Advertisement

“ಜನತಾರಂಗ’ಶೀಘ್ರ ಪ್ರವೇಶಕ್ಕೆ ತಯಾರಿ

06:00 AM Oct 21, 2017 | |

ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಹೊಸ ಪ್ರಯೋಗಗಳ ಪ್ರಯತ್ನ ನಡೆಯುತ್ತಿದ್ದು, ಜೆಡಿಯು ಶರದ್‌ಯಾದವ್‌ ಬಣ “ಜನತಾರಂಗ’ ಸ್ಥಾಪನೆಗೆ ಮುಂದಾಗಿದೆ.

Advertisement

ಸಮಾಜವಾದಿ ಪಕ್ಷ, ಎಡಪಕ್ಷ, ಬಿಎಸ್‌ಪಿ, ಆಮ್‌ಆದ್ಮಿ ಪಕ್ಷ, ಸ್ವರಾಜ್‌ ಅಭಿಯಾನ, ರೈತ ಸಂಘ, ಕನ್ನಡಪರ, ದಲಿತ ಹಾಗೂ ಕಾರ್ಮಿಕ ಸಂಘಟನೆಗಳನ್ನು ಒಂದೇ ಸೂರಿನಡಿ ತಂದು, “ಜನತಾರಂಗ’ ಅಸ್ತಿತ್ವಕ್ಕೆ ವೇದಿಕೆ ಸಿದ್ಧಗೊಂಡಿದೆ. ರಾಜ್ಯದಲ್ಲಿ ಸದ್ಯ ಚದುರಿ ಹೋಗಿ ರುವ ಜನತಾ ಪರಿವಾರದ ನಾಯಕರನ್ನು ಜತೆ ಗೂಡಿಸುವ ಪ್ರಯತ್ನವೂ ಇದರ ಹಿಂದೆ ಇದೆ ಎನ್ನುವುದು ಗಮನಾರ್ಹ ಅಂಶ. ಇತ್ತೀಚೆಗಷ್ಟೇ ಜೆಡಿಯು ಶರದ್‌ಯಾದವ್‌ ಬಣ ಸೇರ್ಪಡೆಯಾಗಿರುವ ಮಾಜಿ ಸಂಸದ ಪಿ. ಕೋದಂಡರಾಮಯ್ಯ, ಜೆಡಿಯು ರಾಜ್ಯಾಧ್ಯಕ್ಷ ಎಂ.ಪಿ.ನಾಡಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಜಿಕೆಸಿ ರೆಡ್ಡಿ ಇಂಥದ್ದೊಂದು ಪ್ರಯೋಗಕ್ಕೆ ಚಾಲನೆ ನೀಡಿದ್ದಾರೆ. ಸಮಾಜವಾದಿ ಪಕ್ಷ, ರೈತ ಸಂಘ ಹಾಗೂ ಕನ್ನಡಪರ ಸಂಘಟನೆಗಳ ಜತೆ ಸಮಾಲೋಚನೆಯನ್ನೂ ನಡೆಸುತ್ತಿದ್ದಾರೆ.

ಬಿಹಾರದಲ್ಲಿನ ವಿದ್ಯಮಾನಗಳ ನಂತರ ನಿತೀಶ್‌ಕುಮಾರ್‌ ಅವರಿಂದ ದೂರವಾಗಿರುವ ಶರದ್‌ಯಾದವ್‌ ತಮ್ಮದೇ ಆದ ಪ್ರತ್ಯೇಕ ಬಣ ಮಾಡಿಕೊಂಡು ಕಾಂಗ್ರೆಸ್‌, ಎಸ್‌ಪಿ, ಆರ್‌ಜೆಡಿ, ಎಡಪಕ್ಷ, ಡಿಎಂಕೆ, ಟಿಎಂಸಿ ಪಕ್ಷಗಳ ಜತೆ ಪರ್ಯಾಯ ರಂಗ ಸ್ಥಾಪನೆ ಪ್ರಯತ್ನ ನಡೆಸುತ್ತಿದ್ದು, ಕರ್ನಾಟಕದಲ್ಲೂ “ಜನತಾರಂಗ’ ವೇದಿಕೆ ಸ್ಥಾಪಿಸಿ ಸಮಾನ ಮನಸ್ಕ, ಪ್ರಗತಿಪರ ಸಂಘಟನೆಗಳ ಜತೆಗೂಡಿ ಚುನಾವಣೆಗೆ ಸಮರ್ಥ ಅಭ್ಯರ್ಥಿಗಳ ಪಡೆ ರಚಿಸುವಂತೆ ಸೂಚನೆ ನೀಡಿದ್ದಾರೆ. ಅದರಂತೆ, ಜನತಾರಂಗ ಸ್ಥಾಪನೆ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ.

