ಯಾದಗಿರಿ: ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಮೇಲೆ ದೇಶದಲ್ಲಿ 57 ಮೆಡಿಕಲ್ ಕಾಲೇಜುಗಳು ಪ್ರಾರಂಭವಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು.
ಇಲ್ಲಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕೇಂದ್ರ ಸರಕಾರದ ಬಜೆಟ್ ವಿಶ್ಲೇಷಣೆ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದ ದೇಶದ ಜನ ಈಗ ನೆಮ್ಮದಿ ಕಾಣುತ್ತಿದ್ದಾರೆ. ನರೇಂದ್ರ ಮೋದಿ ಆಡಳಿತ ಬಂದ ಮೇಲೆ ಬಡವರಿಗೆ, ಹಿಂದುಳಿದವರಿಗೆ, ರೈತರಿಗೆ ಸಾಕಷ್ಟು ಅನುಕೂಲ ಆಗುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.
ನದಿ ಜೋಡಣೆಗಳ ಕಾರ್ಯ, ರಸ್ತೆ ವಿಸ್ತರಣೆ, ನಲ್ಲಿಯಿಂದ ಪ್ರತಿಯೊಬ್ಬರಿಗೆ ನೀರು ಸೇರಿ ಹಲವು ಯೋಜನೆಗಳು ಈ ಬಜೆಟ್‌ನಲ್ಲಿ ಸರಕಾರ ಮಾಡಿದೆ. ಶಿಕ್ಷಣದ ಬೆಳವಣಿಗೆ, ರಸ್ತೆಗಳ ನಿರ್ಮಾಣ, ರೈತರ ಬಗ್ಗೆ ಕಾಳಜಿ ಸೇರಿ ಭವಿಷ್ಯದ ದೂರದೃಷ್ಟಿಯ ಬಜೆಟ್ ಮಂಡನೆಯಾಗಿದೆ ಎಂದರು.
ಭಾರತ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದೆ. ದೇಶ ಅಭಿವೃದ್ಧಿಯಲ್ಲಿ ಶಿಕ್ಷಣ ಬಹಳ ಮುಖ್ಯಪಾತ್ರ ವಹಿಸುತ್ತಿದ್ದು, ಹೀಗಾಗಿ ಸರಕಾರಿ ಶಾಲೆಗಳಲ್ಲಿ ಕ್ವಾಲಿಟಿ ತರುವ ನಿಟ್ಟಿನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೆ ತಂದಿದೆ. ಬಡವರಿಗಾಗಿ ಕೇಂದ್ರ ಸರಕಾರ 80 ಲಕ್ಷ ಮಹಿಳೆ ಹೆಸರಲ್ಲಿ ಮನೆಯನ್ನು ಕೊಡುತ್ತಿದೆ. 5 ಕೋಟಿ ಮಹಿಳೆಯರಿಗೆ ಕೇಂದ್ರ ಸರಕಾರ ಮನೆಗಳನ್ನು ಕೊಡುತ್ತಿದ್ದು, ಮಹಿಳೆಯರ ಬಗ್ಗೆ ವಿಶೇಷ ಯೋಜನೆಗಳನ್ನು ಕಾಳಜಿವಹಿಸಿ ಹಲವಾರು ಮಹಿಳೆಯರಿಗೆ ಮೀಸಲಿಟ್ಟಿದೆ. 12 ಕೋಟಿ ಶೌಚಾಲಯ ನಿರ್ಮಾಣ, 9 ಕೋಟಿ ಸಿಲಿಂಡರ್, 11 ಕೋಟಿ ರೈತರ ಖಾತೆಗೆ 22 ಕೋಟಿ ಹಣ ಜಮಾ ಮಾಡಿದೆ ಎಂದರು.
ಜಿಲ್ಲಾಧ್ಯಕ್ಷ ಡಾ| ಶರಣಭೂಪಾಲರಡ್ಡಿ, ಮಾಜಿ ಸಚಿವ ಡಾ| ಎ.ಬಿ. ಮಾಲಕರಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದೇವೀಂದ್ರನಾಥ ನಾದ ಮತ್ತು ವೆಂಕಟರಡ್ಡಿ ಅಬ್ಬೆತುಮಕೂರ, ನಗರಸಭಾ ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್, ನಗರ ಮಂಡಲ ಅಧ್ಯಕ್ಷ ಮತ್ತು ನಗರಸಭೆ ಸದಸ್ಯ ಸುರೇಶ ಅಂಬಿಗೇರ ಸೇರಿದಂತೆ ಇತರರಿದ್ದರು.