ಹುಬ್ಬಳ್ಳಿ: ಜನಧನ ಖಾತೆ ಸಣ್ಣ ವ್ಯಾಪಾರಿಗಳಿಗೆ ವರದಾನವಾಗಿದ್ದು, ಬಡ್ಡಿ ಕುಳಗಳ ಚಕ್ರವ್ಯೂಹದಲ್ಲಿ ಸಿಲುಕಿ ಪಡುತ್ತಿದ್ದ ಸಮಸ್ಯೆಯಿಂದ ನಿಶ್ಚಿಂತವಾಗಲು ಸಹಕಾರಿಯಾಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. ಇಲ್ಲಿನ ಗಬ್ಬೂರನ ಶರಣ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಸ್ಪಂದನ ಪ್ರಧಾನಮಂತ್ರಿ ಜನ್‌ಧನ್ ಯೋಜನೆಯ ಪಾಸ್‌ಬುಕ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜನ್‌ಧನ್ ಖಾತೆ ಹೊಂದಿದ ಸಣ್ಣ ವ್ಯಾಪಾರಿಗಳು ಆರು ತಿಂಗಳ ಕಾಲ ವ್ಯವಹಾರ ಮಾಡಿದರೆ ಬ್ಯಾಂಕ್‌ನವರು ರೂಪೇ ಕಾರ್ಡ್ ನೀಡುತ್ತಾರೆ. ಅದರ ಮೂಲಕ ಬಡ್ಡಿ ರಹಿತವಾಗಿ 5 ಸಾವಿರ ರೂ. ಸಾಲ ಪಡೆದು 45 ದಿನದೊಳಗೆ ಅದನ್ನು ಪಾವತಿಸಬಹುದು. ತಪ್ಪಿದರೆ ವರ್ಷಕ್ಕೆ ಶೇ.8 ಇಲ್ಲವೆ 9ರಷ್ಟು ಬಡ್ಡಿದರ ಕಟ್ಟಬೇಕಾಗುತ್ತದೆ.
ಈ ಸಾಲವನ್ನೆ ಬಂಡವಾಳವನ್ನಾಗಿಸಿ ಉದ್ಯೋಗ ಮಾಡಿಕೊಳ್ಳಬೇಕು. ಅದನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಯಾವುದೇ ಭದ್ರತೆಯಿಲ್ಲದೆ ಮುದ್ರಾ ಯೋಜನೆಯಡಿ ಅತೀ ಕಡಿಮೆ ಬಡ್ಡಿ ದರದಲ್ಲಿ 50 ಸಾವಿರ ರೂ. ಸಾಲ ಪಡೆಯಬಹುದು. ಸಣ್ಣ ವ್ಯಾಪಾರಿಗಳ ಸುಧಾರಣೆಗಾಗಿಯೇ ಪ್ರಧಾನಿಯವರು ಜನ್‌ಧನ್ ಖಾತೆ ಯೋಜನೆ ಜಾರಿಗೆ ತಂದಿದ್ದಾರೆ.
ಆ ಮೂಲಕ ಮಧ್ಯವರ್ತಿಗಳು ಹಾಗೂ ಬಡ್ಡಿ ವ್ಯಾಪಾರಿಗಳ ಕಪಿಮುಷ್ಟಿಯಿಂದ ಪಾರಾಗಬಹುದು ಎಂದರು. ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆ ಖಂಡಿಸಿ ಸೆ.7ರಂದು ಮಂಗಳೂರಿನಲ್ಲಿ ನಡೆಯುವ ಪ್ರತಿಭಟನೆ ಹಿನ್ನೆಲೆಯಲ್ಲಿ ಸೆ.5ರಂದು ನೆಹರೂ ಮೈದಾನದಿಂದ ಮಂಗಳೂರು ವರೆಗೆ ಬೈಕ್‌ರ್ಯಾಲಿ ಆಯೋಜಿಸಲಾಗಿದೆ ಎಂದರು.
ಮಹಾಪೌರ ಡಿ.ಕೆ. ಚವ್ಹಾಣ ಮತ್ತು ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ಶರಣ ನಗರದಲ್ಲಿ ಸಂಸದ ಪ್ರಹ್ಲಾದ ಜೋಶಿ, ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ ಅವರ ಸಹಕಾರದಿಂದಾಗಿ ಅಂದಾಜು 1.70 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಬಿಜೆಪಿ ಆಡಳಿತಾವಧಿಯಲ್ಲಿ ಕೈಗೊಂಡ ಯೋಜನೆಗಳ ಕಾಮಗಾರಿಗಳೇ ಈಗ ನಡೆಯುತ್ತಿವೆ.
ಶರಣ ನಗರದಲ್ಲಿ ನಾಲ್ಕು ಕಡೆ ರಸ್ತೆಗಳ ನಿರ್ಮಾಣಕ್ಕೆ ಶೀಘ್ರವೇ ಭೂಮಿಪೂಜೆ ಮಾಡಲಾಗುವುದು. ಉಜ್ವಲ್ ಯೋಜನೆಯಡಿ ಉಚಿತ ಗ್ಯಾಸ್ ವಿತರಣೆಯನ್ನು ತಿಂಗಳಾತ್ಯದೊಳಗೆ ಕೈಗೊಳ್ಳಲಾಗುವುದು ಎಂದರು. ಪಾಲಿಕೆ ಸದಸ್ಯರಾದ ಶಿವಾನಂದ ಮುತ್ತಣ್ಣವರ, ಶಿವು ಮೆಣಸಿನಕಾಯಿ, ಧುರೀಣರಾದ ರಂಗಾ ಬದ್ದಿ, ಚಂದ್ರಶೇಖರ ಗೋಕಾಕ, ರಾಮಣ್ಣ ಕರಗಣ್ಣವರ, ರಂಗಾ ಕಠಾರೆ, ನಾಗಪ್ಪ ರಾಣೋಜಿ ಇದ್ದರು. ಹರೀಶ ಜಂಗಲಿ ನಿರೂಪಿಸಿದರು.