಯೇ ಅಲ್ಲಿ ಟೆಕ್ನಿಷಿಯನ್‌ಗೆ ಪ್ರತಿಭೆ ತೋರಿಸಲು ಅವಕಾಶವಿರುವುದಿಲ್ಲ. ಅದೇ ನೀವು ಅವರನ್ನು ಮುಕ್ತವಾಗಿ ಬಿಟ್ಟರೆ, ಅಲ್ಲಿ ಹೊಸ ಪ್ರಯೋಗಕ್ಕೆ ಅವಕಾಶ ಸಿಗುತ್ತದೆ. “ಅಯೋಗ್ಯ’ ತಂಡ ಸಂಪೂರ್ಣವಾಗಿ ಹೊಸ ಪ್ರಯೋಗಕ್ಕೆ ಮುಂದಾಗಿತ್ತು. ಹಾಗಾಗಿ, ಅಲ್ಲಿ ಹೊಸದನ್ನು ಪ್ರಯತ್ನಿಸಿದೆ’ ಎನ್ನುವ ಮೂಲಕ ತಂತ್ರಜ್ಞರಿಗೆ ಮುಕ್ತವಾತಾವರಣ ಮುಖ್ಯ ಎನ್ನುತ್ತಾರೆ.
“ದಿ ವಿಲನ್’ ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟಿಸಿರುವ ಚಿತ್ರ. ಅರ್ಜುನ್ ಜನ್ಯ ಸಂಗೀತದ ಹಾಡುಗಳು ಕೂಡಾ ಹಿಟ್ ಆಗಿವೆ. ಗಾಂಧಿನಗರದಲ್ಲಿ ಒಂದು ಮಾತಿದೆ, ಪ್ರೇಮ್ ಅವರನ್ನು ಒಪ್ಪಿಸೋದು ಕಷ್ಟ ಎಂದು. ಆದರೆ, ಅರ್ಜುನ್ ಜನ್ಯ ಮಾತ್ರ ಸುಲಭವಾಗಿ ಒಪ್ಪಿಸಿ, ಖುಷಿಯಿಂದ ಕೆಲಸ ಮುಗಿಸಿಕೊಟ್ಟಿದ್ದಾರೆ. “ಪ್ರೇಮ್ ಅವರ ಜೊತೆ ನನಗೆ ಕಷ್ಟ ಆಗಲಿಲ್ಲ. ಅವರು ಅಹಂ ಇಲ್ಲದಿರುವ ಮನುಷ್ಯ. ತಲೆಯಲ್ಲಿ ಅವರದೇ ಆದ ಕಾನ್ಸೆಪ್ಟ್ ಇರುತ್ತೆ. ಅದರೊಂದಿಗೆ ಬಂದು ಹೀಗೆ ಬರಬೇಕು ಎನ್ನುತ್ತಾರೆ. ಅದೇ ಕಾರಣದಿಂದ “ವಿಲನ್’ ಚಿತ್ರದಲ್ಲಿ ಅವರ ಸೊಗಡು ಹೆಚ್ಚಿದೆ. ಕೆಲವರು ಇ-ಮೇಲ್ ಮೂಲಕ ಹಾಡುಗಳನ್ನು ಕಳುಹಿಸಿ ಅಂತಾರೆ, ಆದರೆ, ಪ್ರೇಮ್, ನೇರವಾಗಿ ಸ್ಟುಡಿಯೋಗೆ ಬಂದು ಹಾಡುಗಳನ್ನು ಕೇಳುತ್ತಾರೆ’ ಎಂದು “ವಿಲನ್’ ಬಗ್ಗೆ ಹೇಳುತ್ತಾರೆ ಅರ್ಜುನ್ ಜನ್ಯ. ಇನ್ನು, ಅರ್ಜುನ್ ಜನ್ಯ ಅವರಿಗೆ ತುಂಬಾ ಸವಾಲಿನ ಆಲ್ಬಂ ಅನಿಸಿದ್ದು “ಅಂಬಿ ನಿಂಗೆ ವಯಸ್ಸಾಯೋ’ ಚಿತ್ರ. ಅದಕ್ಕೆ ಕಾರಣ ಇಬ್ಬರು ದೊಡ್ಡ ನಟರು. ಅತ್ತ ಕಡೆ ಅಂಬರೀಶ್, ಇತ್ತ ಕಡೆ ಸುದೀಪ್, ಈ ಇಬ್ಬರು ನಟರ ಇಮೇಜ್‌ಗೆ ತಕ್ಕಂತೆ ಹಾಡುಗಳನ್ನು ಮಾಡಬೇಕಿತ್ತು. “ಸಹಜವಾಗಿಯೇ ಕೊಂಚ ಭಯವಿತ್ತು, ಏಕೆಂದರೆ ಮೊದಲ ಬಾರಿಗೆ ಅಂಬರೀಶ್ ಅವರ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದೆ. ಆ ನಂತರ ಅವರ ವಯಸ್ಸಿಗೆ ಹಾಗೂ ಪಾತ್ರಕ್ಕೆ ತಕ್ಕಂತೆ ಪ್ಲ್ರಾನ್ ಹಾಡುಗಳನ್ನು ಮಾಡಿದೆ. ಸುದೀಪ್ ಅವರ ಸಹಕಾರ ಕೂಡಾ ಇತ್ತು’ ಎನ್ನುವುದು ಅರ್ಜುನ್ ಮಾತು.
