Advertisement

ಕೆಲವೇ ಔಷಧಿಗಳಿಗಷ್ಟೇ ಜನೌಷಧ ಕೇಂದ್ರ

03:15 PM Sep 17, 2022 | Team Udayavani |

ಎಚ್‌.ಡಿ.ಕೋಟೆ: ಬೇಕಾದಾಗ ಬಾಗಿಲು ತೆರೆಯುವುದು, ಬೇಡವಾದಾಗ ಬಾಗಿಲು ಮುಚ್ಚುವುದು. ಸುಮಾರು 1400ಕ್ಕೂ ಅಧಿಕ ಔಷಧಗಳು ಮಾರಾಟವಾಗಬೇಕಾದ ಅಂಗಡಿಯಲ್ಲಿ ಬೆರಳೆಣಿಕೆಯಷ್ಟೇ ಔಷಧಗಳು ಮಾರಾಟವಾಗುವ ಮೂಲಕ ಹಿಂದುಳಿದ ಎಚ್‌.ಡಿ.ಕೋಟೆ ತಾಲೂಕಿನ ಬಡ ಮಂದಿಯ ಪಾಲಿಗೆ ಜನೌಷಧ ಕೇಂದ್ರ ಇದ್ದೂ ಇಲ್ಲದಂತಾಗಿದೆ.

Advertisement

ಹೌದು ಎಚ್‌.ಡಿ.ಕೋಟೆ ತಾಲೂಕು ಪ್ರೊ.ನಂಜುಂಡಪ್ಪನವರ ವರದಿಯಂತೆ ತೀರ ಹಿಂದುಳಿದ ತಾಲೂಕು ಅನಿಸಿಕೊಂಡಿದೆ. ಜನೌಷಧ ಕೇಂದ್ರಗಳ ಆರಂಭ: ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಸೇವೆ ಕೈಗೆಟುಕದ ಹಂತ ತಲುಪಿ ಶ್ರೀ ಮಂತರಿಗೆ ಮಾತ್ರ ಉತ್ತಮ ಆರೋಗ್ಯ ಸೇವೆ ಜೊತೆಗೆ ಔಷಧೋಪಚಾರ ಲಭ್ಯವಾಗುತ್ತಿದೆ. ಇದನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿಯವರು ಜನೌಷಧ ಕೇಂದ್ರ ತೆರೆಯುವ ಮೂಲಕ ಬಡಮಂದಿಗೆ ಉತ್ತಮ ಆರೋಗ್ಯ ಸಿಗಬೇಕು, ಆರೋಗ್ಯಕ್ಕೆ ಪೂರಕವಾಗಿ ಬೇಕಾದ ಔಷಧಗಳು ಕಡಿಮೆ ದರದಲ್ಲಿ ಲಭ್ಯವಾಗಬೇಕೆಂಬ ಮಹದಾಸೆಯಿಂದ ಜಿಲ್ಲೆ ಮತ್ತು ತಾಲೂಕು ಮಟ್ಟಗಳಲ್ಲಿ ಜನೌಷಧ ಕೇಂದ್ರಗಳನ್ನು ಆರಂಭಿಸಿದ್ದಾರೆ.

ಕಡಿಮೆ ಬೆಲೆಗೆ ಔಷಧಗಳು ಲಭ್ಯ:

ಮಾರುಕಟ್ಟೆ ಬೆಳೆಗಳಿದಿಂತ ಶೇ.80ರಿಂದ 90ರಷ್ಟು ರಿಯಾಯಿರಿ ದರದಲ್ಲಿ ಬಡಜನತೆಗೆ ಔಷಧಗಳು ಲಭ್ಯವಾಗ ಬೇಕೆಂಬ ಮಹದಾಸೆಯಿಂದ ಜನೌಷಧ ಕೇಂದ್ರಗಳನ್ನು ಆರಂಭಿಸಿ ಅಲ್ಲಿ ಸುಮಾರು 1400ಕ್ಕೂ ಅಧಿಕ ಔಷಧಗಳು ಮಾರಾಟವಾಗಬೇಕೆಂಬ ನಿಯಮ ಇದೆ. ಆದರೆ ಎಚ್‌.ಡಿ.ಕೋಟೆ ತಾಲೂಕು ಕೇಂದ್ರ ಸ್ಥಾನದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆರಂಭಗೊಂಡಿರುವ‌ ಜನೌಷಧ ಕೇಂದ್ರದಲ್ಲಿ ಕೇವಲ 250ರಿಂದ 300 ಬಗೆಯ ಔಷಧಗಳು ಮಾತ್ರ ಮಾರಾಟವಾಗುತ್ತಿ ರುವುದರಿಂದ ಜನ ದುಬಾರಿ ಬೆಲೆ ನೀಡಿ ಖಾಸಗಿ ಔಷಧಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ.

