ಕುದೂರು: ಮಾಗಡಿ ತಾಲೂಕಿಗೆ ಅಗತ್ಯವಿರುವ ಸೂಪರ್ ಜನತಾ ಬಜಾರ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಸಹಮತ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಕೆ ಧನಂಜಯ ತಿಳಿಸಿದರು.
ತಿಪ್ಪಸಂದ್ರ ಹೋಬಳಿ ಹುಳ್ಳೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರ ಆಯ್ಕೆ ವೇಳೆ ಮಾತನಾಡಿದ ಅವರು, ಮಾಗಡಿ ತಾಲೂಕು ಕೇಂದ್ರದಲ್ಲಿ ಸಹಕಾರಕ್ಕೆ ಸಂಘಕ್ಕೆ ಸೇರಿದ ಜಮೀನಿದೆ. ಆ ಜಮೀನಿನಲ್ಲಿ ಜನತಾ ಬಜಾರ್ ನಿರ್ಮಾಣ ಮಾಡಿ, ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ವಸ್ತುಗಳನ್ನು ತಲುಪಿಸುವ ಚಿಂತನೆ ಇದೆ. ಇದರಿಂದ ತಾಲೂಕಿನ ಎಲ್ಲಾ ವ್ಯವಸಾಯ ಸಹಕಾರ ಸಂಘಗಳ ಒಪ್ಪಿಗೆ ಮತ್ತು ಮಾರ್ಗದರ್ಶನ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ನೂತನ ಅಧ್ಯಕ್ಷರ ಆಯ್ಕೆ: ಹುಳ್ಳೆನಹಳ್ಳಿ ಗ್ರಾಮ ಪಂಚಾಯ್ತಿ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎಚ್.ಎನ್ ಲೋಕೇಶ್ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ವಿಎಸ್‌ಎಸ್‌ಎನ್ ನಿರ್ದೇಶಕರ ಪೈಕಿ ಕೇವಲ ಒಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಚುನಾವಣೆ ನಡೆಸದೆ ಅಧ್ಯಕ್ಷ ಸ್ಥಾನವನ್ನು ಅವಿರೋಧವಾಗಿ ಆಯ್ಕೆ ಮಾಡಿ, ಚುನಾವಣಾ ಅಧಿಕಾರಿ ವೆಂಕಟೇಶ್ ಘೋಷಣೆ ಮಾಡಿದರು.
ನೂತನ ಕಟ್ಟಡ ನಿರ್ಮಾಣ: ನೂತನ ಅಧ್ಯಕ್ಷರಾದ ಎಚ್.ಎಂ. ಲೋಕೇಶ್ ಮಾತನಾಡಿ, ಹುಳ್ಳೇನಹಳ್ಳಿ ಗ್ರಾಮದಲ್ಲಿಯೂ ಕೂಡ ವ್ಯವಸಾಯ ಸಹಕಾರ ಸಂಘದ ವತಿಯಿಂದ ನೂತನ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ಕಟ್ಟಡದ ಕಾಮಗಾರಿ ಅರ್ಧದಷ್ಟು ಮುಗಿದಿದೆ. ಮುಂದಿನ ದಿನಗಳಲ್ಲಿ ಕಟ್ಟಡವನ್ನು ಪೂರ್ಣಗೊಳಿಸಿ, ರೈತರಿಗೆ ಮತ್ತು ಸಹಕಾರದ ಸಂಘದ ಸದಸ್ಯರಿಗೆ ಅನುಕೂಲವಾಗುವ ಚಟುವಟಿಕೆಗಳನ್ನು ಕಟ್ಟಡದಲ್ಲಿ ನಡೆಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ತಾಲೂಕು ಪಂಚಾಯ್ತಿ ಅಧ್ಯಕ್ಷ ಶಿವರಾಜು ಮಾತನಾಡಿದರು. ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ವೆಂಕಟೇಶ್ ಸಹಕಾರ ಸಂಘದ ಚುನಾವಣಾ ನಿಯಮಾವಳಿಗಳನ್ನು ಮಂಡಿಸಿ, ನೂತನ ಅಧ್ಯಕ್ಷರ ಆಯ್ಕೆ ಮಾಡಿದರು. ಈ ವೇಳೆ ಹುಳ್ಳೇನಹಳ್ಳಿ ಸಹಕಾರ ಸಂಘದ ಉಪಾಧ್ಯಕ್ಷ ಚಿಕ್ಕೇಗೌಡ ಹಾಗೂ ನಿರ್ದೇಶಕರಾದ ಗಿರೀಶ್, ಜ್ವಾಲೇಂದ್ರ ಕುಮಾರ್, ಯಲ್ಲಾಪುರದ ಸಿಂಗ್ರಿಗೌಡ, ಮಹಮದ್ ಅಲಿ, ನಾಗರಾಜಯ್ಯ, ಶ್ರೀನಿವಾಸಯ್ಯ, ಸಿದ್ದಯ್ಯ, ನಾರಾಯಣಪ್ಪ, ನಟರಾಜು, ಅಯ್ಯಣ್ಣ, ಲಕ್ಷ್ಮಮ್ಮ, ನರಸಮ್ಮ, ಜಯ್ಯಮ್ಮ, ಆರೀಫ್, ಕೇಬಲ್ ರವಿಕುಮಾರ್, ನಟರಾಜು, ನರಸಮ್ಮ, ಲಕ್ಷ್ಮಮ್ಮ, ಚಂದ್ರಶೇಖರ್ ಹಾಜರಿದ್ದರು.