Advertisement

janata darshan: ಉಸ್ತುವಾರಿ ಸಚಿವರ ಜನತಾ ದರ್ಶನದಲ್ಲಿ ಸಮಸ್ಯೆಗಳ ಸ್ಫೋಟ!

04:19 PM Sep 26, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಜನತಾ ದರ್ಶನದಲ್ಲಿ ರಾಜ್ಯದ ಇತರೇ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಹೆಚ್ಚು ಅರ್ಜಿಗಳ ಸಲ್ಲಿಕೆ ಆಗಿದ್ದು, ಸಲ್ಲಿಕೆಯಾದ ಅಹವಾಲುಗಳ ಪೈಕಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ದೂರು, ದುಮ್ಮಾನಗಳೇ ಜಾಸ್ತಿ ಒಂದಡೆಯಾದರೆ, ರಸಗೊಬ್ಬರ ಸಿಗುತ್ತಿಲ್ಲ, ರಸ್ತೆ ಸರಿಯಿಲ್ಲ, ಪಡಿತರ ಚೀಟಿ, ವಸತಿ, ನಿವೇಶನ ಕಲ್ಪಿಸಿ ಕೊಡಿಯೆಂದು ಅರ್ಜಿ ಹಿಡಿದರೇ ಹೆಚ್ಚು. ಹೌದು, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಜಿಲ್ಲಾ ಕೇಂದ್ರದ ಪೊಲೀಸ್‌ ಸಮುದಾಯ ಭವನದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಸಿ.ಸುಧಾಕರ್‌ ಅವರ ನೇತೃತ್ವದಲ್ಲಿ ಆರಂಭಗೊಂಡ ಚೊಚ್ಚಲ ಮೊದಲ ಜನತಾ ದರ್ಶನ ಜಿಲ್ಲೆಯ ಜನರ ದೂರು, ದುಮ್ಮಾನ ಹೇಳಿಕೊಳ್ಳಲು ವೇದಿಕೆ ಆಯಿತು.

Advertisement

ವಿವಿಧ ಇಲಾಖೆಗಳಿಗೆ ಮನವಿ: ಬೆಳಗ್ಗೆ 11:30ರಿಂದ ಸಂಜೆ 5:30ರ ಯವರೆಗೂ ಅರ್ಜಿ ಸ್ಪೀಕಾರ ನಡೆದು ಬರೋಬ್ಬರಿ 237 ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆಯಾದವು. ಜನತಾ ದರ್ಶನದಲ್ಲಿ ಜನರ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದರೂ ಸಾರ್ವಜನಿಕರು ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಗ್ರಾಪಂ ಹಾಗೂ ತಾಪಂ ಮಟ್ಟದಲ್ಲಿ ಪರಿಹರಿಸಬಹುದಾಗಿದ್ದ ಸಮಸ್ಯೆಗಳನ್ನು ಹೊತ್ತು ಜಿಲ್ಲಾ ಉಸ್ತುವಾರಿ ಸಚಿವರ ಜನತಾ ದರ್ಶನಕ್ಕೆ ಆಗಮಿಸಿ ತಮ್ಮ ಅಹವಾಲು ಸಲ್ಲಿಸಿದರು. ಇದರಿಂದ ಜನತಾ ದರ್ಶನ ಒಂದು ರೀತಿ ಜಿಲ್ಲೆಯ ಜನರ ಸಮಸ್ಯೆಗಳ ಸ್ಫೋಟವಾಗಿ ಜಿಲ್ಲಾಡಳಿತದ ಕಾರ್ಯವೈಖರಿಯನ್ನು ಅಣಕಿಸುವಂತಿತ್ತು. ಬಹಳಷ್ಟು ಮಂದಿ ನಾಗರಿಕರು ವಸತಿ, ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದರೆ ಇನ್ನೂ ಕೆಲವರು ಖಾತೆ ಆಗುತ್ತಿಲ್ಲ. ಪೌತಿ ಖಾತೆ ಮಾಡುತ್ತಿಲ್ಲ ಎಂದು ವಯೋವೃದ್ಧರು , ರೈತರು ಕಂದಾಯ ಅಧಿಕಾರಿಗಳ ವಿರುದ್ಧ ಆರೋಪಗಳ ಸುರಿಮಳೆಗೈದರು. ರಸ್ತೆಗಳು ಸರಿಯಲ್ಲ, ಒಳಚರಂಡಿ ಸಮಸ್ಯೆ ಇದೆ ಅಂತ ಅರ್ಜಿ ಸಲ್ಲಿಸಿದರು. ಕೆಲವರು ಸ್ವಂಯ ಉದ್ಯೋಗ ಕಲ್ಪಿಸಿ, ಸಾಲ, ಸೌಲಭ್ಯ ಕೊಡಿಸಿ ಅಂತ ಮಹಿಳೆಯರು, ವಿಕಲಚೇತನರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮೊರೆ ಇಟ್ಟರು.

ಗ್ಯಾರಂಟಿಗಳು ಸಿಗುತ್ತಿಲ್ಲ ಎಂದು ಅರ್ಜಿ ಹಿಡಿದು ಬಂದ್ರು: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನದ ವೇಳೆ ಸರ್ಕಾರ ಘೋಷಿಸಿ ಅನುಷ್ಟಾನಗೊಳಿಸುತ್ತಿರುವ ಹಲವು ಗ್ಯಾರಂಟಿಗಳು ಸಿಗದ ಬಗ್ಗೆ ಸಾರ್ವಜನಿಕರು ಅರ್ಜಿ ಹಿಡಿದು ತಂದಿದ್ದರು. ವಿಶೇಷವಾಗಿ ಗೃಹ ಜ್ಯೋತಿ, ಗೃಹಲಕ್ಷ್ಮಿಯೋಜನೆಯಡಿ ನಮಗೆ ಹಣ ಬರುತ್ತಿಲ್ಲ ಎಂದು ಕೆಲ ಮಹಿಳೆಯರು ಅರ್ಜಿ ಹಿಡಿದು ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಅಧಿಕಾರಿಗಳಿಗೆ ಸಲ್ಲಿಸಿದರು.

ಅಧಿಕಾರಿಗಳು, “ಕೈ’ ಮುಖಂಡರು, ಕಾರ್ಯಕರ್ತರ ಕಾರುಬಾರು!: ವಿಪರ್ಯಾಸ ಅಂದರೆ ಜನತಾ ದರ್ಶನದಲ್ಲಿ ಇಲಾಖೆಗಳ ಅಧಿಕಾರಿಗಳು, ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರೇ ಹೆಚ್ಚು ತುಂಬಿ ತುಳಕಿದ್ದು ಎದ್ದು ಕಾಣುತ್ತಿತ್ತು. ಸಾರ್ವಜನಿಕರಗಿಂತ ಹೆಚ್ಚಾಗಿ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಅವರ ಕಚೇರಿ ಸಹಾಯಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಜತೆಗೆ ಕ್ಷೇತ್ರದ ಕಾಂಗ್ರೆಸ್‌, ಮುಖಂಡರು, ಕಾರ್ಯಕರ್ತರ ದಂಡೇ ಹೆಚ್ಚಾಗಿ ಕಂಡು ಬಂತು.

-ಕಾಗತಿ ನಾಗರಾಜಪ್ಪ

Advertisement
Advertisement

Udayavani is now on Telegram. Click here to join our channel and stay updated with the latest news.

Next