ಹೈದರಾಬಾದ್: ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಖ್ಯಾತ ನೃತ್ಯ ಸಂಯೋಜಕ (Choreographer) ಜಾನಿ ಮಾಸ್ಟರ್ (Jani Master) ಜಾಮೀನು ಪಡೆದ ಬಳಿಕ ಮನೆಗೆ ಮರಳಿದ್ದು, ಕುಟುಂಬವರನ್ನು ನೋಡಿ ಭಾವುಕರಾಗಿದ್ದಾರೆ.
ಚಂಚಲಗೂಡ ಕೇಂದ್ರ ಕಾರಾಗೃಹದಲ್ಲಿದ್ದ ಜಾನಿ ಮಾಸ್ಟರ್ ಅವರಿಗೆ ಇತ್ತೀಚೆಗೆ ತೆಲಂಗಾಣ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಜೈಲಿನ ಪ್ರಕ್ರಿಯೆ ಮುಗಿದು ಜಾನಿ ಅವರು ಮನೆಗೆ ಮರಳಿದ್ದು ಕುಟುಂಬಸ್ಥರನ್ನು ನೋಡಿ ಭಾವುಕರಾಗಿದ್ದಾರೆ.
ಇದಲ್ಲದೆ ಈ ಪ್ರಕರಣದ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ. ʼಅನಿಮಲ್ʼ ಚಿತ್ರದ ʼಪಾಪಾ ಮೇರಿ ಜಾನ್ʼ ಹಾಡನ್ನು ಹಾಕಿ ತಮ್ಮ ಮಕ್ಕಳನ್ನು ಮುದ್ದಾಡಿ, ಭಾವುಕರಾಗಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
ಜೈಲಿನ ದಿನಗಳನ್ನು ನೆನೆದಿರುವ ಅವರು, “ಈ 37 ದಿನಗಳಲ್ಲಿ ನಮ್ಮಿಂದ ಬಹಳಷ್ಟು ದೂರವಾಗಿದೆ. ನನ್ನ ಕುಟುಂಬ ಮತ್ತು ಹಿತೈಷಿಗಳ ಪ್ರಾರ್ಥನೆ ನನ್ನನ್ನು ಇಂದು ಇಲ್ಲಿಗೆ ತಂದಿದೆ. ಸತ್ಯವು ಆಗಾಗ ಗ್ರಹಣಗೊಳ್ಳುತ್ತದೆ ಆದರೆ ಎಂದಿಗೂ ನಶಿಸುವುದಿಲ್ಲ. ಅದು ಒಂದು ದಿನ ಮೇಲುಗೈ ಸಾಧಿಸುತ್ತದೆ. ನನ್ನ ಇಡೀ ಕುಟುಂಬವು ಕಳೆದ ಜೀವನದ ಈ ಹಂತವು ನನ್ನ ಹೃದಯವನ್ನು ಶಾಶ್ವತವಾಗಿ ಚುಚ್ಚುತ್ತದೆ” ಎಂದು ಜಾನಿ ಬರೆದುಕೊಂಡಿದ್ದಾರೆ.
ಏನಿದು ಪ್ರಕರಣ?:
ದೂರು ನೀಡಿದ ಯುವತಿ ಕೂಡ ನೃತ್ಯ ಸಂಯೋಜಕಿಯಾಗಿದ್ದು, ಕಳೆದ ಕೆಲ ತಿಂಗಳಿನಿಂದ ಈಕೆ ಜಾನಿ ಮಾಸ್ಟರ್ ಜೊತೆಗೆ ಕೆಲಸ ಮಾಡುತ್ತಿದ್ದಳು. ಜಾನಿ ಮಾಸ್ಟರ್ ಹೊರಾಂಗಣ ಚಿತ್ರೀಕರಣದ ವೇಳೆ ತನ್ನ ಮೇಲೆ ಹಲ್ಲೆ ನಡೆಸಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಯುವತಿ ದೂರಿನಲ್ಲಿ ಹೇಳಿದ್ದಳು.
ಚೆನ್ನೈ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಲ್ಲಿ ಚಿತ್ರೀಕರಣದ ಸಮಯದಲ್ಲಿ ಜಾನಿ ಮಾಸ್ಟರ್ ತನ್ನ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅವರು ನಾರ್ಸಿಂಗಿಯಲ್ಲಿರುವ ತನ್ನ ನಿವಾಸದಲ್ಲಿ ಹಲವಾರು ಬಾರಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರುದಾರೆ ಹೇಳಿದ್ದಳು.
ಪೊಲೀಸರು ದೂರು ದಾಖಲಿಸಿಕೊಂಡು ಜಾನಿ ಮಾಸ್ಟರ್ ಅವರ ಬಂಧನಕ್ಕೆ ಬಲೆ ಬೀಸಿದ್ದರು. ಜಾನಿ ಮಾಸ್ಟರ್ ಅವರ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ತಲೆ ಮರೆಸಿಕೊಂಡಿದ್ದ ಅವರನ್ನು ವಿಶೇಷ ಕಾರ್ಯಾಚರಣೆ ತಂಡದ ಪೊಲೀಸರು ಸೆ.19ರಂದು ಗೋವಾದಲ್ಲಿ ಬಂಧಿಸಿದ್ದರು.
ಈ ಮೊದಲುಅತ್ಯಾಚಾರ ಆರೋಪಿ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಅವರಿಗೆ ಹೈದರಾಬಾದ್‌ನ ರಂಗಾ ರೆಡ್ಡಿ ಜಿಲ್ಲಾ ನ್ಯಾಯಾಲಯ ಅಕ್ಟೋಬರ್ 3 ಷರತ್ತುಬದ್ಧ ಮಧ್ಯಂತರ ಜಾಮೀನು (interim bail) ಮಂಜೂರು ಮಾಡಿತ್ತು.