Advertisement
ಸಂಜೆ 6.20ರ ವೇಳೆಗೆ ಆರಂಭಗೊಂಡ ಮೆರವಣಿಗೆಯು ಸುಮಾರು 7ರ ಹೊತ್ತಿಗೆ ನೆಹರೂ ಮೈದಾನವನ್ನು ತಲುಪಿತು. ಯಾತ್ರೆಯ ತೆರೆದ ಬಸ್‌ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್ ಅವರು ಕಾರ್ಯಕರ್ತರತ್ತ ಕೈ ಬೀಸಿ ಉತ್ಸಾಹ ತುಂಬಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮೆರವಣಿಗೆ ಸಾಗುವ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆ ಪೊಲೀಸರು ಜಮಾಯಿಸಿದ್ದರು. ರಾಹುಲ್ ಆಗಮಿಸುವ ವೇಳೆ ಹೆಚ್ಚಿನ ಕಾರ್ಯಕರ್ತರು ಅವರ ವಾಹನದತ್ತ ಸಾಗಿದಾಗ ಪೊಲೀಸರು ಅವರನ್ನು ಚದುರಿಸಿದರು.
Related Articles
ಮೆರವಣಿಗೆಯ ಸಂದರ್ಭ ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕಾರ್ಯಕರ್ತರು ಚೀಲಗಳಿಗೆ ಕಸವನ್ನು ತುಂಬಿಸುತ್ತಿದ್ದರೂ ಸಾಕಷ್ಟು ಸಂಖ್ಯೆಯಲ್ಲಿ ನೀರಿನ ಬಾಟಲ್‌ಗಳು ರಸ್ತೆಯಲ್ಲಿ ಚೆಲ್ಲಿಕೊಂಡಿತ್ತು. ಜತೆಗೆ ಅಲ್ಲಲ್ಲಿ ಪಕ್ಷದ ಬಾವುಟಗಳೂ ಬಿದ್ದು, ಕೊಂಡಿದ್ದವು. ಒಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಮೆರವಣಿಗೆ ಯಶಸ್ವಿಯಾಗಿತ್ತು.
Advertisement
ವಿಮಾನ ನಿಲ್ದಾಣದಲ್ಲಿ ರಾಹುಲ್‌ಗೆ ಸ್ವಾಗತಮಹಾನಗರ: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿನ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಮಂಗಳವಾರ ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕೆಪಿಸಿಸಿ ಹಾಗೂ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬರಮಾಡಿಕೊಳ್ಳಲಾಯಿತು. ಬೆಳಗ್ಗೆ ಸುಮಾರು 11.30ರ ವೇಳೆಗೆ ಬಂದಿಳಿದ ರಾಹುಲ್ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮೇಯರ್ ಭಾಸ್ಕರ್ ಕೆ. ಸ್ವಾಗತಿಸಿದರು. ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಶಾಸಕ ಜೆ.ಆರ್. ಲೋಬೋ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ. ವೆಂಕಟೇಶ್, ಮೈಸೂರು ವಿಭಾಗ ಉಸ್ತುವಾರಿ ವಿಷ್ಣುನಾಥನ್, ಮನಪಾ ಮುಖ್ಯಸಚೇತಕ ಎಂ. ಶಶಿಧರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ರಾಹುಲ್ ಗಾಂಧಿ ಹೆಲಿಕಾಪ್ಟರ್ ಮೂಲಕ ಕಾಪುಗೆ ತೆರಳಿದರು. ಸಿದ್ದರಾಮಯ್ಯ, ಡಾ| ಪರಮೇಶ್ವರ್, ಕೆ.ಸಿ. ವೇಣುಗೋಪಾಲ್ ಜತೆಯಲ್ಲಿದ್ದರು. ಇದಕ್ಕಿಂತ ಮೊದಲು ಹೆಲಿಕಾಪ್ಟರ್‌ನಲ್ಲಿ ಕೇಂದ್ರ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಕಾಪುಗೆ ತೆರಳಿದ್ದರು. ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಸ್ವಾಗತಿಸಲಾಯಿತು. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಮೇಯರ್ ಭಾಸ್ಕರ್ ಕೆ. ಸ್ವಾಗತಿಸಿದರು. ಜಿ.ಪಂ. ಸಿಇಒ ಡಾ| ಎಂ.ಆರ್. ರವಿ, ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.