Advertisement

Janata-darshan; ಕಡಬದಲ್ಲಿ ತಾ. ಮಟ್ಟದ ಕಚೇರಿಗಳ ಆರಂಭಕ್ಕೆ ಆಗ್ರಹ

11:38 PM Jan 23, 2024 | Team Udayavani |

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಬ ತಾಲೂಕಿಗೆ ಸಂಬಂಧಿಸಿದಂತೆ ಬಾಕಿ ಇರುವ 16 ಕಚೇರಿಗಳನ್ನು ಕೂಡಲೇ ಆರಂಭಿಸುವಂತೆ ಸುಳ್ಯದಲ್ಲಿ ನಡೆದ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ನೇತೃತ್ವದ ಜನತಾ ದರ್ಶನದಲ್ಲಿ ಮನವಿ ಸಲ್ಲಿಸಲಾಯಿತು.

Advertisement

ಸುಳ್ಯದ ಪುರಭವನದಲ್ಲಿ ಜನತಾದರ್ಶನ ಕಾರ್ಯಕ್ರಮ ನಡೆಯಿತು.ಕಡಬ ಮಾಜಿ ಜಿಲ್ಲಾ ಪರಿಷತ್‌ ಸದಸ್ಯ ಸಯ್ಯದ್‌ ಮೀರಾ ಸಾಹೇಬ್‌ ಈ ಬಗ್ಗೆ ಮನವಿ ಸಲ್ಲಿಸಿದರು. ತಾಲೂಕು ಮಟ್ಟದ ಕಚೇರಿಗಳ ಆರಂಭಕ್ಕೆ ಬಜೆಟ್‌ ಸಿದ್ಧಪಡಿಸಿ ಇಲಾಖೆಗೆ ಕಳುಹಿಸಿ ಶೀಘ್ರ ಕಚೇರಿ ಆರಂಭಿಸಲು ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದರು.

ಕೃಷಿಕರಿಗೆ ಪರಿಹಾರ ನೀಡಿ
ಸುಳ್ಯದ ಚೆನ್ನಕೇಶವ ದೇವಸ್ಥಾನಕ್ಕೆ ವ್ಯವಸ್ಥಾಪನ ಸಮಿತಿ ರಚಿಸುವಂತೆ ಗೋಕುಲದಾಸ್‌ ಮನವಿ ಸಲ್ಲಿಸಿದರು. ಅಡಿಕೆ ಹಳದಿ ಎಲೆ, ಎಲೆಚುಕ್ಕಿ ರೋಗದಿಂದ ಕೃಷಿಕರು ನಷ್ಟ ಅನುಭವಿಸುತ್ತಿದ್ದಾರೆ. ರೈತರ ಆತ್ಮಹತ್ಯೆಯೂ ನಡೆದಿದೆ. ಆತ್ಮಹತ್ಯೆಗೈದ ಕೃಷಿಕರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಮನವಿ ಸಲ್ಲಿಸಲಾಯಿತು.

ಅರಣ್ಯ ಸಮಸ್ಯೆ, ಆನೆ ಹಾವಳಿ, ಕಡಬ-ಪಾಲೋಳಿ ಸಂಪರ್ಕ ರಸ್ತೆ ಅಭಿವೃದ್ಧಿ, ಬೆಳ್ಳಾರೆ ಗ್ರಾಮದಲ್ಲಿ ಕಾಲುಸಂಕ ನಿಮಾಣ, ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಂಕ್ರೀಟ್‌ ರಸ್ತೆ ಬೇಡಿಕೆ, ತೊಡಿಕಾನದಲ್ಲಿ ಆರೋಗ್ಯ ಉಪಕೇಂದ್ರಕ್ಕೆ ಜಾಗ, ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವುದು ಮೊದಲಾದ ಮನವಿ ಸಲ್ಲಿಸಲಾಯಿತು.

407 ಅಹವಾಲು ಸಲ್ಲಿಕೆ
ಪೂರ್ವಾಹ್ನ 11.30ಕ್ಕೆ ಆರಂಭಗೊಂಡ ಅಹವಾಲು ಸ್ವೀಕಾರ ಮಧ್ಯಾಹ್ನ ಊಟದ ವಿರಾಮ ಹೊರತು ಪಡಿಸಿ 4.45ರ ವರೆಗೆ ನಿರಂತರ ನಡೆಯಿತು. ಸರದಿಯಂತೆ ಸಚಿವರ ಮುಖತಃ ಭೇಟಿಗೆ ಅವಕಾಶ ನೀಡಲಾಗಿತ್ತು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 407 ಅಹವಾಲುಗಳು ಸಲ್ಲಿಕೆಯಾಗಿದೆ. ಜಿಲ್ಲಾಧಿಕಾರಿ ಮುಲ್ಲೆ„ ಮುಗಿಲನ್‌, ಜಿ.ಪಂ. ಸಿಇಒ ಡಾ| ಆನಂದ್‌ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಪುತ್ತೂರು ಎಸಿ ಜುಬಿನ್‌ ಮಹಪಾತ್ರ ಸ್ವಾಗತಿಸಿ, ನ.ಪಂ. ಮುಖ್ಯಾಧಿಕಾರಿ ಸುಧಾಕರ್‌ ವಂದಿಸಿದರು.

Advertisement

ದಯಾಮರಣಕ್ಕೆ ಮಾಜಿ ಸೈನಿಕನ ಅರ್ಜಿ!
ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಮಾಜಿ ಸೈನಿಕ ಚಂದಪ್ಪ ಡಿ.ಎಸ್‌. ಜನತಾ ದರ್ಶನದಲ್ಲಿ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಘಟನೆ ನಡೆದಿದೆ. ಚಂದಪ್ಪ ಅವರು ನಿವೃತ್ತ ಸೈನಿಕರಿಗೆ ನೀಡಲಾಗುವ ಜಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಅದರಂತೆ ಕಣಿಯೂರು ಗ್ರಾಮದಲ್ಲಿ ಜಾಗ ನೀಡಲು ಕ್ರಮ ಕೈಗೊಳ್ಳುವಂತೆ ಸರಕಾರ ಸೂಚಿಸಿದ್ದರೂ ಕೆಲವು ಖಾಸಗಿ ವ್ಯಕ್ತಿಗಳು ಹಾಗೂ ಸರಕಾರಿ ಅಧಿಕಾರಿಗಳು ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿದರು. ಸ್ಪಂದನೇ ನೀಡದೇ ಇದ್ದಲ್ಲಿ ದಯಾಮರಣಕ್ಕೆ ಮನುಮತಿನೀಡುವಂತೆಯೂ ತಿಳಿಸಿದರು. 1 ತಿಂಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಸಚಿವರು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next