ಸಂಗೀತ ನಿರ್ದೇಶನದ ಜೊತೆಗೆ ಅರ್ಜುನ್ ಜನ್ಯ ರಿಯಾಲಿಟಿ ಶೋನಲ್ಲೂ ಬಿಝಿ. ಹಾಗಂತ ಕೆಲಸಕ್ಕೆ ತೊಂದರೆಯಾಗುವ ರೀತಿ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿಲ್ಲವಂತೆ ಅರ್ಜುನ್. “ನಾನು ವಾರದಲ್ಲಿ ಒಂದು ದಿನವಷ್ಟೇ ಶೂಟಿಂಗ್‌ಗೆ ಹೋಗುತ್ತೇನೆ. ಆದರೆ, ಅದು ಆಗಾಗ ರಿಪೀಟ್ ಶೋ ಹಾಕುವುದರಿಂದ ಅನೇಕರು, ನಾನು ತುಂಬಾ ದಿನ ಶೂಟಿಂಗ್‌ನಲ್ಲಿರುತ್ತೇನೆ ಎಂದು ಭಾವಿಸಿದ್ದಾರೆ. ಅಲ್ಲೂ ಅಷ್ಟೇ ಫ್ರೀ ಇದ್ದಾಗ ಲ್ಯಾಪ್‌ಟಾಪ್‌ನಲ್ಲಿ ನನ್ನ ಕೆಲಸ ಮಾಡುತ್ತಲೇ ಇರುತ್ತೇನೆ. ಏನೇ ಮಾತು ಬಂದರೂ ನನ್ನ ಕೆಲಸದ ಮೂಲಕವೇ ಉತ್ತರಿಸಬೇಕು’ ಎಂದು ನೇರವಾಗಿ ಹೇಳುತ್ತಾರೆ. “ಅರ್ಜುನ್ ಜನ್ಯ ಹೊಸಬರ ಕೈಗೆ ಸಿಗೋದಿಲ್ಲವಂತೆ. ತುಂಬಾ ಕಾಸ್ಟಿಯಂತೆ’ ಎಂಬ ಮಾತು ಗಾಂಧಿನಗರದಲ್ಲಿ ಓಡಾಡುತ್ತಿರುತ್ತದೆ. ಇದಕ್ಕೂ ಅರ್ಜುನ್ ಉತ್ತರಿಸುತ್ತಾರೆ. “ನನ್ನ ಬಳಿ ಯಾರು ಹೊಸಬರು ಬಂದಿದ್ದಾರೆ ಹೇಳಲಿ. “ಕನ್ನಡಕ್ಕಾಗಿ ಒಂದನ್ನು ಒತ್ತಿ’ ತಂಡ ಬಂದಿತ್ತು. ಅವರಿಗೆ ಕೆಲಸ ಮಾಡಿ ಕೊಟ್ಟಿದ್ದೇನೆ. ಅದು ಬಿಟ್ಟು ದೂರದಿಂದಲೇ ಏನೇನೋ ಕಲ್ಪಿಸಿಕೊಂಡರೆ ನಾನೇನು ಮಾಡೋಕ್ಕಾಗುತ್ತೆ. ಸಂಭಾವನೆ ವಿಚಾರದಲ್ಲೂ ನಾನು ಅಷ್ಟೇ ಕೊಡಬೇಕು, ಇಷ್ಟೇ ಕೊಡಬೇಕು ಎಂದು ಪಟ್ಟು ಹಿಡಿಯುವುದಿಲ್ಲ. ಆಯಾ ಸಿನಿಮಾಗಳ ಬಜೆಟ್‌ಗೆ ತಕ್ಕಂತೆ ಕೆಲಸ ಮಾಡಿಕೊಡುತ್ತೇನೆ’ ಎನ್ನುತ್ತಾರೆ ಅರ್ಜುನ್.
ಸದ್ಯ ಅರ್ಜುನ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. “ವಿಕ್ಟರಿ-2′, “ಕೋಟಿಗೊಬ್ಬ-3′, “ಪೈಲ್ವಾನ್’, “ಮೈ ನೇಮ್ ಇಸ್ ಕಿರಾತಕ’, “ಒಡೆಯ’, “ಭರಾಟೆ’, “ರವಿಚಂದ್ರ’, “ಎಸ್‌ಆರ್‌ಕೆ’, “ಕವಚ’, “ಪ್ರೀವಿಯರ್ ಪದ್ಮಿನಿ’ … ಹೀಗೆ ಅನೇಕ ಸಿನಿಮಾಗಳಲ್ಲಿ ಅರ್ಜುನ್ ಬಿಝಿಯಾಗಿದ್ದಾರೆ.