ವೈದ್ಯರಲ್ಲೂ ತಾರತಮ್ಯತೆ: ಜನೌಷಧ ಕೇಂದ್ರಗಳಲ್ಲಿ ಔಷಧಗಳನ್ನು ಖರೀದಿಸಿದರೆ ವೈದ್ಯರಿಗೆ ಖಾಸಗಿ ಮೆಡಿಕಲ್‌ಗ‌ಳಂತೆ ಪರ್ಸೆಂಟೇಜ್‌ ಸಿಗೋಲ್ಲ ಅನ್ನುವ ಕಾರಣದಿಂದ ವೈದ್ಯರು ಜನೌಷಧ ಕೇಂದ್ರಗಳಲ್ಲಿ ದೊರೆಯುವ ಔಷಧಗಳನ್ನು ಖರೀದಿಸಲು ರೋಗಿಗಳಿಗೆ ತಿಳಿಸದೇ ಖಾಸಗಿ ಔಷಧ ಅಂಗಡಿಗಳಿಗೆ ಶಿಫಾರಸ್ಸು ಮಾಡಿ ತಾರತಮ್ಯತೆ ಮಾಡುತ್ತಿದ್ದಾರೆ ಅನ್ನುವ ಆರೋಪ ಕೂಡ ರೋಗಿಗಳಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ. ವೈದ್ಯರ ಕಮಿಷನ್‌ ಆಸೆಗಾಗಿ ಕೇಂದ್ರ ಸರ್ಕಾರದ ಬಡವರ ಆರೋಗ್ಯ ಪರವಾದ ಯೋಜನೆಗೆ ವೈದ್ಯರು ಮಲತಾಯಿ ಧೋರಣೆ ಅನುಸರಿಸುವುದು ತರವಲ್ಲ. ಕೂಡಲೆ ಸಂಬಂಧ ಪಟ್ಟ ಇಲಾಖೆ ಅಧಕಾರಿಗಳು ವೈದ್ಯರೊಡನೆ ಸಮಾಲೋಚನೆ ನಡೆಸಿ ಜನೌಷಧ ಕೇಂದ್ರದಲ್ಲಿ ಇಲ್ಲವೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ಎಲ್ಲಾ ಬಗೆಯ ಔಷಧಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು.

Advertisement

ಔಷಧ ಕೇಂದ್ರಕ್ಕೆ ಸಂಬಂಧ ಪಟ್ಟವರೂ ಕೂಡ ಸರ್ಕಾರದ ಆದೇಶದಂತೆ ಎಷ್ಟು ಬಗೆಯ ಔಷಧಗಳನ್ನು ಮಾರಾಟ ಮಾಡಬೇಕು ಅಷ್ಟನ್ನೂ ಮಾರಟ ಮಾಡಲು ಮುಂದಾಗಬೇಕು. ಜನೌಷಧ ಕೇಂದ್ರದಲ್ಲಿ ಸಾರ್ವತ್ರಿಕವಾಗಿ ಮಾರಾಟವಾಗುವ ಔಷಧಗಳು ಮತ್ತು ಅವುಗಳ ದರಪಟ್ಟಿಯನ್ನು ಸಾರ್ವಜನಿಕರಿಗಾಗಿ ಪ್ರಕಟಿಸಬೇಕು ಎಂದು ತಾಲೂಕಿನ ಪ್ರಜ್ಞಾವಂತ ನಾಗರೀಕರು ಒತ್ತಾಯಿಸಿದ್ದಾರೆ.

ಜನೌಷಧ ಕೇಂದ್ರದಲ್ಲಿ ವೈದ್ಯರು ಶಿಫಾರಸ್ಸು ಮಾಡುವ ಔಷಧಗಳು ಲಭ್ಯವಾಗುತ್ತಿಲ್ಲ. ಸಂಬಂಧಪಟ್ಟವರಿಗೆ ಈಗಾಗಲೇ ನಾನು ಸರ್ಕಾರದ ಆದೇಶ ಇರುವ ಎಲ್ಲಾ ಔಷಧಗಳನ್ನು ಮಾರಾಟ ಮಾಡುವಂತೆ ಮನವಿ ಸಲ್ಲಿಸಿ ತಿಂಗಳುಗಳೇ ಉರುಳಿದರೂ ಉಪಯೋಗವಾಗಿಲ್ಲ. ಮತ್ತೂಮ್ಮೆ ಅವರಲ್ಲಿ ಮನವಿ ಮಾಡುವುದರ ಜೊತೆಗೆ ಆಸ್ಪತ್ರೆ ವೈದ್ಯರು ಔಷಧಗಳನ್ನು ಜನೌಷಧ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಸೂಚನೆ ನೀಡುತ್ತೇನೆ. –ಡಾ.ಸೋಮಣ್ಣ ಆಡಳಿತಾಧಿಕಾರಿ ಸಾರ್ವಜನಿಕ ಆಸ್ಪತ್ರೆ ,ಜನೌಷಧ ಕೇಂದ್ರ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಕಡಿಮೆ ಬೆಲೆ ಔಷಧಗಳ ಮಾರಾಟ ಮಾಡಬೇಕು ಮತ್ತು ಇಂತಿಷ್ಟು ಮಾದರಿಯ ಔಷಧಗಳ ಮಾರಾಟವಾಗಬೇಕೆಂಬ ನಿಯಮ ಕೋಟೆ ತಾಲೂಕಿನಲ್ಲಿ ಪಾಲನೆಯಲ್ಲಿಲ್ಲ. ಕೆಲವೇ ಔಷಧಗಳು ಮಾರಾಟ ಮಾಡುವ ಮೂಲಕ ಬಡಜನರಿಗೆ ವಂಚನೆಯಾಗುತ್ತಿದೆ. ಕೂಡಲೆ ಸಮರ್ಪಕ ಸೇವೆ ನೀಡದೇ ಇದ್ದರೆ ಮುಂದೆ ದಲಿತ ಸಂಘರ್ಷ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಚಾ.ಶಿವಕುಮಾರ್‌, ಜಿಲ್ಲಾ ಸಂಘಟನಾ ಸಂಚಾಲಕ, ದಸಂಸ

 

ಎಚ್‌.ಬಿ.ಬಸವರಾಜು.

Advertisement

Udayavani is now on Telegram. Click here to join our channel and stay updated with the latest news.

Next