ಕೊಪ್ಪಳ: ಕೋವಿಡ್-19 ವೈರಸ್ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜನತಾ ಕರ್ಪ್ಯೂ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಜನತೆ ಬೆಳಗ್ಗೆಯಿಂದ ಸಂಜೆಯವರೆಗೂ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರತಿ ಭಾನುವಾರ ಸರ್ಕಾರಿ ನೌಕರರಿಗೆ ರಜೆ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟು ಜನದಟ್ಟಣೆಯಿಂದ ಕೂಡಿರುತ್ತಿದ್ದವು. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿಯೇ ನಡೆಯುತ್ತಿತ್ತು. ಆದರೆ ಜನತಾ ಕರ್ಪ್ಯೂ ಘೋಷಣೆ ಮಾಡಿದ್ದರಿಂದ ಇಡೀ ಜಿಲ್ಲೆಯಾದ್ಯಂತ ಜನರು ಮನೆಯಲ್ಲೇ ಉಳಿದು ವಿಶ್ರಾಂತಿ ಪಡೆಯುವ ಮೂಲಕ ಸಂಪೂರ್ಣವಾಗಿ ಬೆಂಬಲಿಸಿದರು.
ಬೆಳಗ್ಗೆಯಿಂದಲೂ ಸರ್ಕಾರಿ ಸಾರಿಗೆ ಸೇರಿದಂತೆ ಯಾವುದೇ ಖಾಸಗಿ ವಾಹನಗಳೂ ರಸ್ತೆಗಳಿಗೆ ಇಳಿಯಲಿಲ್ಲ. ಹೋಟಲ್, ಅಂಗಡಿಗಳು ಸೇರಿದಂತೆ ಜನತೆ ಸ್ವಯಂ ಜನತಾ ಕರ್ಪ್ಯೂಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ ಬೆರಳೆಣಿಕೆಯ ಜನರು ಕಂಡುಬಂದರೆ, ಮಧ್ಯಾಹ್ನವಂತೂ ರಸ್ತೆಯುದ್ಧಕ್ಕೂ ಒಬ್ಬರೇ ಒಬ್ಬ ವ್ಯಕ್ತಿಯೂ ಕಾಣಸಿಗಲಿಲ್ಲ.
ಇನ್ನೂ ಜಿಲ್ಲೆಯಲ್ಲಿ ಯಾವುದೇ ಸೋಂಕು ಕಾಣಿಸಿಕೊಂಡಿಲ್ಲವಾದರೂ ಜಿಲ್ಲಾಡಳಿತ ಮುಂಚಿತವಾಗಿಯೇ ಹಲವು ಕಟ್ಟುನಿಟ್ಟಿನ ಕ್ರಮಕೈಗೊಂಡು ಪ್ರತಿಯೊಬ್ಬ ವಿದೇಶಿ ವ್ಯಕ್ತಿಯ ಮೇಲೆ ನಿಗಾ ಇರಿಸಿದೆ. ಅಲ್ಲದೇ, ವಿದೇಶದಿಂದ ಆಗಮಿಸಿದ ವ್ಯಕ್ತಿಗಳ ಆರೋಗ್ಯದ ಮೇಲೆಯೂ ಕಣ್ಣಿಟ್ಟಿದೆ.
ಕೊಪ್ಪಳದ ಕೇಂದ್ರಿಯ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ಜನದಟ್ಟಣೆಯ ತಾಣಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಒಟ್ಟಿನಲ್ಲಿ ಕೊಪ್ಪಳ ಜಿಲ್ಲೆಯ ಜನತೆ ಜನತಾ ಕರ್ಪ್ಯೂಗೆ ಅಭೂತಪೂರ್ವವಾಗಿ ಸ್ಪಂದಿಸಿ ಕೋವಿಡ್-19 ವೈರಸ್ ಹೊಡೆದೋಡಿಸಲು ಪಣತೊಟ್ಟಿದ್ದಾರೆ.