ಸಕ್ರಿಯ ರಾಜಕಾರಣದಿಂದ ದೂರ ಇರುವ ಪಿ.ಜಿ.ಆರ್‌.ಸಿಂಧ್ಯಾ, ಮಾಜಿ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಪುತ್ರ ಮಹಿಮಾ ಪಟೇಲ್‌ ಸೇರಿದಂತೆ ಜನತಾಪರಿವಾರದ ನಾಯಕರನ್ನು ಜನತಾರಂಗದತ್ತ ಸೆಳೆಯಲು ಈಗಾಗಲೇ ಎರಡು-ಮೂರು ಸುತ್ತು ಮಾತುಕತೆ ಸಹ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕನಿಷ್ಠ 50 ಕ್ಷೇತ್ರಗಳಲ್ಲಿ ಪ್ರಬಲ ಹಾಗೂ ಸ್ಥಳೀಯವಾಗಿ ವರ್ಚಸ್ಸು ಇರುವ ಜನಪರ ಹೋರಾಟ ಮಾಡುವ ನಾಯಕರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸುವುದು “ಜನತಾರಂಗ’ ಸ್ಥಾಪನೆಯ ಉದ್ದೇಶವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಶರದ್‌ಯಾದವ್‌ ಜತೆ ಎಚ್‌.ಡಿ.ದೇವೇಗೌಡರು ಗುರುತಿಸಿಕೊಂಡಿರುವುದರಿಂದ ರಾಜ್ಯದಲ್ಲಿ ಜೆಡಿಎಸ್‌ ಜತೆಗೂ ಮೈತ್ರಿ ಮಾಡಿಕೊಳ್ಳುವ ಅವಕಾಶ ಮುಕ್ತವಾಗಿರಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

Advertisement

ಜೆಡಿಎಸ್‌ಗೆ ಇಷ್ಟವಿಲ್ಲ: ಆದರೆ, ಜೆಡಿಎಸ್‌ಗೆ ರಾಜ್ಯದಲ್ಲಿ ಜೆಡಿಯು ಶರದ್‌ಬಣದ ಜತೆ ಗುರುತಿಸಿಕೊಳ್ಳಲು  ಇಷ್ಟವಿಲ್ಲ. ರಾಜ್ಯದಲ್ಲಿ ಜೆಡಿಯು ಶಕ್ತಿಯುತವಾಗಿ ಇಲ್ಲ, ಹೀಗಿರುವಾಗ ಜತೆಗೂಡಿದರೆ ಏನು ಲಾಭ ? ಎಂಬ ಪ್ರಶ್ನೆ ಜೆಡಿಎಸ್‌ನದು.ಈಗಾಗಲೇ ಪ್ರತ್ಯೇಕವಾಗಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಾಗಿ ಜೆಡಿಎಸ್‌ ಹೇಳಿದೆಯಾದರೂ ಅನಿವಾರ್ಯತೆ ಎದುರಾದರೆ ಎಡಪಕ್ಷಗಳು, ಬಿಎಸ್‌ಪಿ ಹಾಗೂ ಪ್ರಮುಖ ಕನ್ನಡಪರ ಸಂಘಟನೆಯೊಂದರ ಜತೆ ಸೀಮಿತ ಕ್ಷೇತ್ರಗಳ ಮಟ್ಟಿಗೆ ಮೈತ್ರಿ ಮಾಡಿಕೊಳ್ಳಬಹುದಾ ಎಂಬ ಚಿಂತನೆಯಲ್ಲಿದೆ ಎಂದು ಹೇಳಲಾಗಿದೆ.

ಹೊಸ ಪಕ್ಷಗಳ ಪರ್ವ
ರಾಜ್ಯದಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಜತೆಗೆ ಒಂದೆಡೆ ನಟ ಉಪೇಂದ್ರ ಹಾಗೂ ಮತ್ತೂಂದೆಡೆ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಹೊಸ ಪಕ್ಷ ಸ್ಥಾಪನೆ ಘೋಷಣೆ ಮಾಡಿದ್ದಾರೆ. ಅತ್ತ ಎಸ್‌ಡಿಪಿಐ ಸಹ 50 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಸಜ್ಜಾಗುತ್ತಿದೆ. ಇದರ ನಡುವೆ ಇದೀಗ ಜೆಡಿಯು ಶರದ್‌ಯಾದವ್‌ ಬಣ “ಜನತಾರಂಗ’ ಸ್ಥಾಪನೆಗೆ ಮುಂದಾಗಿದೆ. ಒಟ್ಟಾರೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಮತ್ತೂಮ್ಮೆ ಹೊಸ ಪ್ರಯೋಗಗಳಿಗೆ ವೇದಿಕೆಯಾಗುವುದಾ ಎನ್ನುವುದನ್ನು ಕಾದು ನೋಡಬೇಕಿದೆ.

ಸಮಾನ ಮನಸ್ಕ ಪಕ್ಷ, ಸಂಘಟನೆಗಳನ್ನು ಜತೆಗೂಡಿಸಿಕೊಂಡು “ಜನತಾರಂಗ’ ಸ್ಥಾಪನೆಗೆ ಚಾಲನೆ ನೀಡಲಾಗಿದೆ. ರೈತಸಂಘ, ಸಮಾಜವಾದಿ ಪಕ್ಷ ಸೇರಿ ಹಲವಾರು ನಾಯಕರ ಜತೆ ಈಗಾಗಲೇ ಹಲವು ಪೂರ್ವಭಾವಿ ಸಭೆಗಳೂ ನಡೆದಿವೆ. ಕೆಲವು ಹಾಲಿ ಹಾಗೂ ಮಾಜಿ ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ. ಜನವರಿ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆಗಳು ನಡೆಯಲಿವೆ.
– ಜಿ.ಕೆ.ಸಿ.ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಜೆಡಿಯು ಶರದ್‌ಯಾದವ್‌ ಬಣ.

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next