Advertisement

ಆಡಿಯೋ ಪ್ರಕರಣ: ತನಿಖೆ ಯಾವುದೇ ಇರಲಿ; ಸಂಶಯ ನಿವಾರಿಸಿ

04:26 AM Feb 15, 2019 | |

ಮಂಗಳೂರು: ಆಪರೇಷನ್‌ ಕಮಲ ಕುರಿತ ಆಡಿಯೋ ಬಗ್ಗೆ ಎಸ್‌ಐಟಿ ಅಥವಾ ಯಾವುದೇ ರೀತಿಯಲ್ಲಾದರೂ ತನಿಖೆ ನಡೆಸಿ ಜನರನ್ನು ಕಾಡುತ್ತಿರುವ ಸಂಶಯವನ್ನು ನಿವಾರಿಸಬೇಕು. ಈ ಬಗ್ಗೆ ಸದನದಲ್ಲಿಯೇ ತೀರ್ಮಾನ ನಡೆಯಲಿ ಎಂದು ಬಿ. ಜನಾರ್ದನ ಪೂಜಾರಿ ಹೇಳಿದರು.

Advertisement

ಮಂಗಳೂರಿನಲ್ಲಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಯಡಿಯೂರಪ್ಪ ಇನ್ನಾದರೂ ಆಪರೇಷನ್‌ ಕಮಲ ಕೈಬಿಡುವುದು ಒಳಿತು. ಅವರ ನಿಲುವಿನಿಂದಾಗಿ ಜನರಿಗೆ ಅವರ ಮೇಲೆ ಕೆಟ್ಟ ಅಭಿಪ್ರಾಯ ಮೂಡಿದೆ. ಇನ್ನಾದರೂ ಜನರ ಕ್ಷಮೆ ಕೇಳಿ ತಪ್ಪೊಪ್ಪಿಕೊಳ್ಳಲಿ. ಇಲ್ಲವಾದರೆ ಬಿಜೆಪಿಯೇ ಧ್ವಂಸವಾಗಲಿದೆ ಎಂದರು.

ಹಾಗಾದರೆ ಬಿಜೆಪಿಗೆ ಧಕ್ಕೆ ಆಗಕೂಡದು ಎಂಬುದು ನಿಮ್ಮ ಕಳಕಳಿಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪೂಜಾರಿ, ಯಾರಿಗೂ ಆಪರೇಷನ್‌ ಕಮಲ ದಂತಹ ಬುದ್ಧಿ ಬರಬಾರದು. ಬಿ.ಎಸ್‌. ಯಡಿಯೂರಪ್ಪ ಅವರು 
ಇನ್ನಾದರೂ ಈ ಯೋಚನೆಯನ್ನು ಬಿಟ್ಟುಬಿಡಲಿ ಎಂಬುದು ನನ್ನ ಕಳಕಳಿ ಎಂದರು.

ದೇವರು ನೋಡುತ್ತಾನೆ
ದೇವೇಗೌಡರ ಬಗ್ಗೆ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪೂಜಾರಿ, ಅಂತಹ ಮಾತುಗಳನ್ನು ದೇವರು ಕೂಡ ಮೆಚ್ಚಲಾರ. ಅದು ಯಾರಿಗೂ ಶೋಭೆ ತರುವುದಿಲ್ಲ. ಈ ಬಗ್ಗೆ ಜೆಡಿಎಸ್‌ ಕಾರ್ಯಕರ್ತರು ಕಲ್ಲು ತೂರಾಟದಂತಹ ಕೃತ್ಯಕ್ಕೆ ಮುಂದಾಗಬಾರದು. ಎಲ್ಲವನ್ನು ದೇವರು ನೋಡುತ್ತಾನೆ ಎಂದರು.

ಸಿದ್ದರಾಮಯ್ಯ ವಿರುದ್ಧ ಈ ಹಿಂದಿನಂತೆ ಕಿಡಿಕಾರಿದ ಜನಾರ್ದನ ಪೂಜಾರಿ, ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷಕ್ಕೆ ಶನಿ ಇದ್ದಂತೆ. ಅವರಿಗೆ ಯಾವಾಗ ಬುದ್ಧಿ ಬರುತ್ತದೋ ಗೊತ್ತಿಲ್ಲ ಎಂದರು.
ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು. 

Advertisement

ಮೋದಿ ಸತ್ಕಾರ್ಯ
ಪ್ರಧಾನಿ ನರೇಂದ್ರ ಮೋದಿ ಅವರಿಂದ ಒಳ್ಳೆಯ ಕೆಲಸಗಳಾಗಿವೆ. ಆಗಿರುವ ಕೆಲಸಗಳ ಬಗ್ಗೆ ಇಲ್ಲ ಎಂದು ಹೇಳಲಾಗದು. ಒಳ್ಳೆಯದಾದರೆ ದೇಶಕ್ಕೇ ಒಳ್ಳೆಯದಾಗುತ್ತದೆ. ಹಾಗೆಂದು ಕೆಟ್ಟ ಕೆಲಸಗಳಾದರೆ ಮೋದಿಯವರನ್ನು ನಾನೇ ಟೀಕಿಸುತ್ತೇನೆ ಎಂದು ಜನಾರ್ದನ ಪೂಜಾರಿ ಹೇಳಿದರು. “ಮುಂದಿನ ಪ್ರಧಾನಿಯಾರಾಗಲಿದ್ದಾರೆ’? ಎಂಬ ಸುದ್ದಿಗಾರರ ಪ್ರಶ್ನೆಗೆ “ಯಾರ ಹಣೆಯಲ್ಲಿ ಬರೆದಿದೆಯೋ ಅವರು ಪ್ರಧಾನಿ ಆಗುತ್ತಾರೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next